ಜುಲೈ 25ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಸೇವಾವಧಿ ಮುಕ್ತಾಯ; ನಿವೃತ್ತ ಜೀವನಕ್ಕೆ ಬಂಗಲೆ ರೆಡಿ

| Updated By: Digi Tech Desk

Updated on: May 02, 2022 | 1:08 PM

ಹಿಂದೆ, ಮಾಜಿ ರಾಷ್ಟ್ರ ಅಧ್ಯಕ್ಷರಿಗೆ ವಸತಿ ಸೌಕರ್ಯಗಳು ನೀಡುವುದು ಕೆಲವು ವಿವಾದಗಳಿಗೆ ಕಾರಣವಾಗಿತ್ತು. 2007 ರಿಂದ 2012 ರವರೆಗೆ ಅಧಿಕಾರದಲ್ಲಿದ್ದ ಪ್ರತಿಭಾ ಪಾಟೀಲ್ ಅವರು ಪುಣೆಯಲ್ಲಿ ತಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿ ನಿರ್ಮಿಸಲಾಗುತ್ತಿರುವ ಹೊಸ ಮನೆಯು ರಕ್ಷಣಾ ಭೂಮಿಯಲ್ಲಿದೆ...

ಜುಲೈ 25ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಸೇವಾವಧಿ ಮುಕ್ತಾಯ; ನಿವೃತ್ತ ಜೀವನಕ್ಕೆ ಬಂಗಲೆ ರೆಡಿ
ರಾಮನಾಥ್ ಕೋವಿಂದ್
Follow us on

ನಮ್ಮ ದೇಶದಲ್ಲಿ ರಾಷ್ಟ್ರಪತಿಗಳು ತಮ್ಮ ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ಜೀವನ ಪರ್ಯಂತ ಸರ್ಕಾರಿ ಬಂಗಲೆಯನ್ನು ನೀಡಲಾಗುತ್ತೆ. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರ ಸೇವಾವಧಿಯು ಈ ವರ್ಷದ ಜುಲೈ 25ಕ್ಕೆ ಮುಕ್ತಾಯವಾಗಲಿದೆ. ಈಗಾಗಲೇ ರಾಮನಾಥ ಕೋವಿಂದ್ ಅವರ ನಿವೃತ್ತ ಜೀವನಕ್ಕೆ ದೆಹಲಿಯಲ್ಲೇ (Delhi) ಮನೆ ಸಿದ್ದಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಹಾಗಾದರೇ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಯಾವ ಮನೆಯನ್ನ ನೀಡಲಾಗುತ್ತೆ? ಆ ಮನೆಯಲ್ಲಿ ಯಾರು ಇಷ್ಟು ವರ್ಷ ವಾಸ ಇದ್ದರು? ಆ ಮನೆಯ ಪಕ್ಕದಲ್ಲೇ ಇರೋ ವಿಐಪಿ ಯಾರು?

