PM Modi in Puducherry: ಭಾರತಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯಗಳ ಅಗತ್ಯವಿದೆ: ನರೇಂದ್ರ ಮೋದಿ

|

Updated on: Feb 25, 2021 | 2:28 PM

Narendra Modi in Puducherry: ಕರಾವಳಿ ಪುದುಚೇರಿಯ ಜೀವಾಳ. ಬಂದರು ಅಭಿವೃದ್ಧಿ, ವ್ಯವಸಾಯ ಮತ್ತು ನೀಲಿ ಆರ್ಥಿಕತೆ ( Blue economy)ಗೆ ಇಲ್ಲಿ ಸಾಧ್ಯತೆ ಇದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

PM Modi in Puducherry: ಭಾರತಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯಗಳ ಅಗತ್ಯವಿದೆ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಪುದುಚೇರಿ: ಇಲ್ಲಿನ ಜವಾಹರ್ ಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ,  ಪುದುಚೇರಿ ಜನರ ಜೀವನ ಸುಧಾರಣೆಗಾಗಿ ನಾವು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದೇವೆ. ಪುನರ್ ನಿರ್ಮಾಣ ಮಾಡಿದ ಮ್ಯಾರಿ ಬಿಲ್ಡಿಂಗ್​ನ್ನು ಉದ್ಘಾಟಿಸಲು ಖುಷಿಯಾಗುತ್ತದೆ. ಈ ಕಟ್ಟಡವು ಪುರಾತನ ಪರಂಪರೆಯನ್ನು ನೆನಪಿಸುತ್ತದೆ.  ಗ್ರಾಮೀಣ ಮತ್ತು ಕರಾವಳಿ ಪ್ರದೇಶದ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಿದೆ. ಇದರಿಂದಾಗಿ ಕೃಷಿ ವಲಯಕ್ಕೆ ಲಾಭವುಂಟಾಗಲಿದೆ. ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಚತುಷ್ಪಥಗಳು ಕೈಗಾರಿಕಾ ಸಂಸ್ಥೆಗಳನ್ನು ಆಕರ್ಷಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಲಿವೆ ಎಂದಿದ್ದಾರೆ.

ಭಾರತಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯದ ಅಗತ್ಯವಿದೆ. ಯೋಜನೆಗಳಿಂದ ಜನ ಜೀವನ ಸುಧಾರಣೆಯಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯವಲಯಕ್ಕೆ ಉತ್ತೇಜನ ನೀಡುವ ದೇಶಗಳು ಪ್ರಗತಿ ಹೊಂದುತ್ತವೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ವ್ಯವಸ್ಥೆಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಜವಾಹರ್ ಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ( JIPMER)ನಲ್ಲಿ ರಕ್ತನಿಧಿ ಉದ್ಘಾಟಿಸಿದ ಮೋದಿ ಹೇಳಿದ್ದಾರೆ.

ಪುದುಚೇರಿಗೆ ನಿಮ್ಮ ಚುನಾವಣಾ ಪ್ರಣಾಳಿಕೆ ಏನು ಎಂದು ಕೇಳಿದರೆ ಪುದುಚೇರಿಯನ್ನು ಉತ್ತಮ ಪಡಿಸಬೇಕು ಎಂಬುದು ನನ್ನ ಬಯಕೆ. ಪುದುಚೇರಿಯನ್ನು ಉತ್ತಮವಾಗಿಸಲು ಎನ್​ಡಿಎ ಬಯಸುತ್ತಿದೆ. BEST ಅಂದರೆ B ಬ್ಯುಸಿನೆಸ್ ಹಬ್, E- ಎಜ್ಯುಕೇಷನ್ ಹಬ್, S-ಸ್ಪಿರಿಚುವಲ್ ಹಬ್ ಮತ್ತು T-ಟೂರಿಸಂ ಹಬ್ ಎಂದು ಮೋದಿ ವಿವರಿಸಿದ್ದಾರೆ.

 

ಮೋದಿ ಭಾಷಣದ ಮುಖ್ಯಾಂಶಗಳು

ಇಲ್ಲಿನ ಜನರ ಚೈತನ್ಯ ಮತ್ತು ಉತ್ಸಾಹವನ್ನು ನಾನು ನೋಡುತ್ತಿದ್ದೇನೆ. ಪುದುಚೇರಿಯಲ್ಲಿ ಯಾವ ದಿಶೆಗೆ ಗಾಳಿ ಬೀಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.

