PM Modi in Parliament: ಇನ್ನು 100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೇವಡಿ

Parliament Budget Session: ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರೂ ಕಾಂಗ್ರೆಸ್​ ಇನ್ನೂ ಬುದ್ಧಿ ಕಲಿತಿಲ್ಲ. ಕೊರೊನಾ ಕಾಲದಲ್ಲೂ ಕಾಂಗ್ರೆಸ್ ಹದ್ದು ಮೀರಿ ವರ್ತಿಸಿದೆ ಎಂದು ಲೋಕಸಭಾ ಭಾಷಣದ ವೇಳೆ ಪ್ರತಿಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

PM Modi in Parliament: ಇನ್ನು 100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೇವಡಿ
ನರೇಂದ್ರ ಮೋದಿ
TV9kannada Web Team

| Edited By: Sushma Chakre

Feb 07, 2022 | 6:48 PM

ನವದೆಹಲಿ: ಹಲವಾರು ಚುನಾವಣೆಗಳಲ್ಲಿ ಹಲವು ಸೋಲುಗಳನ್ನು ಕಂಡರೂ ಕಾಂಗ್ರೆಸ್ (Congress) ಇನ್ನೂ ದುರಹಂಕಾರದಿಂದ ಹೊರಬಂದಿಲ್ಲ. ಅವರಲ್ಲಿ ಇನ್ನೂ ಕೆಲವರು “2014ರಲ್ಲಿ ಸಿಲುಕಿಕೊಂಡಿದ್ದಾರೆ”. ಅವರು ವಾಸ್ತವದೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರೂ ಅವರು ಇನ್ನೂ ಭ್ರಮೆಯಿಂದ ಹೊರಬಂದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಂಗ್ಯವಾಡಿದ್ದಾರೆ. ಇನ್ನು 100 ವರ್ಷವಾದರೂ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ನೀಡದಿರಲು ಜನ ನಿರ್ಧರಿಸಿದ್ದಾರೆ. ದೇಶದಲ್ಲಿ ಬಡವರನ್ನು ಹಸಿವಿನಿಂದ ನರಳದಂತೆ ಮಾಡಿದ್ದೇವೆ. 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ನೀಡಿದ್ದೇವೆ. ಗಾಂಧೀಜಿಯವರ ಸ್ವದೇಶಿ ಕನಸಿಗೆ ಕಾಂಗ್ರೆಸ್​ ಅಡ್ಡಿಯಾಗಿದೆ. ಆತ್ಮನಿರ್ಭರ ಭಾರತಕ್ಕೆ ಕಾಂಗ್ರೆಸ್​ ವಿರುದ್ಧವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭವಾಗಿದ್ದು, ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರನ್ನು ಸ್ಮರಿಸಬೇಕು. ಕಳೆದ 2 ವರ್ಷದಲ್ಲಿ ಬಹುದೊಡ್ಡ ಮಹಾಮಾರಿಯನ್ನು ಎದುರಿಸಿದ್ದೇವೆ. ಭಾರತದಲ್ಲಿ ಶೇ.80ರಷ್ಟು ಜನರಿಗೆ 2 ಡೋಸ್​ ಲಸಿಕೆ ನೀಡಲಾಗಿದೆ. ಕೊರೊನಾದಲ್ಲೂ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲೂ ಕಾಂಗ್ರೆಸ್ ಹದ್ದು ಮೀರಿ ವರ್ತಿಸಿದೆ. ಕೊರೊನಾ ವೇಳೆ ಜನರ ವಲಸೆಗೆ ಕಾಂಗ್ರೆಸ್​ ಟಿಕೆಟ್ ನೀಡಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಲೋಕಸಭೆಯಲ್ಲಿ ವಿಪಕ್ಷಗಳು ಅಡ್ಡಿಪಡಿಸಿವೆ.