ರಾಷ್ಟ್ರಪತಿಗಳ ನಿವೃತ್ತ ಜೀವನಕ್ಕೆ ಬಂಗಲೆ ರೆಡಿ
ಮೂರು ದಶಕಗಳಿಂದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಮಂಜೂರು ಮಾಡಲಾಗಿದ್ದ ಮನೆಯಲ್ಲಿ ನವೀಕರಣ ಕಾಮಗಾರಿಗಳು ಭರದಿಂದ ಸಾಗಿವೆ. ದೇಶವು ಹೊಸ ರಾಷ್ಟ್ರಪತಿಯನ್ನು ಪಡೆಯುವವರೆಗೆ ಅಥವಾ ಅಧಿಕಾರದಲ್ಲಿರುವವರು ಎರಡನೇ ಅವಧಿಗೆ ಬರಲು ಎರಡು ತಿಂಗಳುಗಳು ಬಾಕಿಯಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಿವೃತ್ತಿಯ ನಂತರದ ವಾಸಕ್ಕಾಗಿ ಲುಟಿಯನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾದ ಜನಪಥ ರಸ್ತೆಯ 12 ನೇ ನಂಬರ್‌ ಮನೆಯನ್ನು ಸಿದ್ಧಪಡಿಸುವ ಕಾರ್ಯಗಳು ನಡೆಯುತ್ತಿವೆ. ಪ್ರಸ್ತುತ ರಾಷ್ಟ್ರಪತಿ ಆಗಿರುವ ರಾಮನಾಥ್ ಕೋವಿಂದ್ ಅವರ ರಾಷ್ಟ್ರಪತಿ ಅವಧಿ ಜುಲೈ 25ಕ್ಕೆ ಮುಕ್ತಾಯವಾಗಲಿದೆ. ಬಳಿಕ ಅವರು 2ನೇ ಅವಧಿಗೆ ಮರು ಆಯ್ಕೆಯಾಗದೇ ಇದ್ದಲ್ಲಿ ರಾಷ್ಟ್ರಪತಿ ಹುದ್ದೆಯಿಂದ ಇಳಿದು ನಿವೃತ್ತ ಜೀವನ ಕಳೆಯುವರು. ರಾಮನಾಥ್ ಕೋವಿಂದ್ ಅವರ ನಿವೃತ್ತ ಜೀವನ ಕಳೆಯಲು ಜನಪಥ ರಸ್ತೆಯ 12ನೇ ನಂಬರ್ ನಿವಾಸವನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ.
ಮೂರು ದಶಕಗಳಿಂದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಾಸವಿದ್ದ ಮನೆಯಲ್ಲಿ, 2020 ರಲ್ಲಿ ಅವರ ಮರಣದ ನಂತರ ಅವರ ಕುಟುಂಬವು ಅಲ್ಲಿಯೇ ಉಳಿದಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರವು ಮನೆಯಿಂದ ರಾಮವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಅವರನ್ನ ಬಲವಂತದಿಂದ ಹೊರ ಹಾಕುವ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ಕುಟುಂಬವು ಮನೆಯನ್ನು ಖಾಲಿ ಮಾಡಿತ್ತು.
ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಎರಡು ಮೂಲಗಳ ಪ್ರಕಾರ, ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಅವರ ಕುಟುಂಬವನ್ನು ಸ್ವಾಗತಿಸಲು ಮನೆಯನ್ನು ಈಗ ಸಿದ್ಧಪಡಿಸಲಾಗುತ್ತಿದೆ. ಆದರೂ ಅದನ್ನು ಇನ್ನೂ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ.

ರಾಷ್ಟ್ರಪತಿಯವರ ಪತ್ರಿಕಾ ಕಾರ್ಯದರ್ಶಿ, ಅಜಯ್ ಕುಮಾರ್ ಸಿಂಗ್ ಕೋವಿಂದ್ ಅವರು ನಿವೃತ್ತಿಯ ನಂತರ ದೆಹಲಿಯಲ್ಲಿ ಉಳಿಯುತ್ತಾರೆಯೋ ಮತ್ತು ಹೆಚ್ಚು ನಿರ್ದಿಷ್ಟವಾಗಿ 12, ಜನಪಥ್‌ನಲ್ಲಿ ಉಳಿಯುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇನ್ನೂ ಒಂದು ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ನಿವೃತ್ತಿಯ ಜೀವನಕ್ಕಾಗಿ 12, ಜನಪಥ್ ನಿವಾಸವನ್ನು ಆಯ್ಕೆ ಮಾಡಿಕೊಂಡರೇ, ಅವರ ನಿವಾಸದ ಹತ್ತಿರದಲ್ಲೇ 10 ಜನಪಥ್ ನಲ್ಲಿ ಸೋನಿಯಾಗಾಂಧಿ ಕೂಡ ವಾಸ ಇರುತ್ತಾರೆ. ಸೋನಿಯಾಗಾಂಧಿ ಅವರು ರಾಮನಾಥ್ ಕೋವಿಂದ್ ಅವರ ನೆರೆಹೊರೆವರಾಗ್ತಾರೆ.

