Tv9 Kannada Digital Exclusive: ದೇಶದಲ್ಲಿ ಬರಲಿದೆ ಜನರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸುವ ಕಾಲ!

| Updated By: guruganesh bhat

Updated on: Aug 20, 2021 | 5:30 PM

ದೇಶದಲ್ಲಿ ಮನೆ ಮನೆಗಳಲ್ಲಿ ಸ್ಮಾರ್ಟ್ ಪ್ರೀ ಪೇಮೆಂಟ್ ಎಲೆಕ್ಟ್ರಿಸಿಟಿ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಯಾಗಿದೆ. ಕೇಂದ್ರದ ಇಂಧನ ಇಲಾಖೆಯು ಎಲ್ಲ ರಾಜ್ಯಗಳಲ್ಲಿ ಮನೆ ಮನೆಗಳಲ್ಲಿ ವಿದ್ಯುತ್ ಬಳಕೆಗೆ ಸ್ಮಾರ್ಟ್ ಪ್ರೀ ಪೇಮೆಂಟ್ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

Tv9 Kannada Digital Exclusive: ದೇಶದಲ್ಲಿ ಬರಲಿದೆ ಜನರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸುವ ಕಾಲ!
ಸಾಂಕೇತಿಕ ಚಿತ್ರ
Follow us on

ದೇಶದ ಜನರ ಬಳಿ ಈಗ ಪ್ರೀ ಪೇಯ್ಡ್ ಮೊಬೈಲ್ ಪೋನ್ಗಳಿವೆ. ಕೇಬಲ್ ಟಿವಿ ಚಾನಲ್ ಗಳನ್ನು ಪ್ರೀ ಪೇಯ್ಡ್ ಮೂಲಕ ಜನರು ವೀಕ್ಷಿಸುತ್ತಿದ್ದಾರೆ. ಹೆದ್ದಾರಿಯ ಟೋಲ್ ಗೇಟ್ ಗಳಲ್ಲಿ ಪ್ರೀ ಪೇಯ್ಡ್ ಟೋಲ್ ಫಾಸ್ಟ್ ಟ್ಯಾಗ್ ಗಳನ್ನು ಜನರು ಬಳಸುತ್ತಿದ್ದಾರೆ. ಇದೇ ರೀತಿ ದೇಶದಲ್ಲಿ ಮನೆ ಮನೆಗಳಲ್ಲಿ ಜನರು ಮುಂಚಿತವಾಗಿಯೇ ಹಣ ಪಾವತಿಸಿ ವಿದ್ಯುತ್ ಬಳಕೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತಿದೆ. ದೇಶದಲ್ಲಿ ಪ್ರೀ ಪೇಮೆಂಟ್ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಆಳವಡಿಕೆಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಪ್ರೀ ಪೇಮೇಂಟ್ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಪಡಿಸಿ ಕೇಂದ್ರದ ಇಂಧನ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಇಂಧನ ಇಲಾಖೆಯ ಅಧಿಸೂಚನೆಯ ಪ್ರತಿ ಟಿವಿ9ಗೆ ಲಭ್ಯವಾಗಿದೆ.

ದೇಶದಲ್ಲಿ ಮನೆ ಮನೆಗಳಲ್ಲಿ ಸ್ಮಾರ್ಟ್ ಪ್ರೀ ಪೇಮೆಂಟ್ ಎಲೆಕ್ಟ್ರಿಸಿಟಿ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಯಾಗಿದೆ. ಕೇಂದ್ರದ ಇಂಧನ ಇಲಾಖೆಯು ಎಲ್ಲ ರಾಜ್ಯಗಳಲ್ಲಿ ಮನೆ ಮನೆಗಳಲ್ಲಿ ವಿದ್ಯುತ್ ಬಳಕೆಗೆ ಸ್ಮಾರ್ಟ್ ಪ್ರೀ ಪೇಮೆಂಟ್ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಇಂಧನ ಇಲಾಖೆಯ ಜಂಟಿ ಕಾರ್ಯದರ್ಶಿ ಘನಶ್ಯಾಮ್ ಪ್ರಸಾದ್ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.

