Narendra Modi: ಸೆ. 23ರಿಂದ 3 ದಿನ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಜೋ ಬೈಡನ್ ಜೊತೆ ಭೇಟಿ
ಸೆಪ್ಟೆಂಬರ್ 23ರಂದು ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಆ್ಯಪಲ್ ಸಿಇಓ ಟೀಮ್ ಕುಕ್ ಸೇರಿದಂತೆ ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆ. 23ರಿಂದ ಮೂರು ದಿನಗಳ ಕಾಲ ಆಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಮಾತುಕತೆ ನಡೆಸುವರು. ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅಮೆರಿಕಾ ಭೇಟಿಯ ವಿಶೇಷತೆಗಳೇನು? ಎನ್ನುವುದರ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.
ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ವೇಳೆಯಲ್ಲೇ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಈಗ ಮತ್ತೆ ಪ್ರಧಾನಿ ಮೋದಿ ವಿದೇಶ ಪ್ರವಾಸ ಆರಂಭವಾಗುತ್ತಿದೆ. ಇಡೀ ವಿಶ್ವವನ್ನೇ ಕೊರೊನಾ ಆವರಿಸಿದ್ದರಿಂದ ಮೋದಿ, ವಿದೇಶಗಳಿಗೆ ಭೇಟಿ ನೀಡುವುದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಈಗ ಕೊರೊನಾದ ಕಾಟ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ, ಪ್ರಧಾನಿ ಮೋದಿ ವಿದೇಶ ಪ್ರವಾಸ ಆರಂಭವಾಗುತ್ತಿದೆ. ಈಗ ಪ್ರಧಾನಿ ಮೋದಿ ಅಮೆರಿಕಾಕ್ಕೆ ಭೇಟಿ ನೀಡುವುದು ನಿಗದಿಯಾಗಿದೆ. ಸೆಪ್ಟೆಂಬರ್ 23 ರಿಂದ 3 ದಿನಗಳ ಕಾಲ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 22ರ ತಡರಾತ್ರಿಯೇ ನರೇಂದ್ರ ಮೋದಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ತಲುಪಲಿದ್ದಾರೆ.
ಸೆಪ್ಟೆಂಬರ್ 23ರಂದು ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಆ್ಯಪಲ್ ಸಿಇಓ ಟೀಮ್ ಕುಕ್ ಸೇರಿದಂತೆ ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳ ಸಿಇಓಗಳನ್ನು ಆಹ್ವಾನಿಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು. ಬಳಿಕ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಕಮಲಾ ಹ್ಯಾರಿಸ್, ಭಾರತ ಮೂಲದವರು. ಹೀಗಾಗಿ ತಮ್ಮ ಆಡಳಿತಾವಧಿಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳನ್ನು ಜಾರಿಗೆ ತರಬೇಕೆಂದು ಕಮಲಾ ಹ್ಯಾರಿಸ್ ಜೊತೆಗೆ ನರೇಂದ್ರ ಮೋದಿ ಚರ್ಚೆ ನಡೆಸುವರು. ಬಳಿಕ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ಮಾತುಕತೆ ನಡೆಸುವರು.
ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡುವರು. ಶ್ವೇತ ಭವನದಲ್ಲಿ ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ಮುಖಾಮುಖಿ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವರು. ಈ ಸಭೆಯಲ್ಲೇ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್, ಜಪಾನ್ ಪ್ರಧಾನಿ ಯೋಗಶಿಧೆ ಸುಗಾ ಪಾಲ್ಗೊಳ್ಳುವರು. ಏಷ್ಯಾ ಹಾಗೂ ಇಂಡೋ-ಫೆಸಿಫಿಕ್ನಲ್ಲಿ ಚೀನಾದ ಪ್ರಾಬಲ್ಯ ತಡೆಯುವ ಉದ್ದೇಶದಿಂದ ನಾಲ್ಕು ರಾಷ್ಟ್ರಗಳು ಸೇರಿ ಕ್ವಾಡ್ ಒಕ್ಕೂಟ ರಚಿಸಿಕೊಂಡಿವೆ. ಇದರಲ್ಲಿ ಭದ್ರತೆ ಮಾತ್ರವಲ್ಲದೆ, ಉಳಿದ ವಿಷಯಗಳ ಬಗ್ಗೆ ಪರಸ್ಪರ ಸಹಕಾರದ ಬಗ್ಗೆಯೂ ಚರ್ಚೆ ನಡೆಯಲಿದೆ. ಕೊರೊನಾ ಲಸಿಕೆಯನ್ನು ಕ್ವಾಡ್ ರಾಷ್ಟ್ರಗಳ ನಡುವೆ ಹಂಚಿಕೆ, ಸೈಬರ್ ಭದ್ರತೆ, ಸಾಗರ ಭದ್ರತೆ, ರಕ್ಷಣಾ ಸಹಕಾರ, ಅಫ್ಘನಿಸ್ತಾನದ ಬಿಕ್ಕಟ್ಟು, ಹವಾಮಾನ ಬಿಕ್ಕಟ್ಟು, ತಂತ್ರಜ್ಞಾನ ಸಹಕಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನಾಲ್ಕು ರಾಷ್ಟ್ರಗಳು ಚರ್ಚೆ ನಡೆಸಲಿವೆ. ಚೀನಾದ ಪಾರುಪತ್ಯಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಮಹತ್ವದ ಚರ್ಚೆ ನಡೆಯಲಿದೆ. ಕ್ವಾಡ್ ರಾಷ್ಟ್ರಗಳ ಸಭೆಯ ಬಳಿಕ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಚರ್ಚೆ ನಡೆಸುವರು. ಜೋ ಬೈಡೆನ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಮೊದಲ ಭಾರಿಗೆ ಮುಖಾಮುಖಿಯಾಗಿ ಮೋದಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಮಾತುಕತೆ ನಡೆಸುವರು. ಇದುವರೆಗೂ ಜೋ ಬೈಡೆನ್-ನರೇಂದ್ರ ಮೋದಿ ಪೋನ್ನಲ್ಲಿ ಮಾತನಾಡಿದ್ದಾರೆ.
