ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲಗೊಂಡಿದೆ. ಸೋಮವಾರ ಬೆಳಗ್ಗೆ ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲಗೊಂಡ ಹಿನ್ನೆಲೆಯಲ್ಲಿ ನಾರಾಯಣ ಸ್ವಾಮಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನಾರಾಯಣ ಸ್ವಾಮಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾದ ಕೂಡಲೇ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ಸದಸ್ಯರು ಸದನದಿಂದ ಹೊರನಡೆದಿದ್ದಾರೆ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾಗಿದೆ ಎಂದು ಸ್ಪೀಕರ್ ವಿ.ಪಿ.ಶಿವಕೋಲುಂಧು ಘೋಷಿಸಿದ್ದಾರೆ.
ಬಹುಮತ ಸಾಬೀತು ಮಾಡುವ ಮುನ್ನ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ತಮಗೆ ಬಹುಮತ ಇದೆ ಎಂದು ವಾದಿಸಿದ ನಾರಾಯಣ ಸ್ವಾಮಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದರು. ಬಿಜೆಪಿ ಅಧಿಕಾರಕ್ಕೇರಿದರೆ ಕಪ್ಪು ಹಣ ವಾಪಸ್ ತರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಕಪ್ಪು ಹಣ ವಾಪಸ್ ತಂದರೆ ಪ್ರತಿಯೊಬ್ಬರ ಖಾತೆಗೂ ₹15ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಕಪ್ಪು ಹಣ ಎಲ್ಲಿದೆ?
ನಮ್ಮ ಸರ್ಕಾರ ಸಹಕಾರಿ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಸಣ್ಣ ಕೃಷಿಕರಿಗೆ ಮೋದಿ ಸರ್ಕಾರ 6000 ರೂಪಾಯಿ ನೀಡುತ್ತಿದೆ. ನಾವು 37,500 ರೂಪಾಯಿ ನೀಡುತ್ತಿದ್ದೇವೆ. ಕೋವಿಡ್ 19 ಸಾಂಕ್ರಾಮಿಕದ ಹೊತ್ತಲ್ಲಿ ಶಾಸಕರೊಂದಿಗೆ ಸೇರಿ ಸಾನು ಕೆಲಸ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಲೆಫ್ಟಿನೆಂಟ್ ಜನರಲ್ ಕಿರಣ್ ಬೇಡಿ ನಮ್ಮನ್ನು ದಮನಿಸಲು ಯತ್ನಿಸಿದ್ದರು. ಆದರೂ ನಾವು ಕೆಲಸ ಮಾಡಿದೆವ. ಜನರಿಂದ ಚುನಾಯಿತರಾದವರಿಗೆ ಅಧಿಕಾರ ನಡೆಸಲು ಬಿಡಬೇಕು ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ಪುದುಚೇರಿಗೆ ಬಂದಾಗ, ಪುದುಚೇರಿಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂದು ಹೇಳಿದ್ದರು. ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಾವು ಎರಡು ಭಾಷಾ ಪದ್ದತಿ (ತಮಿಳು ಮತ್ತು ಇಂಗ್ಲಿಷ್) ಅನುಸರಿಸುತ್ತಿದ್ದೇವೆ. ಆದರೆ ಬಿಜೆಪಿ ಬಲವಂತವಾಗಿ ಹಿಂದಿ ಹೇರುತ್ತಿದೆ ಎಂದು ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಏಪ್ರಿಲ್/ ಮೇ ತಿಂಗಳಲ್ಲಿ ಚುನಾವಣೆ ಸಾಧ್ಯತೆ
ಪುದುಚೇರಿಯಲ್ಲಿ ಏಪ್ರಿಲ್/ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಗೆಲುವು ಸಾಧಿಸಿತ್ತು
ಪುದುಚೇರಿ ರಾಜಕೀಯ ಬಿಕ್ಕಟ್ಟು
ಜನವರಿ 25: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ವಜಾಗೊಂಡ ಕೆಲವೇ ಗಂಟೆಗಳಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಎ.ನಮಸ್ಸಿವಾಯಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕ ಇ. ತೀಪೈದನ್ ಕೂಡಾ ರಾಜೀನಾಮೆ. ಮರುದಿನ ಇವರಿಬ್ಬರೂ ಬಿಜೆಪಿ ಸೇರಿದ್ದರು.
ಫೆಬ್ರವರಿ 15: ಆರೋಗ್ಯ ಸಚಿವ ಮಲ್ಲಡಿ ಕೃಷ್ಣ ರಾವ್ ರಾಜೀನಾಮೆ. ರಾವ್ ಅವರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 11ಕ್ಕೆ ಇಳಿದಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಇನ್ನೊಬ್ಬ ಶಾಸಕ ಎನ್. ಧನವೇಲು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅನರ್ಹಗೊಂಡಿದ್ದರು.
ಫೆಬ್ರವರಿ 16: ಶಾಸಕ ಎ. ಜಾನ್ ಕುಮಾರ್ ರಾಜೀನಾಮೆ. ಮರುದಿನವೇ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ಪದಚ್ಯುತಿ. ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ.
ಫೆಬ್ರವರಿ 17: ಎನ್. ರಂಗಸ್ವಾಮಿ ನೇತೃತ್ವದ ವಿಪಕ್ಷಗಳು ಆಡಳಿತಾರೂಢ ಪಕ್ಷ ಬಹುಮತ ಸಾಬೀತು ಪಡಿಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಸಲ್ಲಿಕೆ. ಆಡಳಿತಾರೂಢ ಪಕ್ಷವು ಅಲ್ಪಮತಕ್ಕೆ ಕುಸಿದಿದ್ದು ಎರಡೂ ಪಕ್ಷಗಳು ಈಗ 14 ಸದಸ್ಯರನ್ನು ಹೊಂದಿದ್ದಾರೆ.
ಫೆಬ್ರವರಿ 18: ತಮಿಳಿಸೈ ಸೌಂದರರಾಜನ್ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕಾರ. ಫೆಬ್ರವರಿ 22, ಸಂಜೆ 5ರಂದು ಬಹುಮತ ಸಾಬೀತುಪಡಿಸುವಂತೆ ಆಡಳಿತ ಪಕ್ಷಕ್ಕೆ ಆದೇಶ. ಸೋಮವಾರ ವಿಶೇಷ ಅಧಿವೇಶನ ನಡೆಸುವ ಬಗ್ಗೆ ಶಾಸನ ಸಭೆ ಕಾರ್ಯದರ್ಶಿ ಹೇಳಿಕೆ.
ಫೆಬ್ರವರಿ 21: ಕಾಂಗ್ರೆಸ್ ಪಕ್ಷದ ಕೆ. ಲಕ್ಷ್ಮಿನಾರಾಯಣನ್ ಮತ್ತು ಡಿಎಂಕೆ ಪಕ್ಷದ ವೆಂಕಟೇಶನ್ ರಾಜೀನಾಮೆ. ನಾರಾಯಣ ಸ್ವಾಮಿ ಅವರಿಂದ ಎರಡನೇ ಬಾರಿ ಶಾಸಕರ ಭೇಟಿ.
ಫೆಬ್ರವರಿ 22: ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲ, ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ರಾಜೀನಾಮೆ.
ಇದನ್ನೂ ಓದಿ: Puducherry Politics | ಪುದುಚೇರಿಯ ಕ್ಷಿಪ್ರ ರಾಜಕೀಯ ಬೆಳವಣಿಗೆಯ ಹಿಂದಿದೆ ಬಿಜೆಪಿ ಮಹತ್ವಾಕಾಂಕ್ಷೆ
Published On - 11:38 am, Mon, 22 February 21