28 ಪ್ರಕರಣಗಳನ್ನು ದಾಖಲಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ತನಿಖೆ ಆರಂಭಿಸಿದ ಸಿಬಿಐ

| Updated By: ರಶ್ಮಿ ಕಲ್ಲಕಟ್ಟ

Updated on: Aug 30, 2021 | 11:43 AM

Post-Poll Violence:  ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲದ ಭಾರೀ ಗೆಲುವು  ಸಾಧಿಸಿದ  ನಂತರ ನಡೆದ ಹಿಂಸಾಚಾರದಲ್ಲಿ ಅತ್ಯಂತ ಘೋರ ಕೊಲೆ, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಪ್ರಕರಣಗಳ ತನಿಖೆಯನ್ನು ನ್ಯಾಯಾಲಯವು ಸಿಬಿಐಗೆ ವಹಿಸಿದೆ.

28 ಪ್ರಕರಣಗಳನ್ನು ದಾಖಲಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ತನಿಖೆ ಆರಂಭಿಸಿದ ಸಿಬಿಐ
ಸಿಬಿಐ ಕಚೇರಿ
Follow us on

ಕೊಲ್ಕತ್ತಾ: ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಚುನಾವಣೋತ್ತರ ಹಿಂಸಾಚಾರ ಪ್ರಕರಣಗಳ ತನಿಖೆ ಮಾಡಲು 100 ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳಕ್ಕೆ ಬಂದಿದ್ದು ಒಟ್ಟು 28 ಪ್ರಕರಣಗಳನ್ನು ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. ಅದರಲ್ಲಿ ಏಳು ಪ್ರಕರಣಗಳು ಭಾನುವಾರ ದಾಖಲಾಗಿವೆ. ನಾಡಿಯಾ ಜಿಲ್ಲೆಯಲ್ಲಿ ಶನಿವಾರ ಬಂಧಿಸಿದ ಇಬ್ಬರನ್ನು ಸೆಪ್ಟೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲದ ಭಾರೀ ಗೆಲುವು  ಸಾಧಿಸಿದ  ನಂತರ ನಡೆದ ಹಿಂಸಾಚಾರದಲ್ಲಿ ಅತ್ಯಂತ ಘೋರ ಕೊಲೆ, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಪ್ರಕರಣಗಳ ತನಿಖೆಯನ್ನು ನ್ಯಾಯಾಲಯವು ಸಿಬಿಐಗೆ ವಹಿಸಿದೆ.

ನಾಲ್ಕು ಸಿಬಿಐ ತಂಡಗಳು, ಜಂಟಿ ನಿರ್ದೇಶಕರ ನೇತೃತ್ವದಲ್ಲಿ 20 ಕ್ಕೂ ಅಧಿಕ ಅಧಿಕಾರಿಗಳು ಭಾನುವಾರ ಬುರ್ದ್ವಾನ್, ಬಿರ್ಭುಮ್, ದಕ್ಷಿಣ 24 ಪರಗಣ, ಹೌರಾ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ದೂರುದಾರರು ಮತ್ತು ಸಂತ್ರಸ್ತರ ಮನೆ ಮತ್ತು ಗ್ರಾಮಗಳಿಗೆ ಭೇಟಿ ನೀಡಿದರು.

ಬುರ್ದ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ ಮೇ ಮಧ್ಯದಲ್ಲಿ ವೃದ್ಧ ಮಹಿಳೆಯನ್ನು ತೃಣಮೂಲ ಬೆಂಬಲಿತ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಬಿಐ ತಂಡ ಆಕೆಯ ಕುಟುಂಬ ಮತ್ತು ನೆರೆಹೊರೆಯವರೊಂದಿಗೆ ಘಟನೆಯ ಕುರಿತು ಮಾತನಾಡಿದೆ.

ಬಿರ್ಭುಮ್ ಜಿಲ್ಲೆಯಲ್ಲಿ ಸಿಬಿಐ ಉದ್ಯಮಿ ಮನೋಜ್ ಜೈಸ್ವಾಲ್ ಕೊಲೆ ಆರೋಪದ ಮೇಲೆ ಸಿಬಿಐ ತನಿಖೆ ಕೇಂದ್ರೀಕರಿಸಿದೆ. ಕೂಚ್ ಬೆಹಾರ್ ಜಿಲ್ಲೆಯ ತುಫಂಗಂಜ್​​ನಲ್ಲಿ ಹತ್ಯೆಯಾಗಿದ್ದ ಶಾಹಿದುಲ್ ರೆಹಮಾನ್ ಗ್ರಾಮದಲ್ಲಿ ತನಿಖಾಧಿಕಾರಿಗಳಿಗೆ ತಡೆಯೊಡ್ಡಲಾಗಿದೆ. ದಕ್ಷಿಣ 24 ಪರಗಣದಲ್ಲಿ ಸಿಬಿಐ ತಂಡವು ತೃಣಮೂಲ ಬೆಂಬಲಿತ ಗೂಂಡಾಗಳಿಂದ ಹತ್ಯೆಯಾಗಿದ್ದಾರೆ ಎಂದು ಆರೋಪವಿರುವ ರಾಜು ಸಾಮಂತನ ತಂದೆಯನ್ನು ಭೇಟಿ ಮಾಡಿದೆ.

