IPL 2025: ಅತ್ಯದ್ಭುತ ಕ್ಯಾಚ್ ಹಿಡಿದು ಆರ್ಸಿಬಿಗೆ ಗೆಲುವು ತಂದುಕೊಟ್ಟ ಸಾಲ್ಟ್; ವಿಡಿಯೋ ನೋಡಿ
RCB vs MI: ಐಪಿಎಲ್ 2025 ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಕೊನೆಯ ಓವರ್‌ನಲ್ಲಿ ಮುಂಬೈಗೆ 19 ರನ್ ಬೇಕಾಗಿತ್ತು. ಈ ಓವರ್ನ ಮೊದಲ ಎಸೆತದಲ್ಲಿ ಕೃನಾಲ್, ಸ್ಯಾಂಟ್ನರ್ ಅವರ ವಿಕೆಟ್ ಪಡೆದರು. ನಂತರ ಬಂದ ದೀಪಕ್ ಚಾಹರ್ ಕೂಡ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಈ ವೇಳೆ ಫಿಲ್ ಸಾಲ್ಟ್ ಅತ್ಯದ್ಭುತ ಕ್ಯಾಚ್ ಹಿಡಿದು ಆರ್ಸಿಬಿ ಗೆಲುವನ್ನು ಖಚಿತಪಡಿಸಿದರು.
ಐಪಿಎಲ್ 2025 ರ 20 ನೇ ಪಂದ್ಯವು ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 221 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು ಕೇವಲ 209 ರನ್‌ಗಳಿಸಲಷ್ಟೇ ಶಕ್ತವಾಯಿತು.
ವಾಸ್ತವವಾಗಿ ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 6 ಎಸೆತಗಳಲ್ಲಿ 19 ರನ್ ಬೇಕಾಗಿದ್ದವು. ಒಂದೆಡೆ ಆರ್ಸಿಬಿ ಪರ ಆಫ್ ಸ್ಪಿನ್ನರ್ ಕೃನಾಲ್ ಪಾಂಡ್ಯ ದಾಳಿಗಿಳಿದರೆ, ಇನ್ನೊಂದೆಡೆ ಮಿಚೆಲ್ ಸ್ಯಾಂಟ್ನರ್ ಸ್ಟ್ರೈಕ್ನಲ್ಲಿದ್ದರು. ಸ್ಯಾಂಟ್ನರ್ 19ನೇ ಓವರ್‌ನಲ್ಲಿ 1 ಸಿಕ್ಸರ್ ಸಿಡಿಸಿದ್ದ ಕಾರಣ ಅವರು ಅಪಾಯಕಾರಿಯಾಗಿ ಕಾಣುತ್ತಿದ್ದರು. ಅದರಂತೆ ಕೃನಾಲ್ ಎಸೆದ ಮೊದಲ ಎಸೆತವನ್ನು ಸಿಕ್ಸರ್ಗಟ್ಟಲು ಸ್ಯಾಂಟ್ನರ್ ಯತ್ನಿಸಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಲಾಂಗ್ ಆಫ್ನಲ್ಲಿ ನಿಂತಿದ್ದ ಟಿಮ್ ಡೇವಿಡ್ ಸುಲಭ ಕ್ಯಾಚ್ ತೆಗೆದುಕೊಂಡರು.
ಆ ಬಳಿಕ ಬಂದ ದೀಪಕ್ ಚಹರ್ ಕೂಡ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಲು ಯತ್ನಿಸಿದರು. ಆದರೆ ಡೀಪ್ ಮಿಡ್ವಿಕೆಟ್ನಲ್ಲಿ ನಿಂತಿದ್ದ ಫಿಲ್ ಸಾಲ್ಟ್ ಲಾಂಗ್ ಆಫ್ನತ್ತ ಓಡಿ ಬಂದು ಕ್ಯಾಚ್ ತೆಗೆದುಕೊಂಡರು. ಆದರೆ ಇಲ್ಲಿ ನಿಯಂತ್ರಣ ಕಳೆದುಕೊಂಡ ಸಾಲ್ಟ್ ಬೌಂಡರಿಯಿಂದ ಆಚೆ ಹೋಗಲಾರಂಭಿಸಿದರು. ಈ ವೇಳೆ ಅವರು ಕ್ಯಾಚ್ ಅನ್ನು ಹಿಡಿದು ಮೇಲಕ್ಕೆ ಎಸೆದರು. ಇತ್ತ ಲಾಂಗ್ ಆಫ್ನಿಂದ ಸಾಲ್ಟ್ ಬಳಿಗೆ ಓಡಿ ಬಂದಿದ್ದ ಟಿಮ್ ಡೇವಿಡ್ ಈ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಮುಂಬೈ 2 ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಕಳೆದಕೊಂಡಿತು. ಕೊನೆಗೆ ಈ ಓವರ್‌ನಲ್ಲಿ ಕೇವಲ 6 ರನ್ಗಳನ್ನು ಮಾತ್ರ ಕಲೆಹಾಕಿದ ಮುಂಬೈ 12 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು.