ಜುಲೈ 13ರಿಂದ ಪ್ರಧಾನಿ ಮೋದಿಯವರ ಫ್ರಾನ್ಸ್, ಯುಎಇ ಪ್ರವಾಸ ಆರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

|

Updated on: Jul 12, 2023 | 1:56 PM

ಪ್ರಧಾನಿಯವರು ಜುಲೈ 13 ರಿಂದ ಜುಲೈ 15 ರವರೆಗೆ ಫ್ರಾನ್ಸ್ ಮತ್ತು ಯುಎಇಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈ 13ರಿಂದ ಪ್ರಧಾನಿ ಮೋದಿಯವರ ಫ್ರಾನ್ಸ್, ಯುಎಇ ಪ್ರವಾಸ ಆರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜುಲೈ 13 ರಿಂದ ಜುಲೈ 14 ರವರೆಗೆ ಫ್ರಾನ್ಸ್‌ಗೆ (France) ಭೇಟಿ ನೀಡಲಿದ್ದು,  ಪ್ಯಾರಿಸ್‌ನಲ್ಲಿ ನಡೆಯುವ ಬಾಸ್ಟಿಲ್ ಡೇ ಪರೇಡ್‌ನಲ್ಲಿ(Bastille Day parade) ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಫ್ರಾನ್ಸ್‌ನಲ್ಲಿ ಎರಡು ದಿನಗಳ ಸುದೀರ್ಘ ಪ್ರವಾಸದ ನಂತರ, ಪ್ರಧಾನಿ ಮೋದಿ ಅವರು ಜುಲೈ 15 ರಂದು ಅಬುಧಾಬಿಗೆ ಭೇಟಿ ನೀಡಲಿದ್ದಾರೆ.ಅಲ್ಲಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿಯವರು ಜುಲೈ 13 ರಿಂದ ಜುಲೈ 15 ರವರೆಗೆ ಫ್ರಾನ್ಸ್ ಮತ್ತು ಯುಎಇಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಜುಲೈ 13 ರಿಂದ ಜುಲೈ 14 ರವರೆಗೆ ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಲಿದ್ದಾರೆ. ಇದೇ ಪರೇಡ್​​ನಲ್ಲಿ ಭೂಸೇನೆ, ವಾಯು ಮತ್ತು ನೌಕಾದಳದ ಭಾರತೀಯ ಸಶಸ್ತ್ರ ಪಡೆಗಳ ತುಕಡಿ ಭಾಗವಹಿಸಲಿದೆ.

ಪ್ರಧಾನ ಮಂತ್ರಿಯ ಗೌರವಾರ್ಥವಾಗಿ ರಾಜ್ಯ ಔತಣಕೂಟ ಮತ್ತು ಖಾಸಗಿ ಔತಣಕೂಟವನ್ನು ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದು, ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಫ್ರೆಂಚ್ ಪ್ರಧಾನಿ, ದೇಶದ ಸೆನೆಟ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ.ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಫ್ರಾನ್ಸ್‌ನಲ್ಲಿರುವ ಭಾರತೀಯ ವಲಸಿಗರು, ಭಾರತೀಯ ಮತ್ತು ಫ್ರೆಂಚ್ ಕಂಪನಿಗಳ ಸಿಇಒಗಳು ಮತ್ತು ಪ್ರಮುಖ ಫ್ರೆಂಚ್ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಭಾರತ-ಫ್ರಾನ್ಸ್ ಪಾಲುದಾರಿಕೆಯು ಈ ವರ್ಷ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಪ್ರಧಾನಿ ಮೋದಿಯವರ ಭೇಟಿಯು ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರದಂತಹ ವೈವಿಧ್ಯಮಯ ವಲಯಗಳಲ್ಲಿ ಭವಿಷ್ಯದ ಪಾಲುದಾರಿಕೆಯಲ್ಲಿ ಪ್ರಭಾವ ಬೀರಲಿದೆ.

ಇದನ್ನೂ ಓದಿ: ಆಗಸ್ಟ್ 1ರಂದು ಪ್ರಧಾನಿ ಮೋದಿಗೆ ಪ್ರಶಸ್ತಿ ಪ್ರದಾನ; ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಅಜಿತ್ ಪವಾರ್, ಶರದ್ ಪವಾರ್

ಜುಲೈ 15 ರಂದು ಪ್ರಧಾನಿ ಮೋದಿ ಅಬುದಾಬಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ಮೋದಿಯವರ ಯುಎಇ ಭೇಟಿಯು ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲಿದೆ.
ಈ ಭೇಟಿ ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಫಿನ್‌ಟೆಕ್, ರಕ್ಷಣೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳನ್ನು ಗುರುತಿಸಲು ಅವಕಾಶವನ್ನು ಒದಗಿಸುತ್ತದೆ.

ಯುಎಇ ಯುಎನ್‌ಎಫ್‌ಸಿಸಿಸಿಯ ಸಿಒಪಿ -28 ರ ಅಧ್ಯಕ್ಷ ಸ್ಥಾನ ಮತ್ತು ಯುಎಇ ವಿಶೇಷ ಆಹ್ವಾನಿತರಾಗಿರುವ ಭಾರತದ ಜಿ -20 ಪ್ರೆಸಿಡೆನ್ಸಿಯ ಸಂದರ್ಭದಲ್ಲಿ ಜಾಗತಿಕ ವಿಷಯಗಳ ಕುರಿತು ಸಹಕಾರದ ಬಗ್ಗೆ ಚರ್ಚಿಸಲು ಇದು ಒಂದು ಅವಕಾಶವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Wed, 12 July 23