ದೆಹಲಿ: ಪೊಲೀಸರಿಗೆ ಶರಣಾಗಲು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಜೀಪುರ ಗಡಿಯಲ್ಲಿ ಪೊಲೀಸರಿಗೆ ಶರಣಾಗಲು ರಾಕೇಶ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಜೊತೆಗೆ, ಗಾಜೀಪುರ ಗಡಿಯಲ್ಲಿ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದ್ದು ಪೊಲೀಸರು ನನ್ನ ಹತ್ಯೆಗೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ. ಪೊಲೀಸರು ಬಂಧಿಸಿದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಸಹ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಹೋರಾಟಗಾರರು ಧ್ವಜಾರೋಹಣ ಮಾಡಿಲ್ಲ ಎಂದು ಗಾಜೀಪುರ ಗಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆಯಲ್ಲಿ ಯಾರಿದ್ದರೆಂದು ತನಿಖೆ ಆಗಲಿ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲೇ ತನಿಖೆ ಮಾಡಿಸಲಿ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇದೀಗ, ರಾಕೇಶ್ ಟಿಕಾಯತ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ದೆಹಲಿಯ ಗಾಜೀಪುರ ಗಡಿಯಲ್ಲಿ ಟಿಕಾಯತ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಪೊಲೀಸರು ಗಾಜೀಪುರ ಗಡಿಯ ಎರಡೂ ಕಡೆಗಳನ್ನು ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಗಾಜೀಪುರ ಗಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸರು ಆದೇಶ ಸಹ ಹೊರಡಿಸಿದ್ದಾರೆ.
ಇತ್ತ, ಜ.26ರಂದು ರೈತರಿಂದ ಟ್ರ್ಯಾಕ್ಟರ್ ಪರೇಡ್ ವೇಳೆ ದೆಹಲಿಯ ಹಿಂಸಾಚಾರ ಸಂಬಂಧ 33 FIR ದಾಖಲಾಗಿದೆ. ದೆಹಲಿ ನಗರದ ವಿವಿಧ ಠಾಣೆಗಳಲ್ಲಿ 33 FIR ದಾಖಲಾಗಿದೆ. ಜೊತೆಗೆ, ರೈತ ಮುಖಂಡರು ಸೇರಿ 44 ಜನರಿಗೆ ಲುಕ್‌ಔಟ್ ನೋಟಿಸ್ ಸಹ ನೀಡಲಾಗಿದೆ.
ಇದರ ಜೊತೆಗೆ, ಪ್ರತಿಭಟನಾ ನಿರತ ರೈತರ ತೆರವಿಗೆ ಜಿಲ್ಲಾಡಳಿತದಿಂದ ಸೂಚನೆ ಹೊರಡಿಸಲಾಗಿದೆ. ಗಾಜಿಪುರ, ಟಿಕ್ರಿ ಗಡಿಯನ್ನು ಖಾಲಿ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇದಲ್ಲದೆ, ಗಾಜಿಪುರ, ಟಿಕ್ರಿ ಗಡಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಪೊಲೀಸ್ ಕಾರ್ಯಾಚರಣೆ ಮೂಲಕ ರೈತರ ತೆರವಿಗೆ ಪ್ಲ್ಯಾನ್ ಮಾಡಲಾಗಿದೆ. ಇಂದು ರಾತ್ರಿಯೇ ರೈತರನ್ನ ಜಾಗ ಖಾಲಿ ಮಾಡಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂಟರ್ನೆಟ್, SMS ಸೇವೆ ಸ್ಥಗಿತ ಮುಂದುವರಿಕೆ
ಇದೀಗ, ಟ್ರ್ಯಾಕ್ಟರ್ ಪರೇಡ್ ವೇಳೆ ದೆಹಲಿಯ ಹಿಂಸಾಚಾರದ ಹಿನ್ನೆಲೆಯಲ್ಲಿ ಹರಿಯಾಣದ 3ಜಿಲ್ಲೆಗಳಲ್ಲಿ ಇಂಟರ್ನೆಟ್ ಹಾಗೂ SMS ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ, ನಾಳೆ ಸಂಜೆ 5 ರವರೆಗೆ ಇಂಟರ್ನೆಟ್ ಮತ್ತು ಸೇವೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. ಹಾಗಾಗಿ, ಸೋನಿಪತ್, ಪಾಲ್ವಾಲ್, ಝಜ್ಜರ್ ಜಿಲ್ಲೆಗಳಲ್ಲಿ ಸೇವೆ ಸ್ಥಗಿತ ಆದೇಶವನ್ನು ಹರಿಯಾಣ ಸರ್ಕಾರ ಮುಂದುವರಿಸಿದೆ.
ರೈತರ ಹೋರಾಟಕ್ಕೆ ಅಣ್ಣಾ ಹಜಾರೆ ಬೆಂಬಲ: ಕೃಷಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
Published On - 7:05 pm, Thu, 28 January 21