ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ನಿನ್ನೆ ಅವರ ಕುಟುಂಬದವರನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ವಾದ್ರಾ ಲಕ್ನೋದಿಂದ ಆಗ್ರಾಕ್ಕೆ ಹೊರಟಿದ್ದಾಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ನಂತರ ಅವರನ್ನು ಬಿಡಲಾಯಿತಾದರೂ, ಅದಕ್ಕೂ ಮೊದಲು ಕೆಲವು ಮಹಿಳಾ ಪೊಲೀಸರು ಪ್ರಿಯಾಂಕಾ ಗಾಂಧಿಯವರೊಟ್ಟಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಗಾಂಧಿಯವರನ್ನು ವಶಕ್ಕೆ ಪಡೆದ ಮಹಿಳಾ ಪೊಲೀಸರು ಅವರೊಂದಿಗೆ ತೆಗೆದುಕೊಂಡ ಫೋಟೋ ವೈರಲ್ ಆದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಿಟ್ಟಾಗಿದ್ದಾರೆ ಎಂದು ಹೇಳಲಾಗಿದೆ.
ಹೀಗೆ ಪ್ರಿಯಾಂಕಾ ಗಾಂಧಿಯವರನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಅವರೊಟ್ಟಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸ್ ಸಿಬ್ಬಂದಿ ವಿರುದ್ಧ ಲಕ್ನೌ ಪೊಲೀಸ್ ಆಯುಕ್ತ ಧ್ರುವ ಕಾಂತ್ ಠಾಕೂರ್ ಪ್ರಾಥಮಿಕ ತನಿಖೆಗೆ ಕೂಡ ಆದೇಶಿಸಿದ್ದಾರೆ. ಈ ಮಹಿಳಾ ಪೊಲೀಸ್ ಸಿಬ್ಬಂದಿ ಹೀಗೆ ಸೆಲ್ಫಿ ತೆಗೆದುಕೊಂಡಿದ್ದು ಪೊಲೀಸ್ ಇಲಾಖೆ ನಿಯಮಗಳ ಉಲ್ಲಂಘನೆಯೇ? ಎಂಬುದನ್ನು ಪರಿಶೀಲಿಸಿ, ವರದಿ ಸಲ್ಲಿಸುವ ಹೊಣೆಯನ್ನು ಕೇಂದ್ರೀಯ ವಿಭಾಗದ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ಗೆ ವಹಿಸಲಾಗಿದೆ. ಇವರು ನೀಡುವ ವರದಿ ಆಧಾರದ ಮೇಲೆ ಠಾಕೂರ್ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ನನ್ನನ್ನು ಶಿಕ್ಷಿಸಿ
ಇನ್ನು ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸ್ ಮಹಿಳಾ ಸಿಬ್ಬಂದಿ ಬಗ್ಗೆ ಉತ್ತರಪ್ರದೇಶ ಸಿಎಂ ಅಸಮಾಧಾನಗೊಂಡಿದ್ದಾರೆ, ಪೊಲೀಸ್ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಹಿಳಾ ಪೊಲೀಸರು ನನ್ನೊಂದಿಗೆ ತೆಗೆಸಿಕೊಂಡ ಸೆಲ್ಫಿಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೆ ತುಂಬ ನೋವಾಗಿದೆ ಎಂದು ಗೊತ್ತಾಯಿತು. ನನ್ನೊಂದಿಗೆ ಫೋಟೋ ತೆಗೆದುಕೊಳ್ಳುವುದು ಅಪರಾಧವಾಗುತ್ತದೆ ಅಂತಾದ ಮೇಲೆ ಅಲ್ಲಿ ಕ್ರೈಂಗೆ ಕಾರಣ ನಾನಾಗುತ್ತೇನೆ. ಹಾಗಾಗಿ ನನಗೆ ಶಿಕ್ಷೆ ನೀಡಬೇಕು. ಈ ನಿಷ್ಠಾವಂತ, ಶ್ರಮಜೀವಿ ಪೊಲೀಸ್ ಸಿಬ್ಬಂದಿಯ ವೃತ್ತಿ ಜೀವನವನ್ನು ಹಾಳುಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
खबर आ रही है कि इस तस्वीर से योगी जी इतने व्यथित हो गए कि इन महिला पुलिसकर्मियों पर कार्यवाही करना चाहते हैं।
अगर मेरे साथ तस्वीर लेना गुनाह है तो इसकी सजा भी मुझे मिले, इन कर्मठ और निष्ठावान पुलिसकर्मियों का कैरियर ख़राब करना सरकार को शोभा नहीं देता। pic.twitter.com/6wiGunRFEe
— Priyanka Gandhi Vadra (@priyankagandhi) October 20, 2021
2 ಲಕ್ಷ ರೂ. ಹಣ ಕದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆಗ್ರಾದ ಕಾರ್ಮಿಕನೊಬ್ಬ ಪೊಲೀಸ್ ವಶದಲ್ಲಿರುವಾಗಲೇ ಸಾವನ್ನಪ್ಪಿದ್ದ. ಮೃತ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಲಕ್ನೋದಿಂದ ಆಗ್ರಾಗೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಗ್ರಾಕ್ಕೆ ಹೊರಟಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಲಕ್ನೋ-ಆಗ್ರಾ ಎಕ್ಸ್ಪ್ರೆಸ್ ಹೈವೇ ಮಾರ್ಗದ ಟೋಲ್ ಬಳಿ ಪೊಲೀಸರು ತಡೆದಿದ್ದರು. ನಂತರ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದವರು ಕಳ್ಳತನ ಮಾಡಿ ಅರೆಸ್ಟ್, ಕಳ್ಳತನಕ್ಕೆ ಸಹಾಯ ಮಾಡ್ತು ಸೋಶಿಯಲ್ ಮೀಡಿಯಾ