ಕೊಲೆ, ಅತ್ಯಾಚಾರ ಮತ್ತು ಕೊಲೆ ಯತ್ನದ ಪ್ರಕರಣಗಳ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ ಆದೇಶಿಸಿದ ಒಂದು ವಾರದ ನಂತರ ಸಿಬಿಐ ಗುರುವಾರ ಬಂಗಾಳದಲ್ಲಿ ತನಿಖೆ ಆರಂಭಿಸಿತು. ಕಿಚ್ಚಿಟ್ಟ ಪ್ರಕರಣ, ಲೂಟಿ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಪ್ರಕರಣಗಳ ತನಿಖೆಗಾಗಿ ನ್ಯಾಯಾಲಯವು ವಿಶೇಷ ತನಿಖಾ ತಂಡವನ್ನು ರಚಿಸಿತು.
ಚುನಾವಣೆಯ ನಂತರದ ಹಿಂಸಾಚಾರದ ದೂರುಗಳನ್ನು ಪರಿಶೀಲಿಸಲು ನ್ಯಾಯಾಲಯವು ಆದೇಶಿಸಿದ ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ತನ್ನ ವರದಿಯಲ್ಲಿ 15,000 ಸಂತ್ರಸ್ತರನ್ನು ಒಳಗೊಂಡಂತೆ 1979 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.

ರಾಜ್ಯ ಪೊಲೀಸರು 1934 ದೂರುಗಳನ್ನು ಮತ್ತು 1168 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಆದರೆ  ಹೆಸರಿಸಲಾದ 9,304 ಆರೋಪಿಗಳ ಪೈಕಿ ಕೇವಲ 1,345 ಅಥವಾ ಶೇಕಡಾ 14 ಜನರನ್ನು ಬಂಧಿಸಲಾಗಿದೆ ಮತ್ತು ವರದಿ ಸಲ್ಲಿಸುವ ಸಮಯದಲ್ಲಿ 1,036 ಜಾಮೀನಿನ ಮೇಲೆ ಹೊರಗಿದ್ದರು. ಅಂದರೆ ಜುಲೈ ಮಧ್ಯದಲ್ಲಿ ಶೇಕಡಾ 3 ಕ್ಕಿಂತ ಕಡಿಮೆ ಆರೋಪಿಗಳು ಜೈಲಿನಲ್ಲಿದ್ದರು.

ತೃಣಮೂಲ ಬೆಂಬಲಿತ ಗೂಂಡಾಗಳು, ಎಫ್‌ಐಆರ್‌ ದಾಖಲಿಸುವಲ್ಲಿ ವಿಫಲತೆ, ಹಿರಿಯ ಶ್ರೇಣಿಗಳಲ್ಲಿ ನಿರಾಸಕ್ತಿಗಾಗಿ ವರದಿಯನ್ನು ಪೊಲೀಸರು ಆರೋಪಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 24 ಜೂನ್ ಮತ್ತು 10 ಜುಲೈ ನಡುವೆ 311 ಸ್ಥಳಗಳಿಗೆ ಭೇಟಿ ನೀಡಿತ್ತು.  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ರಾಜ್ಯ ಸರ್ಕಾರವನ್ನು ಗುರಿಯಾಗಿಸುವ ಪ್ರಯತ್ನ ಎಂದು ತೃಣಮೂಲವು ಎನ್​​ಎಚ್​​ಆರ್​​ಸಿಯ ಆರೋಪಗಳನ್ನು ತಳ್ಳಿಹಾಕಿತ್ತು.

ಇದನ್ನೂ  ಓದಿ: Pegasus row ‘ನೀವು ಕಾಯಬೇಕು ಎಂದು ನಾವು ನಿರೀಕ್ಷಿಸುತ್ತೇವೆ’: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್

ಇದನ್ನೂ ಓದಿ:  ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕನಸು ನನಸಾಗಲು ಬೇಕಿನ್ನೆಷ್ಟು ಕಾಲ?

(Post-Poll Violence in West Bengal CBI Files 28 Cases Two persons arrested on Saturday)