ಕಾಂಗ್ರೆಸ್ ನ ಹೈಕಮಾಂಡ್ ಇಲ್ಲಿನ ಸಹಕಾರಿ ಸಂಸ್ಥೆಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಸಹಕಾರಿ ಚಳವಳಿಗಳು ಹಲವಾರು ಜನರ ಬದುಕಿನ ದಿಶೆಯನ್ನೇ ಬದಲಿಸಿದ ಗುಜರಾತಿನಿಂದ ನಾನು ಬಂದಿದ್ದೇನೆ. ಪುದುಚೇರಿಯಲ್ಲಿ ಎನ್​ಡಿಎ ಸರ್ಕಾರ ಸಹಕಾರಿ ವಲಯದ ಉತ್ತೇಜನಕ್ಕೆ ಪೂರಕವಾದ ಕೆಲಸ ಮಾಡಲಿದೆ.

ದೇಶದಾದ್ಯಂತ ಜನರು ಕಾಂಗ್ರೆಸ್ ನ್ನು ತಿರಸ್ಕರಿಸುತ್ತಿದ್ದಾರೆ. ಸಂಸತ್​ನಲ್ಲಿ ಅವರ ಸೀಟುಗಳು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಫ್ಯೂಡಲ್, ವಂಶಪಾರಂಪರ್ಯದ ಕಾಂಗ್ರೆಸ್‌ ರಾಜಕೀಯ ಸಂಸ್ಕೃತಿ ಮುಕ್ತಾಯವಾಗಲಿದೆ.

ಕೆಲವು ದಿನಗಳ ಹಿಂದೆ ಅಸಹಾಯಕ ಮಹಿಳೆಯೊಬ್ಬರು ಪುದುಚೇರಿ ಸರ್ಕಾರದ ಬಗ್ಗೆ ದೂರು ಹೇಳುತ್ತಿರುವ ವಿಡಿಯೊಗಳನ್ನು ನೀವು ನೋಡಿದ್ದೀರಿ. ಮುಖ್ಯಮಂತ್ರಿ ಚಂಡಮಾರುತ, ಪ್ರವಾಹದ ವೇಳೆ ಜನರನ್ನು ಕಡೆಗಣಿಸಿದ್ದಾರೆ ಎಂದು ಆಕೆ ಹೇಳಿದಾಗ ಪುದುಚೇರಿಯ ಮಾಜಿ ಮುಖ್ಯಮಂತ್ರಿ ಆಕೆಯ ಮಾತುಗಳನ್ನು ತಪ್ಪಾಗಿ ಅನುವಾದ ಮಾಡಿದ್ದರು. ಆಕೆಯ ಕಣ್ಣುಗಳಲ್ಲಿ ನೋವು, ದನಿಯಲ್ಲಿ ಸಂಕಟ ಕಾಣುತ್ತಿತ್ತು. ಆಕೆಯ ಮಾತುಗಳನ್ನು ತಪ್ಪಾಗಿ ಅನುವಾದ ಮಾಡುವ ಮೂಲಕ ಪುದುಚೇರಿ ಮಾಜಿ ಮುಖ್ಯಮಂತ್ರಿ ಅಲ್ಲಿನ ಜನರಿಗೆ ಮತ್ತು ಅವರ ನಾಯಕರಿಗೆ ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳುವ ಸಂಸ್ಕೃತಿಯ ಪಕ್ಷ ಜನರಿಗಾಗಿ ಸೇವೆ ಮಾಡಲು ಸಾಧ್ಯವೆ?


2016ರಲ್ಲಿ ಪುದುಚೇರಿಗೆ ಜನಪರ ಸರ್ಕಾರ ಸಿಕ್ಕಿರಲಿಲ್ಲ. ಅವರಿಗೆ ಸಿಕ್ಕಿದ್ದು ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸೇವೆ ಮಾಡುವ ಸರ್ಕಾರ. ಅವರ ಆದ್ಯತೆಗಳೇ ಬೇರೆಯಾಗಿತ್ತು. ನಿಮ್ಮ ಮಾಜಿ ಮುಖ್ಯಮಂತ್ರಿ ಅವರ ಪಕ್ಷದ ಹಿರಿಯ ನಾಯಕರ ಚಪ್ಪಲಿ ಎತ್ತುವುದರಲ್ಲಿ ನಿಪುಣರರು.

