ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಪಕ್ಷದ ನಾಯಕರ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ, ಬೇಡವೇ ಎಂಬ ವಿಷಯದ ಬಗ್ಗೆ ಚರ್ಚೆ ಮಾಡಲು ಕರೆಯಲಾಗಿರುವ ಈ ಸಭೆಯಲ್ಲಿ ಇನ್ನೂ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಯಲಿದೆ. ಸೋನಿಯಾ ಗಾಂಧಿ ಕರೆದಿರುವ ಈ ಸಭೆಯಲ್ಲಿ ರಾಹುಲ್ ಗಾಂಧಿ, ಅಂಬಿಕಾ ಸೋನಿ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಅಜಯ್ ಮಕೆನ್, ಕೆ.ಸಿ.ವೇಣುಗೋಪಾಲ್ ಇನ್ನಿತರರು ಹಾಜರಿದ್ದಾರೆ. ವಿಶೇಷವೆಂದರೆ ಸ್ವತಃ ಪ್ರಶಾಂತ್ ಕಿಶೋರ್ ಪಾಲ್ಗೊಂಡಿದ್ದಾರೆ.
ಈಗಾಗಲೇ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತುಂಬ ಹೀನಾಯವಾಗಿ ಸೋತಿದೆ. ಇರುವ ಒಂದು ರಾಜ್ಯ ಪಂಜಾಬ್ ಕೂಡ ಕೈತಪ್ಪಿ ಹೋಗಿದೆ. ಈ ಮಧ್ಯೆ ಇದೇ ವರ್ಷ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನೊಂದೆಡೆ 2024ರ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ ಹೀಗಿರುವಾಗ ಪಕ್ಷ ಸಂಘಟನೆಯನ್ನು ಗಟ್ಟಿಯಾಗಿ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಶಾಂತ್ ಕಿಶೋರ್ ಈ ಭೇಟಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ 2020ರಿಂದಲೂ ಆಗಾಗ ಮುನ್ನೆಲೆಗೆ ಬರುತ್ತಿದೆ. ಮಾರ್ಚ್ನಲ್ಲಿ ಕೂಡ ಒಮ್ಮೆ ಇವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದಾರೆಂದು ಹೇಳಲಾಗಿತ್ತು. ಆದರೆ ಅದು ಅಧಿಕೃತವಾಗಿರಲಿಲ್ಲ. ಆದರೆ ಇಂದಿನ ಭೇಟಿ ಅಧಿಕೃತವಾಗಿದೆ. ಹಿಂದೆ 2020ರಲ್ಲಿ ಎರಡು ಮೂರು ಸುತ್ತಿನ ಮಾತುಕತೆ ನಡೆದಿದ್ದರೂ, ಪ್ರಶಾಂತ್ ಕಿಶೋರ್ ಸಿದ್ಧಾಂತಗಳು ಮತ್ತು ಕಾಂಗ್ರೆಸ್ ಸಿದ್ಧಾಂತಗಳ ನಡುವೆ ಭಿನ್ನಾಭಿಪ್ರಾಯ ಮೂಡಿ ಅದು ಅಲ್ಲಿಗೇ ಕೈಬಿಟ್ಟ ವಿಚಾರವಾಗಿತ್ತು. ಈಗಂತೂ ಕಾಂಗ್ರೆಸ್ನಲ್ಲಿರುವ ಹಿರಿ-ಕಿರಿಯ ನಾಯಕರ ಮಧ್ಯೆಯೇ ಒಂದಷ್ಟು ವಿಚಾರದಲ್ಲಿ ಭಿನ್ನಮತ ಮೂಡಿದೆ. ಹೀಗಿರುವಾಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರಿ ಅಲ್ಲಿ ಹೊಸ ಬದಲಾವಣೆಗೆ ಕಾರಣರಾಗುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ.
ಇದನ್ನೂ ಓದಿ: ಎರಡು ಕಾರ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆರಿಂದ ಗಾಯಾಳುಗಳಿಗೆ ಸಹಾಯ ಹಸ್ತ
Published On - 2:30 pm, Sat, 16 April 22