ಕಳೆದ ಕೆಲ ವರ್ಷಗಳಿಂದ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ರಾಜ್ಯಪಾಲರಾದ ಕಿರಣ್ ಬೇಡಿ ಮಧ್ಯ ನಡೆಯುತ್ತಿದ್ದ ಶೀತಲಸಮರ, ಭಿನ್ನಾಭಿಪ್ರಾಯ ತಾರಕ್ಕೇರಿದೆ. ಒಂದೆಡೆ ರಾಜ್ಯಪಾಲೆಯಾಗಿದ್ದ ಕಿರಣ್ ಬೇಡಿ ಅವರನ್ನು ರಾಜ್ಯಪಾಲರ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ. ಇನ್ನೊಂದೆಡೆ, ಮುಖ್ಯಮಂತ್ರಿ ನಾರಾಯಣ ಸ್ವಾಮಿ ಎದುರು ರಾಜಕೀಯ ಸವಾಲುಗಳು ಕಾಣಿಸಿಕೊಂಡಿವೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇನ್ನು ಎರಡು ತಿಂಗಳಲ್ಲಿ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ರಾಜ್ಯಪಾಲೆ ಕಿರಣ್ ಬೇಡಿ ಜೊತೆ ಆರಂಭದಿಂದಲೂ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ಆಡಳಿತಾತ್ಮಕ ಸಂಬಂಧ ಸರಿಯಿರಲಿಲ್ಲ. ಇದೀಗ ಕಿರಣ್ಬೇಡಿಯನ್ನು ರಾಜಪಾಲರ ಸ್ಥಾನದಿಂದ ಪದಚ್ಯುತಿಗೊಳಿಸಿರುವ ರಾಷ್ಟ್ರಪತಿಗಳು ತೆಲಂಗಾಣ ರಾಜ್ಯಪಾಲರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಇಬ್ಬರು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದರಿಂದ 30 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 14ಕ್ಕೆ ಕುಸಿದಿದೆ. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ. ಸ್ವತಃ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ನಿನ್ನೆ (ಫೆ.17) ಪುದುಚೇರಿಗೆ ದೌಡಾಯಿಸಿದ್ದರು.
30 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಸದಸ್ಯ ಬಲದೊಂದಿಗೆ ಅಧಿಕಾರ ಹಿಡಿದಿತ್ತು. ನಾಲ್ವರು ರಾಜೀನಾಮೆ ನೀಡಿರುವುದರಿಂದ ಸದಸ್ಯ ಬಲ 14ಕ್ಕೆ ಕುಸಿದಿದೆ. ಅಧಿಕಾರದಲ್ಲಿ ಉಳಿಯಲು ಬೇಕಾಗಿರುವ ಮ್ಯಾಜಿಕ್ ನಂಬರ್ 16. ವಿಧಾನಸಭೆಯ ಅಧಿಕಾರ ಅವಧಿ ಕೇವಲ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ನಡೆದಿರುವ ಈ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಅವಧಿಪೂರ್ವ ಚುನಾವಣೆ ನಡೆಸಿ ಪುದುಚೇರಿಯಲ್ಲಿಯೂ ಅಧಿಕಾರಕ್ಕೆ ಬರುವುದು ಬಿಜೆಪಿಯ ಉದ್ದೇಶ.
ರಾಜ್ಯಪಾಲರಾಗಿದ್ದ ಕಿರಣ್ ಬೇಡಿ ಅಧಿಕಾರದಿಂದ ಕೆಳಗಿಳಿಯುವ ಮುಂಚೆ, ‘ಜನರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳಬೇಕು, ಒಳ್ಳೆಯ ಸರಕಾರವನ್ನು ಆಯ್ಕೆ ಮಾಡಬೇಕು’ ಎಂಬ ಪ್ರಕಟಣೆ ನೀಡಿರುವುದನ್ನೂ ಈ ಹಿನ್ನೆಲೆಯಲ್ಲಿಯೇ ವ್ಯಾಖ್ಯಾನಿಸಲಾಗುತ್ತಿದೆ. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರ್ಯರಾಜನ್ ಅವರಿಗೆ ಇದೀಗ ಪುದುಚೇರಿ ರಾಜ್ಯಪಾಲರ ಪ್ರಭಾರ ವಹಿಸಲಾಗಿದೆ. ಸದ್ಯದ ಪರಿಸ್ಥಿತಿ ನಿಭಾಯಿಸುವ ಹಾಗೂ ಚುನಾವಣೆ ನಡೆಸುವ ಜವಾಬ್ದಾರಿ ತೆಲಂಗಾಣ ರಾಜ್ಯಪಾಲರ ಹೆಗಲೇರಿದೆ.
ಇದನ್ನೂ ಓದಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ಪದಚ್ಯುತಿ