ಪುದುಚೇರಿ ಜನರೇ ಹೈಕಮಾಂಡ್ ಆಗಿರುವ ಸರ್ಕಾರವನ್ನು ಬಯಸುತ್ತದೆ. ಮುಂಬರುವ ಎನ್​ಡಿಎ ಸರ್ಕಾರ ಜನಪರವಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.

ಹೈಕಮಾಂಡ್ ನಿರ್ದೇಶಿತ ಕಾಂಗ್ರೆಸ್ ಸರ್ಕಾರವು ಪುದುಚೇರಿಯಲ್ಲಿ ಎಲ್ಲ ಕ್ಷೇತ್ರವನ್ನು ಹಾಳು ಮಾಡಿದೆ. ಸ್ಥಳೀಯ ಉದ್ಯಮಗಳು ಸಂಕಷ್ಟದಲ್ಲಿವೆ. ಕಾಂಗ್ರೆಸ್ ಜನರ ಹಿತಾಸಕ್ತಿಗಾಗಿ ದುಡಿಯುವ ಬಗ್ಗೆ ನಂಬಿಕೆ ಇರಿಸಿಕೊಂಡಿಲ್ಲ.

400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್​ಗೆ ಮೋದಿ ಚಾಲನೆ ನೀಡಿದ್ದಾರೆ. ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ 100 ಹಾಸಿಗೆಗಳಿರುವ ಮಹಿಳಾ ಹಾಸ್ಟೆಲ್​ನ ಉದ್ಘಾಟನೆ ಮಾಡಿದ ಮೋದಿ, ಇದು ದೇಶದ ಯುವ ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ. ಕ್ರೀಡೆಯು ನಮ್ಮಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುತ್ತದೆ. ಪುದುಚೇರಿಯ ಯುವ ಜನಾಂಗ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಕ್ರೀಡೆಗಳಲ್ಲಿ ಮಿಂಚಬಹುದು ಎಂದಿದ್ದಾರೆ.

ಕರಾವಳಿ ಪುದುಚೇರಿಯ ಜೀವಾಳ. ಬಂದರು ಅಭಿವೃದ್ಧಿ,  ವ್ಯವಸಾಯ  ಮತ್ತು ನೀಲಿ ಆರ್ಥಿಕತೆ ( Blue economy)ಗೆ ಇಲ್ಲಿ ಸಾಧ್ಯತೆ ಇದೆ. ಸಾಗರಮಾಲಾ ಯೋಜನೆಯಡಿ ಪುದುಚೇರಿ ಬಂದರು ಅಭಿವೃದ್ಧಿಗೆ ಚಾಲನೆ ನೀಡಲು ನಾನು ಹೆಮ್ಮೆ ಪಡುತ್ತೇನೆ.

ಪುದುಚೇರಿಯಲ್ಲಿ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಸಾಧ್ಯತೆಗಳಿದ್ದು ಇದು ಉದ್ಯೋಗವಕಾಶಗಳನ್ನು ಕಲ್ಪಿಸಲಿದೆ.

ಸಂಜೆ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ ಮೋದಿ

ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ  ನೀಡಿದ  ನಂತರ ಇಂದು ಸಂಜೆ ತಮಿಳುನಾಡಿಗೆ ಭೇಟಿ  ನೀಡಲಿದ್ದಾರೆ  ಮೋದಿ. ಅಲ್ಲಿ ವೀರಪಾಂಡಿ, ತಿರುಪ್ಪೂರ್​ನ ತಿರುಕುಮಾರನ್ ನಗರ, ಮಧುರೈನ ರಾಜಕ್ಕೂರ್ ಎರಡನೇ ಹಂತ, ತಿರುಚ್ಚಿಯ ಇರುಂಗಲೂರ್​ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅವರು ಚಾಲನೆ ನೀಡಲಿದ್ದಾರೆ. ಪುದುಚೇರಿ ಮತ್ತು ತಮಿಳುನಾಡಿನಲ್ಲಿನ ಜನರ ಜೀವನ ಸುಧಾರಣೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಹೊರಡುತ್ತಿದ್ದೇನೆ ಎಂದು ಮೋದಿ ಬೆಳಗ್ಗೆ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ತಮಿಳುನಾಡು, ಪುದುಚೇರಿಯಲ್ಲಿ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ನರೇಂದ್ರ ಮೋದಿ

Published On - 12:31 pm, Thu, 25 February 21