ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು(Kushinagar airport) ಉದ್ಘಾಟಿಸಿದ್ದಾರೆ. ಶ್ರೀಲಂಕಾದಿಂದ ಬಂದ ವಿಮಾನವು ಹೊಸ ವಿಮಾನ ನಿಲ್ದಾಣಕ್ಕೆ ಮೊದಲು ಬಂದಿಳಿದ ಮೊದಲ ವಿಮಾನವಾಗಿದೆ. ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಉತ್ತಮ ಸಂಪರ್ಕಕ್ಕಾಗಿ, ಭಕ್ತರಿಗೆ ಸೌಲಭ್ಯಗಳ ಸೃಷ್ಟಿಗೆ ಇಂದು ಭಾರತ ವಿಶೇಷ ಗಮನ ನೀಡುತ್ತಿದೆ. ಕುಶಿನಗರದ ಅಭಿವೃದ್ಧಿಯು ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಆದ್ಯತೆಯಲ್ಲಿದೆ ಎಂದು ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ ಹೇಳಿದ್ದಾರೆ.
ಕುಶಿನಗರ ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಸಂಪೂರ್ಣ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಈ ವಿಮಾನ ನಿಲ್ದಾಣವನ್ನು ಒಳಗೊಂಡಂತೆ ಉತ್ತರಪ್ರದೇಶದಲ್ಲಿ ಮಾತ್ರ, 9 ಹೊಸ ವಿಮಾನ ನಿಲ್ದಾಣಗಳು ಮತ್ತು ಟರ್ಮಿನಲ್‌ಗಳನ್ನು ಜನರಿಗೆ ಒದಗಿಸಲಾಗಿದೆ. ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿರುವ ಜೇವರ್ ವಿಮಾನ ನಿಲ್ದಾಣವು ದಾಖಲೆಯ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಕುಶಿನಗರವು ಪ್ರಪಂಚದಾದ್ಯಂತದ ಬೌದ್ಧ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು ಗೌತಮ ಬುದ್ಧನ ಅಂತಿಮ ವಿಶ್ರಾಂತಿಯ ಸ್ಥಳವಾಗಿದ್ದು, ಆತನ ಮರಣದ ನಂತರ ಮಹಾಪರಿನಿರ್ವಾಣವನ್ನು ಪಡೆದರ. ಇದು ಬೌದ್ಧರ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.
ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀಲಂಕಾದ ಕ್ರೀಡಾ ಸಚಿವ ನಮಲ್ ರಾಜಪಕ್ಸೆ, ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿ ಶ್ರೀಲಂಕಾದ ವಿಮಾನಯಾನ ಸಂಸ್ಥೆಗಳನ್ನು ಆಹ್ವಾನಿಸುತ್ತಿರುವುದು ದೊಡ್ಡ ಗೌರವ. ರಾಜಪಕ್ಸೆ ಲಂಕಾದ ನಿಯೋಗದೊಂದಿಗೆ ನೂರು ಬೌದ್ಧ ಸನ್ಯಾಸಿಗಳು ವಾರಾಣಸಿಗೆ ಆಗಮಿಸಿದ್ದರು.
ವಿಮಾನ ನಿಲ್ದಾಣವನ್ನು ಅಂದಾಜು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಗವಾನ್ ಬುದ್ಧನ ಮಹಾಪರಿನಿರ್ವಾಣ ಸ್ಥಲಕ್ಕೆ ತಡೆರಹಿತ ಸಂಪರ್ಕ ಒದಗಿಸುವ ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಯಾತ್ರಿಕರಿಗೆ ಅನುಕೂಲವಾಗಲಿದೆ.
ಉತ್ತರ ಪ್ರದೇಶ ಮತ್ತು ಬಿಹಾರದ ಹತ್ತಿರದ ಜಿಲ್ಲೆಗಳಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಜೂನ್ 2020 ರಲ್ಲಿ ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಪ್ರಧಾನಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು.
ಇದನ್ನೂ ಓದಿ: ಜೇಮ್ಸ್ ಬಾಂಡ್ 007 ಮೀಮ್ ಮೂಲಕ ಮೋದಿ ವಿರುದ್ಧ ತೃಣಮೂಲ ಕಾಂಗ್ರೆಸ್ ವಾಗ್ದಾಳಿ
Published On - 12:08 pm, Wed, 20 October 21