ಮುಂಬೈ: ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಸಿದ್ಧಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಂತನು ಮುಲುಕ್ಗೆ 10 ದಿನದವರೆಗೆ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು (Transit Anticipatory Bail) ನೀಡಿದೆ. ಆದರೆ, ಇನ್ನೋರ್ವ ಆರೋಪಿ ನಿಕಿತಾ ಜಾಕೋಬ್ ಅರ್ಜಿ ವಿಚಾರಣೆಯನ್ನು ನಾಳೆ ಆಲಿಸುವುದಾಗಿ ಕೋರ್ಟ್ ತಿಳಿಸಿದೆ.
ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗುತ್ತಿದ್ದಂತೆ ವಕೀಲೆ ನಿಖಿತಾ ಜಾಕೋಬ್ ಬಾಂಬೆ ಹೈಕೋರ್ಟ್ನ ಮೊರೆ ಹೋಗಿದ್ದರು.ನಾಲ್ಕು ವಾರಗಳ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಅವರು, ಈ ಅವಧಿಯಲ್ಲಿ ಯಾರೂ ಸಹ ದಬ್ಬಾಳಿಕೆಯಿಂದ ತಮ್ಮನ್ನು ಬಂಧಿಸದಿರುವಂತೆ ಆಜ್ಞೆ ನೀಡುವಂತೆ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಫೆಬ್ರುವರಿ 12ರಂದು ನಿಖಿತಾ ಜಾಕೋಬ್ ಮನೆಗೆ ಭೇಟಿ ನೀಡಿದ್ದ ದೆಹಲಿ ಪೊಲೀಸರು ವಿಚಾರಣೆಗೆ ಸಹಕರಿಸುವಂತೆ ಕೇಳಿದ್ದರು. ಅಂದು ಒಪ್ಪಿಗೆ ನೀಡಿದ್ದ ನಿಖಿತಾ ಜಾಕೋಬ್ ನಂತರ ಭೂಗತರಾಗಿದ್ದರು ಎಂದು ದೆಹಲಿ ಪೊಲೀಸರು ಆರೋಪ ಮಾಡಿದ್ದರು. ಪೊಲೀಸರ ಮನವಿ ಆಲಿಸಿದ್ದ ದೆಹಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿತ್ತು.
ಸಾಕ್ಷ್ಯ ಏನಿದೆ?
ಗೃಹ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ಶರ್ಮಾ, ಸ್ಥಾಯಿ ಸಮಿತಿಯ ಕಾರ್ಯದರ್ಶಿಗೆ ದಿಶಾ ರವಿ ವಿರುದ್ಧದ ದೇಶದ್ರೋಹದ ಆರೋಪ ಹೇಗೆ ಸಾಬೀತು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ದಿಶಾ ರವಿ ಬಂಧನದಿಂದ ಭಾರತದ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಗ್ರಹಿಕೆಗೆ ಹೊಡೆತ ಬೀಳುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಪರಿಸರ ಕಾರ್ಯಕರ್ತೆಯ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯಗಳಿವೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ
ಏನಿದು ಟೂಲ್ ಕಿಟ್?
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್ಕಿಟ್ ಒಂದನ್ನು ಗ್ರೇಟಾ ಟ್ವಿಟ್ರ್ನಲ್ಲಿ ಹಂಚಿಕೊಂಡಿದ್ದರು. ಟೂಲ್ಕಿಟ್ ಎಂದರೆ, ಒಂದು ಪ್ರತಿಭಟನೆ ಅಥವಾ ಒಂದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ. ಪ್ರತಿಭಟನೆ/ಕಾರ್ಯಕ್ರಮ ಹೇಗೆ ನಡೆಯಬೇಕು ಎನ್ನುವ ಮಾಹಿತಿ ಇದರಲ್ಲಿ ಇರುತ್ತದೆ. ಗ್ರೇಟಾ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ, ಪ್ರತಿಭಟನೆಯಲ್ಲಿ ರೈತರು ಭಾಗವಹಿಸಬೇಕು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಸ್ಥಳೀಯ ಸರ್ಕಾರಿ ಕಚೇರಿ ಅಥವಾ ಅದಾನಿ-ಅಂಬಾನಿಯಂಥ ದೊಡ್ಡ ದೊಡ್ಡ ಉದ್ಯಮಿಗಳ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ಜಾಥಾದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎನ್ನುವುದಕ್ಕೆ ಸ್ಫೂರ್ತಿದಾಯಕವಾಗಿತ್ತು ಈ ಟೂಲ್ಕಿಟ್. ಆದರೆ, ಈ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯವಾಗಿತ್ತು. ಗ್ರೇಟಾ ಹಂಚಿಕೊಂಡ ಟೂಲ್ಕಿಟ್ ಹಿಂದೆ ದಿಶಾ ರವಿ, ಶಂತನು ಮುಲಿಕ್ ಕೈವಾಡವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.