ಕೇಂದ್ರದ ಇಂಧನ ಇಲಾಖೆಯು ಮನೆ, ಕೈಗಾರಿಕೆಗಳಲ್ಲಿ ಈಗಿರುವ ವಿದ್ಯುತ್ ಮೀಟರ್ ಗಳನ್ನು ಬದಲಾಯಿಸಿ, ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಆಳವಡಿಕೆಗೆ ಕಾಲಮಿತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ, ಕೃಷಿ ವಿದ್ಯುತ್ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ವಿದ್ಯುತ್ ಬಳಕೆ ಗ್ರಾಹಕರು ಪ್ರೀ ಪೇಮೆಂಟ್ ಮೋಡ್‌ನ ಸ್ಮಾರ್ಟ್ ಮೀಟರ್ ಗಳನ್ನು ಆಳವಡಿಕೆ ಮಾಡಿಕೊಳ್ಳಬೇಕು. ಕೇಂದ್ರಾಡಳಿತ ಪ್ರದೇಶಗಳಲ್ಲಿ 2019-20ನೇ ಸಾಲಿನಲ್ಲಿ ಶೇ.15ಕ್ಕಿಂತ ಹೆಚ್ಚಿನ ಟ್ರಾನ್ಸಮಿಷನ್ ವಿದ್ಯುತ್ ನಷ್ಟ ಅನುಭವಿಸುತ್ತಿರುವ ನಗರಗಳಲ್ಲಿ ಹಾಗೂ ಉಳಿದ ವಿಭಾಗಗಳಲ್ಲಿ ಶೇ.25 ರಷ್ಟು ಟ್ರಾನ್ಸಮಿಷನ್ ವಿದ್ಯುತ್ ನಷ್ಟ ಅನುಭವಿಸುತ್ತಿರುವ ಕಡೆಗಳಲ್ಲಿ ಎಲ್ಲ ಬ್ಲಾಕ್ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಮತ್ತು ಮೇಲ್ಪಟ್ಟದ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಎಲ್ಲ ಕೈಗಾರಿಕೆಗಳಲ್ಲಿ , ವಾಣಿಜ್ಯ ಗ್ರಾಹಕರು 2023ರ ಡಿಸೆಂಬರ್ ನೊಳಗೆ ಪ್ರೀ ಪೇಮೆಂಟ್‌ನ ಸ್ಮಾರ್ಟ್ ಮೀಟರ್ ಗಳನ್ನು ಆಳವಡಿಸಿಕೊಳ್ಳಬೇಕು. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಕಾರಣ ನೀಡಿ, ಎರಡು ಬಾರಿ ಸ್ಮಾರ್ಟ್ ಪ್ರಿ ಪೇಮೆಂಟ್ ಮೀಟರ್ ಆಳವಡಿಕೆ ಮುಂದೂಡಬಹುದು.ಆದರೆ, 6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಮುಂದೂಡುವಂತಿಲ್ಲ. ಯಾವ ವರ್ಗದ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಆಳವಡಿಕೆಯಿಂದ ವಿನಾಯಿತಿ ನೀಡಿ ಮುಂದೂಡಲಾಗಿದೆ ಎಂದು ಕಾರಣಗಳನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ತಮ್ಮ ಅಧಿಸೂಚನೆಯಲ್ಲಿ ತಿಳಿಸಬೇಕು.

 

