ಪ್ರಧಾನಿ ನರೇಂದ್ರ ಮೋದಿಗೆ ಇಂಥ ಭಾಷಣ ಶೋಭೆಯಲ್ಲ; ಅರವಿಂದ್ ಕೇಜ್ರಿವಾಲ್​, ಪ್ರಿಯಾಂಕಾ ಗಾಂಧಿ ವಾಗ್ದಾಳಿ

| Updated By: Lakshmi Hegde

Updated on: Feb 08, 2022 | 1:35 PM

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಕೂಡ ಪ್ರಧಾನಿ ಮೋದಿಯವರ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮಾಡಿದ ಭಾಷಣದ ತುಣುಕನ್ನು ಶೇರ್​ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಇಂಥ ಭಾಷಣ ಶೋಭೆಯಲ್ಲ; ಅರವಿಂದ್ ಕೇಜ್ರಿವಾಲ್​, ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅರವಿಂದ್ ಕೇಜ್ರಿವಾಲ್​
Follow us on

ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್​ ಸೇರಿ ಇನ್ನಿತರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು 100 ವರ್ಷ ಕಾಂಗ್ರೆಸ್​ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಕೊವಿಡ್​ 19 ಮೊದಲನೇ ಅಲೆಯಲ್ಲಿ (Covid 19 1st Wave) ಸೋಂಕಿನ ಪ್ರಮಾಣ ಹೆಚ್ಚಲು ಕಾರಣ ಕಾಂಗ್ರೆಸ್​ ಮತ್ತು ದೆಹಲಿಯ ಆಮ್​ ಆದ್ಮಿ ಪಕ್ಷದ ಸರ್ಕಾರ ಎಂದೂ ಗಂಭೀರ ಆರೋಪ ಮಾಡಿದ್ದರು. ಕೊವಿಡ್​ 19 ಮೊದಲ ಅಲೆಯಲ್ಲಿ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರಿಗೆ ಕಾಂಗ್ರೆಸ್​ ಉಚಿತವಾಗಿ ರೈಲು ಟಿಕೆಟ್​ ನೀಡಿ, ನಗರ ತೊರೆಯುವಂತೆ ಹೇಳಿತು. ಅತ್ತ ದೆಹಲಿ ಸರ್ಕಾರ, ಅಲ್ಲಿರುವ ವಲಸೆ ಕಾರ್ಮಿಕರಿಗೆ ನಗರ ತೊರೆಯುವಂತೆ ಹೇಳಿ, ಬಸ್​ ವ್ಯವಸ್ಥೆ ಮಾಡಿತು. ಹಾಗಾಗಿ ಅವರೆಲ್ಲ ತಮ್ಮ ಸ್ವಂತ ರಾಜ್ಯವಾದ ಪಂಜಾಬ್​, ಉತ್ತರಾಖಂಡ್​ ಮತ್ತು ಉತ್ತರಪ್ರದೇಶಕ್ಕೆ ಬರಬೇಕಾಯಿತು. ಹೀಗಾಗಿ ಈ ಮೂರು ರಾಜ್ಯಗಳಲ್ಲೂ ಕೊರೊನಾ ಸಿಕ್ಕಾಪಟೆ ಹರಡಿತು ಎಂದು ಪ್ರಧಾನಿ ಮೋದಿ ನಿನ್ನೆ ಭಾಷಣದ ವೇಳೆ ಹೇಳಿದ್ದರು. 

ಪ್ರಧಾನಿಯವರ ಈ ಆರೋಪಕ್ಕೆ ಇದೀಗ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಈ ವಲಸೆ ಕಾರ್ಮಿಕರೆಲ್ಲ ಪ್ರಧಾನಿ ನರೇಂದ್ರ ಮೋದಿಯವರಿಂದ ನಿರ್ಲಕ್ಷ್ಯಕ್ಕೆ ಒಳಗಾದವರಾಗಿದ್ದರು. ಕೊವಿಡ್​ 19ನಿಂದಾಗಿ ಕೆಲಸ ಕಳೆದುಕೊಂಡು ವಾಪಸ್​ ಮನೆಗೆ ಹೋಗಲು ಸಾಧ್ಯವಾಗದೆ ಅತಂತ್ರರಾಗಿದ್ದವರು. ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಪ್ರಧಾನಿ ಮೋದಿ ಹೀಗೆ ಹೇಳುತ್ತಿದ್ದಾರೆ ಎಂದರೆ, ವಲಸೆ ಕಾರ್ಮಿಕರಿಗೆ ಯಾರೂ ಸಹಾಯ ಮಾಡುವುದು ಅವರಿಗೆ ಇಷ್ಟವಿರಲಿಲ್ಲವಾ? ಮೋದಿಯವರು ಬಯಸುತ್ತಿರುವುದಾದರೂ ಏನನ್ನು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, 2021ರ ಏಪ್ರಿಲ್​​ನಲ್ಲಿ ದೊಡ್ಡದೊಡ್ಡ ರ್ಯಾಲಿಗಳನ್ನು ನಡೆಸಿದರಲ್ಲ ಪ್ರಧಾನಿ ಮೋದಿ, ಆ ಬಗ್ಗೆ ಅವರೇನು ಹೇಳುತ್ತಾರೆ?  ಪಶ್ಚಿಮ ಬಂಗಾಳದ ಅಸಾನ್ಸೋಲ್​​ನಲ್ಲಿ ಜನಸಾಗರವೇ ಸೇರಿತ್ತು. ಆ ಸಮಯದಲ್ಲಿ ದೇಶದಲ್ಲಿ ಎರಡನೇ ಅಲೆ ಇತ್ತು, ದಿನಕ್ಕೆ 2 ಲಕ್ಷದಷ್ಟು ಕೊವಿಡ್​ 19 ಕೇಸ್​ಗಳು ದಾಖಲಾಗುತ್ತಿದ್ದವು ಎಂದು ಪ್ರಿಯಾಂಕಾ ಗಾಂಧಿ ನೆನಪಿಸಿದ್ದಾರೆ.

ಹಾಗೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಕೂಡ ಪ್ರಧಾನಿ ಮೋದಿಯವರ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮಾಡಿದ ಭಾಷಣದ ತುಣುಕನ್ನು ಶೇರ್​ ಮಾಡಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಈ ಹೇಳಿಕೆ ಸಂಪೂರ್ಣವಾಗಿ ತಪ್ಪಾದದ್ದು. ಕೊರೊನಾದಿಂದ ತಮ್ಮ ಜೀವನದಲ್ಲಿ ಕೆಲಸ ಕಳೆದುಕೊಂಡವರು, ಪ್ರೀತಿ ಪಾತ್ರರನ್ನು ಕಳೆದುಕೊಂಡು ನೋವು ಅನುಭವಿಸಿದವರ ಬಗ್ಗೆ ಪ್ರಧಾನಿ ತುಂಬ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ದೇಶ ಬಯಸುತ್ತದೆ. ಆದರೆ ಪ್ರಧಾನಿ ಇಂಥ ಮಾತುಗಳನ್ನಾಡುವುದು ಸೂಕ್ತವಲ್ಲ ಎಂದಿದ್ದಾರೆ.

ಇದನ್ನೂ ಓದಿ: PM Modi in Parliament: ಇನ್ನು 100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೇವಡಿ