ಕೋಲ್ಕತ್ತ: 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಪಶ್ಚಿಮ ಬಂಗಾಳದಲ್ಲಿ ಒಂದು ಹಂತದ ಮೇಲುಗೈ ಸಾಧಿಸಿದ್ದ ಬಿಜೆಪಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಅಲ್ಲಿ ದೀದಿ ಆಡಳಿತವನ್ನು ಹೇಗಾದರೂ ಕೊನೆ ಗೊಳಿಸಬೇಕು ಎಂಬ ಬಲವಾದ ಉದ್ದೇಶದಿಂದ ಈಗಾಗಲೇ ಚುನಾವಣಾ ಪ್ರಚಾರ ಸಭೆಗಳಲ್ಲಿ ತೊಡಗಿಕೊಂಡಿದೆ.
ಹೀಗಿರುವಾಗ 2021ರ ಜನವರಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಪ್ರಮುಖ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಬಿಜೆಪಿ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿತಿಂಗಳೂ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆದರೆ ಅವರು ಬರುವ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಚುನಾವಣೆಗೆ ಇನ್ನೂ 5 ತಿಂಗಳು ಬಾಕಿ ಇದೆ. ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಒಂದು ಬಾರಿ ಪಶ್ಚಿಮ ಬಂಗಾಳ ರಾಜ್ಯ ಪ್ರವಾಸ ಮಾಡಿ, ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಇವರೂ ಕೂಡ ತಿಂಗಳಿಗೆ ಒಮ್ಮೆ ಇಲ್ಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಹಾಗೇ, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್, ಕೇಂದ್ರ ಸಚಿವರಾದ ಪ್ರಲ್ಹಾದ್ ಸಿಂಗ್ ಪಟೇಲ್ ಮತ್ತು ಉತ್ತರ ಪ್ರದೇಶದ ಡಿಸಿಎಂ ಕೇಶವ್ ಚಂದ್ರ ಮೌರ್ಯಾ ಅವರೂ ಕಳೆದ ವಾರ ಇಲ್ಲಿಗೆ ಭೇಟಿ ನೀಡಿ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು. ಮೋದಿಯವರೂ ತಿಂಗಳಿಗೆ ಒಮ್ಮೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂಬ ಹೇಳಿಕೆಯನ್ನು ಬಿಜೆಪಿ ಮುಖಂಡರು ನೀಡುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರಧಾನಿ ಪ್ರತಿದಿನವೂ ಇಲ್ಲಿಗೆ ಬರಬಹುದು..ಅದರಲ್ಲೇನು? ಅವರಿಗೆ ಮಾಡಲು ಕೆಲಸಗಳು ಕಡಿಮೆ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಪಶ್ಚಿಮಬಂಗಾಳದ ಶಿಕ್ಷಣ ಸಚಿವ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ವ್ಯಂಗ್ಯವಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ 18 ಸೀಟ್ ಗೆದ್ದಿದ್ದ ಬಿಜೆಪಿ ಈ ಬಾರಿಯ 294 ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ.
2021 ವಿಧಾನಸಭೆ ಚುನಾವಣೆವರೆಗೆ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