ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಇಂದು ತಮಿಳುನಾಡಿನಲ್ಲಿ 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ (CICT) ನೂತನ ಕ್ಯಾಂಪಸ್ನ್ನು ಇಂದು ಉದ್ಘಾಟಿಸಲಿದ್ದಾರೆ. ಈ ಸಿಐಸಿಟಿ ಇದ್ದಿದ್ದು ಚೆನ್ನೈನಲ್ಲಿ. ಅಂದಹಾಗೆ ಈ 11 ವೈದ್ಯಕೀಯ ಕಾಲೇಜುಗಳು ಮತ್ತು ಸಿಐಸಿಟಿ ಕ್ಯಾಂಪಸ್ ಉದ್ಘಾಟನೆ ಕಾರ್ಯಕ್ರಮ ಸಂಜೆ 4ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ತಿಳಿಸಿದೆ. ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಿಳುನಾಡಿನ ಸಂಸ್ಕೃತಿ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಅಂಥ ಸಂಸ್ಕೃತಿಯನ್ನು ಉಳಿಸಿ, ಆಚರಿಸಲು ನಮ್ಮ ಪ್ರಯತ್ನ ನಿರಂತರವಾಗಿ ಸಾಗುತ್ತಿರುತ್ತದೆ. ಅದರ ಒಂದು ಭಾಗವಾಗಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ ಹೊಸ ಕ್ಯಾಂಪಸ್ ಉದ್ಘಾಟನೆಯಾಗುತ್ತಿದೆ ಎಂದು ಹೇಳಿದ್ದರು.
The culture of Tamil Nadu is globally admired. It is our constant endeavour to preserve and celebrate this culture. In this context, a new campus of Central Institute of Classical Tamil will also be inaugurated tomorrow. pic.twitter.com/87daGizJFO
— Narendra Modi (@narendramodi) January 11, 2022
ಇನ್ನು ರಾಜ್ಯಾದ್ಯಂತ 11 ವೈದ್ಯಕೀಯ ಕಾಲೇಜುಗಳನ್ನು ಸುಮಾರು 4ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಾಗಿದೆ. ಅದರಲ್ಲಿ 2415 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಕೊಟ್ಟಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಿದೆ. ನೀಲಗಿರಿ, ತಿರುವಳ್ಳೂರು, ನಾಗಪಟ್ಟಣಂ, ನಾಮಕ್ಕಲ್, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ, ಕೃಷ್ಣಗಿರಿ, ತಿರುಪ್ಪೂರ್ ಮತ್ತು ವಿರುದುನಗರ ಜಿಲ್ಲೆಗಳಲ್ಲಿ ಒಂದೊಂದು ವೈದ್ಯಕೀಯ ಕಾಲೇಜು ನಿರ್ಮಾಣವಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗಿದೆ. ಈ ಕಾಲೇಜುಗಳಲ್ಲಿ 1450 ಸೀಟ್ಗಳು ಇರಲಿವೆ. ಈ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಸರ್ಕಾರದ ಜಿಲ್ಲೆ/ರೆಫರೆಲ್ ಆಸ್ಪತ್ರೆ ಸ್ಕೀಮ್ನಲ್ಲಿ ನಿರ್ಮಿಸಲಾಗಿದೆ. ಎಲ್ಲೆಲ್ಲಿ ಸರ್ಕಾರಿ ಅಥವಾ ಖಾಸಗಿಯ ಯಾವುದೇ ವೈದ್ಯಕೀಯ ಕಾಲೇಜು ಇಲ್ಲವೋ, ಆ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
ಇನ್ನು ಸಿಐಸಿಟಿಯ ಹೊಸ ಕ್ಯಾಂಪಸ್ಗೆ ಕೇಂದ್ರ ಸರ್ಕಾರವೇ ಪೂರ್ಣ ಅನುದಾನ ನೀಡಿದ್ದು, ಇದು 24 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೂರು ಮಹಡಿಗಳನ್ನು ಹೊಂದಿದ್ದು, ವಿಶಾಲವಾದ ಗ್ರಂಥಾಲಯವಿದೆ. ಸೆಮಿನಾರ್ ಹಾಲ್‌ಗಳು, ಮಲ್ಟಿಮೀಡಿಯಾ ಹಾಲ್ ಮತ್ತು ಇ-ಲೈಬ್ರರಿಯನ್ನೂ ಹೊಂದಿದೆ. ಈ ಕ್ಯಾಂಪಸ್ನ್ನು ಭಾರತೀಯ ಪರಂಪರೆ ರಕ್ಷಿಸಲು ಮತ್ತು ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಈ ಸಿಐಸಿಟಿಯು ತಮಿಳು ಭಾಷೆಯ ಪ್ರಾಚೀನತೆ, ಅನನ್ಯತೆಯ ಬಗ್ಗೆ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತದೆ. ಇಲ್ಲಿ 45 ಸಾವಿರಕ್ಕೂ ಅಧಿಕ ಪ್ರಾಚೀನ ತಮಿಳು ಪುಸ್ತಕಗಳ ಸಂಗ್ರಹವಿದೆ. ಇದು ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೂಡ ನೀಡುತ್ತದೆ.
ಇದನ್ನೂ ಓದಿ: ರಾಯಚೂರು: ಅಧಿಕಾರಿಗಳ ವರ್ತನೆ ವಿರುದ್ಧ ನರ್ಸಿಂಗ್ ವಿದ್ಯಾರ್ಥಿನಿಯರ ಅಹೋರಾತ್ರಿ ಪ್ರತಿಭಟನೆ