                                                                                                ಅಧಿಸೂಚನೆ ಪತ್ರ

ಕಾಲಾವಧಿಯನ್ನೂ ನೀಡಲಾಗಿದೆ
ಉಳಿದೆಲ್ಲಾ ಕಡೆ 2025ರ ಮಾರ್ಚ್ ತಿಂಗಳೊಳಗಾಗಿ ಪ್ರಿ ಪೇಮೆಂಟ್ ಸ್ಮಾರ್ಟ್ ಮೀಟರ್ ಗಳನ್ನು ಆಳವಡಿಸಬೇಕು. ಆದರೆ, ಕಮ್ಯೂನಿಕೇಷನ್ ನೆಟ್ ವರ್ಕ್ ಇಲ್ಲದ ಕಡೆ, ಪ್ರಿ ಪೇಮೆಂಟ್ ಸ್ಮಾರ್ಟ್ ಮೀಟರ್ ಆಳವಡಿಕೆಗೆ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಸ್ಪಲ್ಪ ಕಾಲಾವಕಾಶ ನೀಡಬಹುದು. ಅಂದರೇ, ಉಳಿದ ಎಲ್ಲ ರಾಜ್ಯಗಳಲ್ಲಿ 2025ರ ಮಾರ್ಚ್ ತಿಂಗಳೊಳಗೆ ಗ್ರಾಹಕರು ವಿದ್ಯುತ್ ಬಳಕೆಗೆ ಪ್ರೀ ಪೇಮೆಂಟ್ ಸ್ಮಾರ್ಟ್ ಮೀಟರ್ ಗಳನ್ನು ಆಳವಡಿಸಿಕೊಳ್ಳಬೇಕು. ಗ್ರಾಹಕರಿಗೆ ಎಎಂಆರ್‌ ಸೌಲಭ್ಯ ಹೊಂದಿರುವ ಸ್ಮಾರ್ಟ್ ಮೀಟರ್ ಗಳನ್ನ ನೀಡಬೇಕು. ಇದಿಷ್ಟು ಗ್ರಾಹಕರಿಗೆ ಸಂಬಂಧಿಸಿದಂತೆ ಕೇಂದ್ರದ ಇಂಧನ ಇಲಾಖೆಯ ಅಧಿಸೂಚನೆಯಲ್ಲಿರುವ ವಿವರ.

ಇನ್ನೂ ವಿದ್ಯುತ್ ವಿತರಣಾ ಕಂಪನಿಗಳಿಗೂ ಕೆಲ ಕಾಲಮಿತಿಗಳನ್ನು, ಸೂಚನೆಗಳನ್ನ ಕೇಂದ್ರದ ಇಂಧನ ಇಲಾಖೆಯ ಅಧಿಸೂಚನೆಯಲ್ಲಿ ನೀಡಲಾಗಿದೆ. ಎಲ್ಲ ಫೀಡರ್ ಗಳಿಗೂ 2022ರ ಡಿಸೆಂಬರ್ ನೊಳಗೆ ಸ್ಮಾರ್ಟ್ ಮೀಟರ್ ಆಳವಡಿಸಬೇಕು. 2019-20ನೇ ಸಾಲಿನಲ್ಲಿ ನಗರ ಪ್ರದೇಶಗಳಲ್ಲಿ ಶೇ.50 ರಷ್ಟು ಗ್ರಾಹಕರ ಶೇ.15ಕ್ಕಿಂತ ಹೆಚ್ಚಿನ ವಿದ್ಯುತ್ ವಿತರಣಾ ನಷ್ಟ ಹೊಂದಿರುವ ಎಲ್ಲ ವಿತರಣಾ ಟ್ರಾನ್ಸ್ ಫಾರ್ಮರ್ ಗಳಿಗೂ ಹಾಗೂ ಉಳಿದ ಎಲೆಕ್ಟ್ರಿಕಲ್ ವಿಭಾಗಗಳಲ್ಲಿ 2019-20ನೇ ಸಾಲಿನಲ್ಲಿ ಶೇ.25 ರಷ್ಟು ವಿದ್ಯುತ್ ವಿತರಣಾ ನಷ್ಟ ಹೊಂದಿರುವ ಕಡೆಗಳಲ್ಲಿ 2023ರ ಡಿಸೆಂಬರ್ ನೊಳಗೆ ಸ್ಮಾರ್ಟ್ ಮೀಟರ್ ಆಳವಡಿಸಬೇಕು. ನಗರ ಪ್ರದೇಶ ಹೊರತುಪಡಿಸಿ ಉಳಿದ ಕಡೆ ವಿತರಣಾ ಟ್ರಾನ್ಸ್ ಫಾರ್ಮರ್ ಗಳಿಗೆ 2025ರ ಮಾರ್ಚ್ ತಿಂಗಳೊಳಗೆ ಮೀಟರ್ ಆಳವಡಿಸಬೇಕು. ಆದರೆ, ಡಿಸ್ಟ್ರಿಬ್ಯೂಷನ್ ಟ್ರಾನ್ಸ್ ಫಾರ್ಮರ್ ಹಾಗೂ ಹೆವಿ ವೋಲ್ಟೇಜ್ ಡಿಸ್ಟ್ರಿಬ್ಯೂಷನ್ ಟ್ರಾನ್ಸಫಾರ್ಮರ್ ಗಳು 25 ಕೆವಿ ಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದರೇ, ಮೀಟರ್ ಆಳವಡಿಕೆಯ ಈ ಕಾಲಮಿತಿಯಿಂದ ಹೊರಗಿಡಲಾಗಿದೆ. ಕೇಂದ್ರದ ಇಂಧನ ಇಲಾಖೆಯು ಆಗಸ್ಟ್ 17ರಂದೇ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಆದರೆ, ಈ ಅಧಿಸೂಚನೆಯನ್ನು ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟೀಫಿಕೇಷನ್ ಹೊರಡಿಸಿದ ಅಂದಿನಿಂದ ಜಾರಿಯಾಗುತ್ತೆ ಎಂದು ಕೇಂದ್ರದ ಇಂಧನ ಇಲಾಖೆಯ ಜಂಟಿ ಕಾರ್ಯದರ್ಶಿ ಘನಶ್ಯಾಮ್ ಪ್ರಸಾದ್ ಆಗಸ್ಟ್ 17ರಂದೇ ಅಧಿಸೂಚನೆ ಹೊರಡಿಸಿದ್ದಾರೆ. ಈ ಅಧಿಸೂಚನೆಯ ಪ್ರತಿ ಟಿವಿ9ಗೆ ಲಭ್ಯವಾಗಿದೆ.

