Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್​ ಬೇಡಿ ತೆರವು

ಕಿರಣ್ ಬೇಡಿ​ ಅವರನ್ನು ಮಂಗಳವಾರ ಪುದುಚೇರಿ ಗವರ್ನರ್ ಹುದ್ದೆಯಿಂದ ಬದಲಾಯಿಸಲಾಗಿದೆ. ತೆಲಂಗಾಣ ರಾಜ್ಯಪಾಲರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

  • TV9 Web Team
  • Published On - 21:32 PM, 16 Feb 2021
KIRAN BEDI
ಕಿರಣ್ ಬೇಡಿ

ಪುದುಚ್ಚೇರಿ: ಕಿರಣ್ ಬೇಡಿ​ ಅವರನ್ನು ಮಂಗಳವಾರ ಪುದುಚೇರಿ ಗವರ್ನರ್ ಹುದ್ದೆಯಿಂದ ಬದಲಾಯಿಸಲಾಗಿದೆ. ತೆಲಂಗಾಣ ರಾಜ್ಯಪಾಲರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಪುದುಚೇರಿಗೆ ಸ್ವತಂತ್ರ ಲೆಫ್ಟಿನೆಂಟ್ ಗವರ್ನರ್ ನೇಮಕವಾಗುವವರೆಗೂ ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಈ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ. ‘ಕಿರಣ್​ಬೇಡಿ ಅವರನ್ನು ಪುದುಚೇರಿ ರಾಜ್ಯಪಾಲರ ಹುದ್ದೆಯಿಂದ ತೆರವುಗೊಳಿಸಲಾಗಿದೆ’ ಎಂಬ ರಾಷ್ಟ್ರಪತಿ ಭವನದ ವಕ್ತಾರರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.

ಪುದುಚೇರಿ ವಿಧಾನಸಭೆಯ ಹಲವು ಕಾಂಗ್ರೆಸ್ ಸದಸ್ಯರು ಈಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವರ್ಷಾಂತ್ಯದಲ್ಲಿ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದೆ. ಪುದುಚ್ಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ಅವರ ಸಂಪುಟ ಸದಸ್ಯರು ಸಹ ಶೀಘ್ರದಲ್ಲಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕಂದಸ್ವಾಮಿ ಮಂಗಳವಾರ ಹೇಳಿಕೆ ನೀಡಿದ್ದರು.

‘ಕಳೆದ ನಾಲ್ಕೂವರೆ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪುದುಚ್ಚೇರಿಯ ಕಾಂಗ್ರೆಸ್​ ಸರ್ಕಾರವನ್ನು ಗೋಳಾಡಿಸುತ್ತಿದ್ದರು. ಸರ್ಕಾರವನ್ನು ವಜಾ ಮಾಡುವ ಆಲೋಚನೆ ಅವರಿಗಿದೆ. ಮುಖ್ಯಮಂತ್ರಿ ಮತ್ತು ಸಂಪುಟ ಸದಸ್ಯರು ಅವಧಿಗೆ ಮೊದಲೇ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಹೊಸ ಜನಾದೇಶ ಪಡೆಯಲಿದ್ದಾರೆ ಎಂದು ಕಂದಸ್ವಾಮಿ ಹೇಳಿದ್ದರು.

ಇದನ್ನೂ ಓದಿ: ಕಿರಣ್​ ಬೇಡಿ ವಿರುದ್ಧ ಧರಣಿ ಮುಂದುವರಿಸಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