ಈಗ ಮೋದಿ ಅಮೆರಿಕಾ ಪ್ರವಾಸದ ವೇಳೆ ಇಬ್ಬರೂ ನಾಯಕರು ಶ್ವೇತ ಭವನದಲ್ಲಿ ಮುಖಾಮುಖಿಯಾಗಿ ಮಹತ್ವದ ಮಾತುಕತೆ ನಡೆಸುವರು. 2014ರಲ್ಲಿ ಜೋ ಬೈಡೆನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಆಗ ಬರಾಕ್ ಒಬಾಮಾ ಆಳ್ವಿಕೆಯಲ್ಲಿ ಜೋ ಬೈಡೆನ್ ಉಪಾಧ್ಯಕ್ಷರಾಗಿದ್ದರು. ಈಗ ಜೋ ಬೈಡೆನ್ ಅಮೆರಿಕಾದ ಅಧ್ಯಕ್ಷ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮೂರನೇ ಅಮೆರಿಕಾ ಅಧ್ಯಕ್ಷರ ಜೊತೆಗೆ ಸಭೆ ನಡೆಸುವರು. ಸೆಪ್ಟೆಂಬರ್ 24ರ ರಾತ್ರಿಯೇ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರಿಗೆ ಜೋ ಬೈಡೆನ್ ಔತಣ ಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ಮೋದಿ, ನ್ಯೂಯಾರ್ಕ್ ನತ್ತ ಪ್ರಯಾಣ ಬೆಳೆಸಲಿದ್ದಾರೆ.
ಸೆಪ್ಟಂಬರ್ 25ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವರು. ಸೆೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರು. 2019ರಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಖುದ್ದಾಗಿ ಹೋಗಿ ಭಾಗವಹಿಸಿದ್ದರು. 2020ರಲ್ಲಿ ಕೊರೊನಾದ ಕಾರಣದಿಂದ ವರ್ಚುವಲ್ ಆಗಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದಿಂದಲೇ ಮಾತನಾಡಿದ್ದರು. ಈಗ ಖುದ್ದಾಗಿ ಹೋಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ನೀಡುವ ಬೇಡಿಕೆಯನ್ನು ಮತ್ತೊಮ್ಮೆ ಮಂಡಿಸುವ ನಿರೀಕ್ಷೆ ಇದೆ.
ಇನ್ನೂ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಗೆ ತೆರಳಲು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲಾಗುತ್ತದೆ. ಪ್ರಧಾನಿಯ ಏರ್ ಇಂಡಿಯಾ ಒನ್ ಬೋಯಿಂಗ್ 777-300 ಇಆರ್ ವಿಮಾನವು ಪಾಕ್ ವಾಯುಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ತಾನ ಸರ್ಕಾರದ ಅನುಮತಿ ಕೇಳಲಾಗಿದೆ.
ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ನಿಂದ ಎಂಟು ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುತ್ತಿದೆ. ಭಾರತದಲ್ಲಿ ಈಗ ಕಾರ್ಗಳ ಉತ್ಪಾದನೆಗೆ ಬೇಕಾದ ಸೆಮಿ ಕಂಡಕ್ಟರ್ಗಳ ಕೊರತೆ ಇದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ವಾಡ್ ಸದಸ್ಯ ರಾಷ್ಟ್ರಗಳ ನಡುವೆ ಚರ್ಚೆ ನಡೆಯಲಿದೆ. ಅಮೆರಿಕಾದ ಜೋ ಬೈಡೆನ್ ಆಡಳಿತವು ಭಾರತದೊಂದಿಗೆ ಉತ್ತಮ ಭಾಂಧವ್ಯ ಹೊಂದಲು ಬಯಸುತ್ತದೆ. ಈ ನಿಟ್ಟಿನಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ನೇರವಾಗಿ ಮೋದಿ ಜೊತೆಗೆ ಚರ್ಚೆ ನಡೆಸುವರು.
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಈಗಾಗಲೇ ನ್ಯೂಯಾರ್ಕ್ ತಲುಪಿದ್ದಾರೆ. ಜಿ-4 ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬ್ರೆಜಿಲ್, ಜರ್ಮನಿ, ಜಪಾನ್ ಹಾಗೂ ಭಾರತ ದೇಶಗಳು ಜಿ-4 ರಾಷ್ಟ್ರಗಳಾಗಿವೆ. ಜೊತೆಗೆ ಇಂಗ್ಲೆಂಡ್‌ನ ಹೊಸ ವಿದೇಶಾಂಗ ಕಾರ್ಯದರ್ಶಿ ಟ್ರಾಸ್ ಜೊತೆಗೂ ಇಂಗ್ಲೆಂಡ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಲಸಿಕೆ ಹಾಗೂ ಕ್ವಾರಂಟೈನ್ ನಿಯಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೆಪ್ಟೆಂಬರ್ 22ರಂದು ಜಿ-20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್ ಭಾಗವಹಿಸುವರು. ಅಫ್ಘನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಜಿ-20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಚರ್ಚೆಯಾಗಲಿದೆ.
(PM Narendra Modi Visiting United States on Sep 23 America President Meeting Joe Biden on Agenda)
Published On - 6:29 pm, Tue, 21 September 21