ಲೋಕ ಜನಶಕ್ತಿ ಪಕ್ಷದ ಕೇಂದ್ರಸ್ಥಳ
30 ವರ್ಷಗಳ ಕಾಲ ರಾಮವಿಲಾಸ್‌ ಪಾಸ್ವಾನ್ ಅವರ ಮನೆಯಾಗಿ ಸೇವೆ ಸಲ್ಲಿಸುವುದರ ಜೊತೆಗೆ, 12, ಜನಪಥ್ ಅವರು ಸ್ಥಾಪಿಸಿದ ಲೋಕ ಜನಶಕ್ತಿ ಪಕ್ಷದ ಕೇಂದ್ರವೂ ಆಗಿತ್ತು. 2004 ರಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರದಲ್ಲಿ ಸರ್ಕಾರ ರಚಿಸಲು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್‌ಗೆ ರಾಮವಿಲಾಸ್ ಪಾಸ್ವಾನ್ ಅವರ ಬೆಂಬಲವನ್ನು ಪಡೆಯಲು 10, ಜನಪಥ್‌ನಲ್ಲಿರುವ ತಮ್ಮ ಪಕ್ಕದ ಮನೆಯಿಂದ ನಡೆದುಕೊಂಡು ರಾಮವಿಲಾಸ್ ಪಾಸ್ವಾನ್‌ ಮನೆಗೆ ಬಂದಿದ್ದರು.
ರಾಷ್ಟ್ರಪತಿಗಳ ವೇತನ ಮತ್ತು ಪಿಂಚಣಿ ಕಾಯಿದೆ, 1951 ರ ಪ್ರಕಾರ, ಯಾವುದೇ ಪರವಾನಗಿ ಶುಲ್ಕ ಪಾವತಿಸದೇ ನಿರ್ವಹಣೆ ಸೇರಿದಂತೆ ಸುಸಜ್ಜಿತ ನಿವಾಸದ ಬಳಕೆಗೆ ಮತ್ತು ಕಾರ್ಯದರ್ಶಿ, ಸಿಬ್ಬಂದಿಯನ್ನು ಜೀವನ ಪರ್ಯಂತ ಮಾಜಿ ರಾಷ್ಟ್ರಪತಿಗಳಿಗೆ ನೀಡಲಾಗುತ್ತೆ. ಜುಲೈ 25 ರಂದು, ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಸೇವಾವಧಿ ಮುಕ್ತಾಯವಾಗಲಿದೆ. ದೇಶದಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸೇರಿದಂತೆ ಯಾರೊಬ್ಬರು ಕೂಡ ಎರಡನೇ ಅವಧಿಗೆ ಮರುಆಯ್ಕೆಯಾಗಿಲ್ಲ. ರಾಮನಾಥ್ ಕೋವಿಂದ್ ಅವರು ಬಿಹಾರದ ರಾಜ್ಯಪಾಲರಾಗಿ ಸುಮಾರು ಎರಡು ವರ್ಷಗಳನ್ನು ಕಳೆದ ನಂತರ ಜುಲೈ 25, 2017 ರಂದು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಮೂಲತಃ ಉತ್ತರ ಪ್ರದೇಶದ ಕಾನ್ಪುರದವರಾದ ಅವರು ದಶಕಗಳಿಂದ ದೆಹಲಿಯಲ್ಲಿದ್ದಾರೆ. ಮೊದಲು 1971 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೊಕೇಟ್-ಆನ್-ರೆಕಾರ್ಡ್ ಆಗಿ ಮತ್ತು ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಉತ್ತರ ಪ್ರದೇಶದಿಂದ 2 ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ರಾಷ್ಟ್ರಪತಿಗಳ ವಸತಿ ವಿವಾದ