ಆದರೇ, ಈ ಅಧಿಸೂಚನೆಯಲ್ಲಿ ಕೃಷಿ ವಿದ್ಯುತ್ ಗ್ರಾಹಕರನ್ನು ಸ್ಮಾರ್ಟ್ ಮೀಟರ್ ಆಳವಡಿಕೆಯಿಂದ ಹೊರಗಿಟ್ಟಿರುವುದು ರೈತರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ, ಮುಂದಿನ ದಿನಗಳಲ್ಲಿ ಇದರಲ್ಲಿ ಏನಾದರೂ ಬದಲಾವಣೆ ಮಾಡಿ, ಕೃಷಿ ಟ್ರಾನ್ಸ್ ಫಾರ್ಮರ್ ಗಳಿಗೂ ಸ್ಮಾರ್ಟ್ ಮೀಟರ್ ಆಳವಡಿಸಲು ಆದೇಶ ನೀಡಬಹುದು ಎಂಬ ಆತಂಕ ರೈತರಲ್ಲಿದೆ. ಆದರೆ, ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಆಳವಡಿಕೆ ಮೂಲಕ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ. ಹೀಗಾಗಿ ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳು ಗುಣಮಟ್ಟದ ವಿದ್ಯುತ್ ಅನ್ನು ಗ್ರಾಹಕರಿಗೆ ಪೂರೈಸಬೇಕಾಗುತ್ತೆ. ಸ್ಮಾರ್ಟ್ ಮೀಟರ್ ಆಳವಡಿಕೆ ಮೂಲಕ ವಿದ್ಯುತ್ ವಲಯದಲ್ಲಿ ಸುಧಾರಣೆ ತರಬೇಕು. ವಿದ್ಯುತ್ ಸೋರಿಕೆಯನ್ನು ತಡೆಗಟ್ಟಬೇಕು. ಈಗ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳು ನಷ್ಟದಲ್ಲಿವೆ. ಅವುಗಳನ್ನು ನಷ್ಟದಿಂದ ಹೊರತರಬೇಕು ಎನ್ನುವುದು ಕೇಂದ್ರದ ವಾದ. ಆದರೆ, ಈ ವಾದವನ್ನು ರೈತರು ಒಪ್ಪುತ್ತಿಲ್ಲ.

ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ. ಟಿವಿ9.

ಇದನ್ನೂ ಓದಿ: 

ದಿಕ್ಕುತಪ್ಪಿರುವ ಅಫ್ಘಾನಿಸ್ತಾನದ ಆಡಳಿತಕ್ಕೆ ತಾಲಿಬಾನಿಯ ಈ ಏಳು ಮಂದಿಯೇ ಸೂತ್ರಧಾರಿಗಳು!

Sharia Law: ಅಫ್ಘಾನಿಸ್ತಾನದಲ್ಲಿ ಷರಿಯಾ ಆಡಳಿತ ಜಾರಿಗೆ ಸಿದ್ಧತೆ; ಷರಿಯಾ ಕಾನೂನು ಎಂದರೇನು?

(Pre Paid electricity smart meter will be adapted by Central Government in upcoming days)

Published On - 3:07 pm, Fri, 20 August 21