PM Narendra Modi: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಇಂದಿನಿಂದ ಪ್ರತಿ ಮನೆಯಲ್ಲೂ ರಾರಾಜಿಸಲಿದೆ ತಿರಂಗ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ಆಗಸ್ಟ್ 15ರ ವರೆಗೆ ಕೋಟ್ಯಾಂತರ ದೇಶವಾಸಿಗಳ ಮನೆಯಲ್ಲಿ ರಾಷ್ಟ್ರಧ್ವಜ ಹಾರಲಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ಆ.13ರಿಂದ 15ರ ವರೆಗೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮನವಿ ಮಾಡಿಕೊಂಡಿದ್ದರು.
ಇನ್ನೆರಡು ದಿನಗಳಲ್ಲಿ ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳು ತುಂಬುತ್ತವೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ಒಂದು ಭಾಗವಾಗಿ ಇಂದಿನಿಂದ (ಆ.13) ಆಗಸ್ಟ್ 15ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸರ್ಕಾರದ ಹರ್ ಘರ್ ತಿರಂಗಾ ಉಪಕ್ರಮದ ಭಾಗವಾಗಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ಭಾರತೀಯರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮನವಿ ಮಾಡಿದ್ದರು. ಅದರಂತೆ ಇಂದಿನಿಂದ ಒಟ್ಟು ಮೂರು ದಿನಗಳ ಕಾಲ ಕೋಟ್ಯಾಂತರ ದೇಶವಾಸಿಗಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜನವನ್ನು ಹಾರಿಸಲಿದ್ದಾರೆ.
ರಾಷ್ಟ್ರಧ್ವಜ ಹಾರಿಸಿ ಸ್ಥಳವನ್ನು ಪಿನ್ ಮಾಡಿ
ಭಾರತ ಸರ್ಕಾರದ ಹರ್ ಘರ್ ತಿರಂಗಾಕ್ಕಾಗಿ ಕೆಲಸ ಮಾಡುತ್ತಿರುವ ಕಂಪನಿ ಟ್ಯಾಗ್‌ಬಿನ್ ವೆಬ್ಸೈಟ್ ಅನ್ನು ಪ್ರಾರಂಭಿಸಿದೆ. ಇದರ ಮುಖ್ಯ ಉದ್ದೇಶವೆಂದರೆ ಧ್ವಜ ಹಾರಿಸಿ ಸ್ಥಳವನ್ನು ಪಿನ್ ಮಾಡುವುದು. ಹೇಗೆ? https://harghartiranga.com/ ವೆಬ್ಸೈಟ್ಗೆ ಭೇಟಿ ಕೊಟ್ಟು ಅಲ್ಲಿ ನೀಡಲಾದ ಹಂತಗಳನ್ನು ಪಾಲಿಸಿ. ಈ ವೆಬ್ಸೈಟ್ ಮೂಲಕ ಧ್ವಜದೊಂದಿಗೆ ಸೆಲ್ಫಿ ತೆಗೆದು ಅಪ್ಲೋಡ್ ಕೂಡ ಮಾಡಬಹುದಾಗಿದೆ. ಈ ವರೆಗೆ 3,59,38,813 ಮಂದಿ ಧ್ವಜ ಹಾರಿಸಿ ಸ್ಥಳವನ್ನು ಪಿನ್ ಮಾಡಿದ್ದು, 11,44,3691 ಮಂದಿ ಧ್ವಜದೊಂದಿಗೆ ಸೆಲ್ಫಿ ತೆಗೆದು ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ವೆಬ್ಸೈಟ್ ಮೂಲಕ 5 ಕೋಟಿ ಪಿನ್‌ಗಳನ್ನು ತಲುಪುವ ಗುರಿ ಹೊಂದಲಾಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು?
ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ಸರಣಿ ಟ್ವೀಟ್ಗಳನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಈ ವರ್ಷ ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ನಾವು ಹರ್ ಘರ್ ತಿರಂಗ ಚಳವಳಿಯನ್ನು ಬಲಪಡಿಸೋಣ. ತ್ರಿವರ್ಣ ಧ್ವಜವನ್ನು ಹಾರಿಸಿ ಅಥವಾ ನಿಮ್ಮ ಮನೆಗಳಲ್ಲಿ ಆಗಸ್ಟ್ 13 ಮತ್ತು 15 ರ ನಡುವೆ ಪ್ರದರ್ಶಿಸಿ” ಎಂದು ಕರೆಕೊಟ್ಟಿದ್ದರು.
ಈ ಸರಣಿ ಟ್ವೀಟ್ಗಳ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವತಂತ್ರ ಭಾರತದ ಧ್ವಜದ ಕನಸು ಕಂಡವರೆಲ್ಲರ ಶ್ರಮವನ್ನು ಸ್ಮರಿಸಿದ ಮೋದಿ, “ಇಂದು, ಜುಲೈ 22 ನಮ್ಮ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. 1947 ರಲ್ಲಿ ಈ ದಿನದಂದು ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಲಾಯಿತು. ನಮ್ಮ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರೂ ಅವರು ಹಿಡಿದ ಮೊದಲ ತ್ರಿವರ್ಣ ಧ್ವಜ ಸೇರಿದಂತೆ ಇತಿಹಾಸದಿಂದ ಕೆಲವು ಆಸಕ್ತಿದಾಯಕ ಹೆಜ್ಜೆಗಳನ್ನು ಹಂಚಿಕೊಳ್ಳುವುದು” ಎಂದು ಹೇಳಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Published On - 8:02 am, Sat, 13 August 22