ಹಿಂದೆ, ಮಾಜಿ ರಾಷ್ಟ್ರ ಅಧ್ಯಕ್ಷರಿಗೆ ವಸತಿ ಸೌಕರ್ಯಗಳು ನೀಡುವುದು ಕೆಲವು ವಿವಾದಗಳಿಗೆ ಕಾರಣವಾಗಿತ್ತು. 2007 ರಿಂದ 2012 ರವರೆಗೆ ಅಧಿಕಾರದಲ್ಲಿದ್ದ ಪ್ರತಿಭಾ ಪಾಟೀಲ್ ಅವರು ಪುಣೆಯಲ್ಲಿ ತಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿ ನಿರ್ಮಿಸಲಾಗುತ್ತಿರುವ ಹೊಸ ಮನೆಯು ರಕ್ಷಣಾ ಭೂಮಿಯಲ್ಲಿದೆ ಎಂದು ಟೀಕೆಗಳು ಎದುರಾದವು. ನಂತರ ಪ್ರತಿಭಾ ಪಾಟೀಲ್ ರಕ್ಷಣಾ ಇಲಾಖೆಯ ಜಾಗದ ಮನೆಗೆ ಹೋಗದಿರಲು ನಿರ್ಧರಿಸಿದ್ದರು. ಬಳಿಕ ಪ್ರತಿಭಾ ಪಾಟೀಲ್ ಅವರಿಗೆ ಪುಣೆಯ ರಾಯಗಡ ಬಂಗಲೆಯನ್ನು ಮಂಜೂರು ಮಾಡಲಾಗಿದ್ದು, ಅಲ್ಲಿಯೇ ಪ್ರತಿಭಾ ಪಾಟೀಲ್ ನೆಲೆಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ 10, ರಾಜಾಜಿ ಮಾರ್ಗ ನಿವಾಸವನ್ನು ನೀಡಲಾಯಿತು. ಇದು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮರಣದ ನಂತರದ ರಾಷ್ಟ್ರಪತಿ ನಿವಾಸ. ಮುಖರ್ಜಿಯವರ ಅಧಿಕಾರಾವಧಿಯು ಜುಲೈ 25, 2017 ರಂದು ಕೊನೆಗೊಳ್ಳುವ 10 ತಿಂಗಳ ಮೊದಲು ನಿವೃತ್ತಿಯ ನಂತರದ ನಿವಾಸಕ್ಕಾಗಿ ಹುಡುಕಾಟ ಪ್ರಾರಂಭವಾಯಿತು ಮತ್ತು ಆ ವರ್ಷದ ಫೆಬ್ರವರಿಯಲ್ಲಿ ರಾಜಾಜಿ ಮಾರ್ಗದ ಮನೆಯನ್ನು ಆಯ್ಕೆ ಮಾಡಲಾಯಿತು. ಪ್ರಣಬ್‌ ಮುಖರ್ಜಿ ಅವರು 2020 ರಲ್ಲಿ ಸಾಯುವವರೆಗೂ ಆ ಮನೆಯಲ್ಲಿಯೇ ಇದ್ದರು. ಆಗಿನ ಕೇಂದ್ರ ಸಚಿವ ಮತ್ತು ಗೌತಮ್ ಬುದ್ಧ ನಗರ ಸಂಸದ ಡಾ. ಮಹೇಶ್ ಶರ್ಮಾ ಅವರಿಗೆ ಕಲಾಂ ನಂತರ ಮನೆ ಮಂಜೂರು ಮಾಡಲಾಗಿತ್ತು. ಅವರ ಅವಧಿ ಮುಗಿದ ನಂತರ ಮುಖರ್ಜಿಯವರಿಗೆ ದಾರಿ ಮಾಡಿಕೊಡಲು ಮಹೇಶ್ ಶರ್ಮಾ ಅವರಿಗೆ ಮನೆ ಖಾಲಿ ಮಾಡಲು ಕೇಳಲಾಗಿತ್ತು. ಈಗ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಜನಪಥ ರಸ್ತೆಯ 12ನೇ ನಂಬರ್ ಮನೆಯನ್ನು ನಿವೃತ್ತಿಯ ನಂತರದ ಜೀವನಕ್ಕಾಗಿ ಸಿದ್ದಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ವರದಿ: ಚಂದ್ರಮೋಹನ್

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sun, 1 May 22