ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು: ಪ್ರಧಾನಿ ನರೇಂದ್ರ ಮೋದಿ

|

Updated on: Sep 10, 2023 | 6:48 PM

India France at G20: ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಮ್ಯಾಕ್ರೋನ್ ಅವರೂ ಕೂಡ ಟ್ವೀಟ್ ಮಾಡಿದ್ದು, ಜಿ20 ಶೃಂಗಸಭೆಯ ಥೀಮ್ ಆದ ವಸುದೈವ ಕುಟುಂಬಕಂ ಅನ್ನು ಪ್ರಸ್ತಾಪಿಸಿದ್ದಾರೆ. ಭೂಮಿ ಒಂದು, ಕುಟುಂಬ ಒಂದು, ಭವಿಷ್ಯ ಒಂದು ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು: ಪ್ರಧಾನಿ ನರೇಂದ್ರ ಮೋದಿ
ಇಮ್ಯಾನುಯಲ್ ಮ್ಯಾಕ್ರೋನ್, ನರೇಂದ್ರ ಮೋದಿ
Follow us on

ನವದೆಹಲಿ, ಸೆಪ್ಟೆಂಬರ್ 10: ಜಿ20 ಶೃಂಗಸಭೆಯ (G20 Summit) ಮುಕ್ತಾಯದ ಬಳಿಕ ನಡೆದ ಭೋಜನಕೂಟ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಭೇಟಿಯಾಗಿ ಮಾತನಾಡಿದರು. ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು ಎಂದು ಆ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

‘ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಜೊತೆ ಬಹಳ ಫಲಪ್ರದವಾದ ಭೋಜನಸಭೆ ನಡೆಯಿತು. ನಾವು ಹಲವು ವಿಚಾರಗಳನ್ನು ಚರ್ಚಿಸಿದೆವು. ಭಾರತ ಮತ್ತು ಫ್ರಾನ್ಸ್ ಸಂಬಂಧವನ್ನು ಹೊಸ ಪ್ರಗತಿಯ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಕೂಡ ತಮ್ಮ ಹಾಗೂ ಮೋದಿ ಭೇಟಿಯ ಕ್ಷಣಗಳನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಸುದೈವ ಕುಟುಂಬಕಂ ಎಂದು ತಮ್ಮ ಒಂದು ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ. ಜಿ20 ಶೃಂಗದ ಥೀಮ್ ಆಗಿರುವ ವಸುದೈವ ಕುಟುಂಬಕಂನ ಆಶಯದಂದತೆ ಒಂದು ಗ್ರಹ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ಸಂಗತಿಯನ್ನು ಅವರು ತಮ್ಮ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್

‘ಜಾಗತಿಕವಾಗಿ ಒಡಕುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಖಂಡದಲ್ಲೂ ಉದಯೋನ್ಮುಖ ಆರ್ಥಿಕತೆಗಳೊಂದಿಗೆ ಸಂವಾದ ನಡೆಸುವುದು ಅನಿವಾರ್ಯವಾಗಿದೆ. ಜಾಗತಿಕ ಸ್ಥಿರತೆ ಹಾಗೂ ನಮ್ಮ ನಿರ್ಧಾರ ಸಾಮರ್ಥ್ಯ ಎರಡೂ ಕೂಡ ಅದರ ಮೇಲೆ ಅವಲಂಬಿತವಾಗಿದೆ’ ಎಂದು ಫ್ರಾನ್ಸ್ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.


ಭಾರತ ಮತ್ತು ಫ್ರಾನ್ಸ್ ಸಂಬಂಧದ ಬಗ್ಗೆ ಮಾತನಾಡಿದ ಇಮ್ಯಾನುಯಲ್ ಮ್ಯಾಕ್ರೋನ್, ‘ನಮ್ಮಲ್ಲಿ ಬಹಳ ಬಲವಾದ ದ್ವಿಪಕ್ಷೀಯ ಪಾಲುದಾರಿಕೆ ಇದೆ ಎಂಬುದು ನನ್ನ ಭಾವನೆ. ನಾವು ಬಹಳ ಪ್ರಬಲ ರಕ್ಷಣಾ ಜೊತೆಗಾರಿಕೆ ಹೊಂದಿದ್ದು, ಕಳೆದ 2 ವರ್ಷದಲ್ಲಂತೂ ಇದನ್ನು ಸಾಕಷ್ಟು ಬಲಪಡಿಸಿಕೊಂಡಿದ್ದೇವೆ. ನಮ್ಮ ಬ್ಯಾಸ್ಟಿಲೆ ಡೇ (ಫ್ರೆಂಚ್ ರಾಷ್ಟ್ರೀಯ ದಿನ) ಆಚರಣೆಗೆ ನಿಮ್ಮ ಪ್ರಧಾನಿ ಭೇಟಿ ನೀಡಿದ್ದರು. ಫ್ರೆಂಚ್ ಜನರಿಗೆ ಇದು ಬಹಳ ಹೆಮ್ಮೆಯ ಸಂಗತಿ ಎನಿಸಿತ್ತು. ನಿಮ್ಮ ದೇಶದ ಬಗ್ಗೆ ಸ್ನೇಹತ್ವ ಮತ್ತು ಗೌರವದ ಭಾವನೆ ಮೂಡಿತು. ರಕ್ಷಣಾ ವಿಚಾರದಲ್ಲಿ ನಾವು ಮುಂದುವರಿಯುತತೇವೆ. ಮುಂಬರುವ ತಿಂಗಳು ಮತ್ತು ವರ್ಷಗಳಲ್ಲಿ ಗುತ್ತಿಗೆಗಳು ಮತ್ತು ಖರೀದಿಗಳನ್ನು ಹೆಚ್ಚಿಸುತ್ತೇವೆ,’ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಜಿ20 ನಾಯಕತ್ವದ ಎಫೆಕ್ಟ್; ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್​ನಿಂದ ಹೊರಬಿದ್ದ ಇಟಲಿ

ಭಾರತ ಮತ್ತು ಫ್ರಾನ್ಸ್ ಮಧ್ಯೆ ರಕ್ಷಣಾ ಸಂಬಂಧ ಉತ್ತಮವಾಗಿದೆ. ಫ್ರಾನ್ಸ್​ನಿಂದ ಭಾರತ ಸಾಕಷ್ಟು ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿದೆ. ರಫೇಲ್ ಯುದ್ಧವಿಮಾನವನ್ನು ಭಾರತದಲ್ಲೆ ತಯಾರಿಸುವ ಕಾರ್ಯ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