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ನೀಡಿದ್ದು, ಈ ವೇಳೆ ಲತಾ ಮಂಗೇಶ್ಕರ್​​ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾ ದೀದಿ ನಿಧನದಿಂದ ಭಾರತದ ದನಿಯನ್ನೇ ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಭಾರತ ಜಾಗತಿಕ ನಾಯಕತ್ವದ ಪಾತ್ರವನ್ನು ನಿರ್ವಹಿಸಲಿದೆ. ಹಲವು ವಲಯಗಳಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಇದರಿಂದ ನಾವೆಲ್ಲರೂ ಹೆಮ್ಮೆ ಪಡುವಂತಾಗಿದೆ. ಬಡವರ ಮನೆಗಳಲ್ಲಿ ಮತ್ತು ದೇಶದ ಅತ್ಯಂತ ದೂರದ ಭಾಗಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದರ ಎಂಬ ಬಗ್ಗೆ ಭಾರತೀಯರು ಹೆಮ್ಮೆ ಪಡದಿರಲು ಸಾಧ್ಯವೇ? ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಬಡವರ ಸಂತಸ ದೇಶದ ಶಕ್ತಿಯನ್ನು ಹೆಚ್ಚಿಸಿದೆ. ಬಡವರ ಮನೆಗಳಿಗೆ ಶೌಚಾಲಯ, ವಿದ್ಯುತ್​​ ಸಂಪರ್ಕ ಬಂದಿದೆ. ಇದೀಗ ಬಡವರೂ ಬ್ಯಾಂಕ್​ ಖಾತೆ ತೆರೆಯುವಂತಾಗಿದೆ. ದೇಶದಲ್ಲಿ ಬಡವರ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಬಂದಿದೆ. 2014ರವರೆಗೂ ಜನರಿಗೆ ಯೋಜನೆಗಳು ತಲುಪುತ್ತಿರಲಿಲ್ಲ. 50 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನ ನಡೆಸಿದೆ. ಉತ್ತರ ಪ್ರದೇಶ, ಕರ್ನಾಟಕ, ಬಿಹಾರ, ಗುಜರಾತ್​ನಲ್ಲಿ ಕಾಂಗ್ರೆಸ್​ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ್ರೂ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರ ನೀಡಿದ್ದಾರೆ. ಹಣದುಬ್ಬರ ನಿಯಂತ್ರಿಸಲು ಕಾಂಗ್ರೆಸ್ ವಿಫಲವಾಗಿತ್ತು. ಕೊವಿಡ್ ಸಂಕಷ್ಟದಲ್ಲೂ ನಾವು ಹಣದುಬ್ಬರ ನಿಯಂತ್ರಿಸಿದ್ದೇವೆ. ಜನಸಾಮಾನ್ಯರನ್ನು ಚಿದಂಬರಂ ಅಣಕವಾಡಿದ್ದಾರೆ. ಕಾಂಗ್ರೆಸ್​ನವರು ದೇಶದ ಉದ್ಯಮಿಗಳನ್ನೇ ವೈರಸ್ ಅಂತಿದ್ದಾರೆ. ನಮ್ಮ ಉದ್ಯಮಿಗಳನ್ನ ಕೊರೊನಾ ವೈರಸ್ ಅಂದ್ರೆ ಹೇಗೆ? ಇತಿಹಾಸದಿಂದ ಪಾಠ ಕಲಿಯದಿದ್ದರೆ ಉಳಿಗಾಲ ಇಲ್ಲ. ಕಾಂಗ್ರೆಸ್ ಪಕ್ಷ ಇತಿಹಾಸದಲ್ಲಿಯೇ ಕಳೆದು ಹೋಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಇದ್ದಾಗ ವ್ಯವಸ್ಥೆ ಹೇಗಿತ್ತು? ಕಾಂಗ್ರೆಸ್ ನೀತಿಯಿಂದ ಬೆಲೆ ಏರಿಕೆ ಅಸ್ತವ್ಯಸ್ತ ಸ್ಥಿತಿಯಲ್ಲಿತ್ತು. ಬೆಲೆ ಏರಿಕೆ ಪರಿಸ್ಥಿತಿ ಇಳಿಸಲಾಗದಷ್ಟು ನಿಯಂತ್ರಣ ತಪ್ಪಿತ್ತು. ಬೆಲೆ ಏರಿಕೆಯನ್ನು ನಿಯಂತ್ರಿಸಲು ಆದ್ಯತೆ ನೀಡಿದ್ದು ನಮ್ಮ ಎನ್​ಡಿಎ ಸರ್ಕಾರ. ಆಗೆಲ್ಲಾ ಜನಸಾಮಾನ್ಯರನ್ನು ಪಿ. ಚಿದಂಬರಂ ಅಣಕಿಸುತ್ತಿದ್ದರು. ಯುಪಿಎ ಸರ್ಕಾರದ ಕಾಲದಲ್ಲಿ ಬೆಲೆ ಏರಿಕೆ ದರ ಡಬಲ್ ಡಿಜಿಟ್‌ ಆಗಿತ್ತು. ಆದರೆ ನಮ್ಮ ಅವಧಿಯಲ್ಲಿ ಬೆಲೆ ಏರಿಕೆ ದರ ಶೇಕಡಾ 5.2 ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಓವೈಸಿ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ಬಗ್ಗೆ ಸಂಸತ್​​ನಲ್ಲಿ ಹೇಳಿಕೆ ನೀಡಲಿದ್ದಾರೆ ಅಮಿತ್ ಶಾ

Union Budget 2022: ಇಂದಿನಿಂದ ಬಜೆಟ್​ ಅಧಿವೇಶನ ಪ್ರಾರಂಭ; ಆರ್ಥಿಕ ಸಮೀಕ್ಷೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada