Union Budget 2022: ಇಂದಿನಿಂದ ಬಜೆಟ್​ ಅಧಿವೇಶನ ಪ್ರಾರಂಭ; ಆರ್ಥಿಕ ಸಮೀಕ್ಷೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್​

ಕೊವಿಡ್​ 19 ಇರುವುದರಿಂದ ಲೋಕಸಭೆಯಲ್ಲಿ ಫೆ.2ರಿಂದ 11ರವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಕಲಾಪ ನಡೆಯಲಿದ್ದು, ರಾಜ್ಯಸಭೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ಗಂಟೆವರೆಗೆ ನಡೆಯಲಿದೆ.

Union Budget 2022: ಇಂದಿನಿಂದ  ಬಜೆಟ್​ ಅಧಿವೇಶನ ಪ್ರಾರಂಭ; ಆರ್ಥಿಕ ಸಮೀಕ್ಷೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 31, 2022 | 11:21 AM

ಸಂಸತ್ತಿನ ಬಜೆಟ್​ ಅಧಿವೇಶನ (Budget Session of Parliament )ಇಂದಿನಿಂದ (ಜ.31)ರಿಂದ ಪ್ರಾರಂಭವಾಗಲಿದ್ದು, ಬೆಳಗ್ಗೆ 11ಗಂಟೆಗೆ ಸಂಸತ್ತಿನ ಸೆಂಟ್ರಲ್​​ ಹಾಲ್​​ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind)​ ಅವರು ಎರಡೂ ಸದನಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ಅರ್ಧಗಂಟೆ ಬಳಿಕ, ಲೋಕಸಭೆಯಲ್ಲಿ ಅಧಿವೇಶನ ಶುರುವಾಗಲಿದೆ.  ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಲಿದ್ದಾರೆ. ನಾಳೆ (ಫೆ.1) 2022-23ನೇ ಸಾಲಿನ ಬಜೆಟ್​ ಮಂಡನೆ ಮಾಡಲಿದ್ದಾರೆ.  

ಲೋಕಸಭೆ ಬಜೆಟ್​ ಅಧಿವೇಶನಕ್ಕೆ ಸಂಬಂಧಪಟ್ಟ ಕೆಲ ಪ್ರಮುಖ ಮಾಹಿತಿಗಳು ಇಲ್ಲಿವೆ

1. ಬಜೆಟ್​ ಅಧಿವೇಶನ ಎರಡು ಅವಧಿಗೆ ನಡೆಯಲಿದ್ದು, ಮೊದಲ ಅವಧಿ ಫೆ.11ರವರೆಗೆ ಇರಲಿದೆ. ನಂತರ  ಫೆ.12ರಿಂದ ಮಾರ್ಚ್​ 13ರವರೆಗೆ ಬಿಡುವು ಇರಲಿದೆ. ಈ ವೇಳೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಂಚಿಕೆಯಾದ ಬಜೆಟ್​ ಹಂಚಿಕೆಯನ್ನು ಸ್ಥಾಯಿ ಸಮಿತಿಗಳು ಪರಿಶೀಲನೆ ನಡೆಸಿ, ಆ ಸಂಬಂಧ ವರದಿ ಸಿದ್ಧಪಡಿಸಲಿವೆ. ಎರಡನೇ ಅವಧಿ ಅಧಿವೇಶನ ಮಾರ್ಚ್​ 14ರಿಂದ ಶುರುವಾಗಿ, ಏಪ್ರಿಲ್​ 8ಕ್ಕೆ ಮುಕ್ತಾಯವಾಗುತ್ತದೆ.

2. ಬಜೆಟ್​ ಅಧಿವೇಶನ ಪ್ರಾರಂಭವಾದ ಇಂದು (ಜ.31) ಮತ್ತು ಬಜೆಟ್​ ಮಂಡನೆಯಾಗಲಿರುವ ದಿನ (ನಾಳೆ-ಫೆ.1) ಸಂಸತ್ತಿನಲ್ಲಿ ಯಾವುದೇ ರೀತಿಯ ಶೂನ್ಯ ವೇಳೆಯಾಗಲಿ, ಪ್ರಶ್ನೋತ್ತರ ಸಮಯವಾಗಲೀ ಇರುವುದಿಲ್ಲ. ಇದು ರಾಜ್ಯ ಮತ್ತು ಲೋಕಸಭೆ ಎರಡಕ್ಕೂ ಅನ್ವಯ.

3. ಇಷ್ಟು ವರ್ಷ ಶೂನ್ಯ ವೇಳೆ ಅವಧಿ 1 ಗಂಟೆ ಇರುತ್ತಿತ್ತು. ಅದನ್ನು 30 ನಿಮಿಷಗಳಿಗೆ ಕಡಿತಗೊಳಿಸಲು ರಾಜ್ಯ ಸಭೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ಲೋಕಸಭೆ ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ.

4.  ಈ ಬಾರಿ ಬಜೆಟ್​ ಅಧಿವೇಶನದಲ್ಲಿ ಒಟ್ಟು 29 ಬೈಠಕ್​ಗಳು ನಡೆಯಲಿದ್ದು, ಮೊದಲ ಅವಧಿಯಲ್ಲಿ 10 ಮತ್ತು ಎರಡನೇ ಅವಧಿಯಲ್ಲಿ 19 ಬೈಠಕ್​​ಗಳು ನಡೆಯಲಿವೆ. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗೆಗಿನ ಚರ್ಚೆಗೆ ಕೇಂದ್ರ ಸರ್ಕಾರ ನಾಲ್ಕು ದಿನ ನಿಗದಿಪಡಿಸಿದೆ. ಅಂದರೆ ಫೆ.2, 3, 4,7ರಂದು ವಂದನಾ ನಿರ್ಣಯದ ಚರ್ಚೆ ನಡೆಯಲಿದೆ.

5. ಕೊವಿಡ್​ 19 ಇರುವುದರಿಂದ ಲೋಕಸಭೆಯಲ್ಲಿ ಫೆ.2ರಿಂದ 11ರವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಕಲಾಪ ನಡೆಯಲಿದ್ದು, ರಾಜ್ಯಸಭೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ಗಂಟೆವರೆಗೆ ನಡೆಯಲಿದೆ.  ಅಂದಹಾಗೆ, ಫೆ.1ರಂದು ಬಜೆಟ್​ ಮಂಡನೆಯಾಗುವುದಕ್ಕೂ ಮೊದಲು ಬೆಳಗ್ಗೆ 10.10ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.

ಇದನ್ನೂ ಓದಿ: ಧಾರವಾಡದಲ್ಲಿ 8 ಮನೆಗಳ ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ ದುಷ್ಕರ್ಮಿಗಳು! ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಸ್ಥಳೀಯರು