ಆಸ್ತಿ ಖರೀದಿಯಲ್ಲಿ ಅಕ್ರಮ: ಬಿಜೆಪಿ ನಾಯಕ ಮನ್‌ಪ್ರೀತ್ ಸಿಂಗ್ ಬಾದಲ್‌ಗಾಗಿ ಹುಡುಕಾಟ

|

Updated on: Sep 29, 2023 | 2:36 PM

Manpreet Singh Badal: ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಬಾದಲ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳವಾರ ಅಧಿಕಾರಿಗಳು ಅವರ ನಿವಾಸ ಮತ್ತು ಇತರ ಗೊತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಪಂಜಾಬ್ ಮಾಜಿ ಸಚಿವರ ವಿರುದ್ಧ ಸೋಮವಾರ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿದೆ

ಆಸ್ತಿ ಖರೀದಿಯಲ್ಲಿ ಅಕ್ರಮ: ಬಿಜೆಪಿ ನಾಯಕ ಮನ್‌ಪ್ರೀತ್ ಸಿಂಗ್ ಬಾದಲ್‌ಗಾಗಿ ಹುಡುಕಾಟ
ಮನ್‌ಪ್ರೀತ್ ಬಾದಲ್
Follow us on

ಅಮೃತಸರ ಸೆಪ್ಟೆಂಬರ್ 29: ಬಟಿಂಡಾದಲ್ಲಿ ಆಸ್ತಿ ಖರೀದಿಯಲ್ಲಿ ಅಕ್ರಮಗಳ ಆರೋಪದ ಪ್ರಕರಣದಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ (Manpreet Singh Badal) ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಪಂಜಾಬ್ ವಿಜಿಲೆನ್ಸ್ ಬ್ಯೂರೋ(Vigilance Bureau) ಮನ್‌ಪ್ರೀತ್ ಸಿಂಗ್ ಬಾದಲ್ ವಿರುದ್ಧ ಲುಕ್‌ಔಟ್ ಸುತ್ತೋಲೆ (LOC) ಹೊರಡಿಸಿದ ನಂತರ ಈ ನ್ಯಾಯಾಲಯದ ಆದೇಶ ಬಂದಿದೆ. ಮನ್‌ಪ್ರೀತ್ ಬಾದಲ್ ವಿದೇಶಕ್ಕೆ ತೆರಳಲು ಮುಂದಾಗಿದ್ದಾರೆ ಎಂದು ವಿಜಿಲೆನ್ಸ್ ಶಂಕೆ ವ್ಯಕ್ತಪಡಿಸಿದೆ. ಆಸ್ತಿ ಖರೀದಿ ಪ್ರಕರಣದಲ್ಲಿ ಅವ್ಯವಹಾರದ ಆರೋಪ ಹೊತ್ತಿರುವ ಪಂಜಾಬ್ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರನ್ನು ಬಂಧಿಸಲು ವಿಜಿಲೆನ್ಸ್ ಇಲಾಖೆ ವಿವಿಧ ರಾಜ್ಯಗಳಲ್ಲಿ ಹಲವು ಬಾರಿ ದಾಳಿ ನಡೆಸಿದೆ. ಹಿಮಾಚಲ ಪ್ರದೇಶ, ಹರ್ಯಾಣ, ದೆಹಲಿ, ಉತ್ತರಾಖಂಡ ಮತ್ತು ರಾಜಸ್ಥಾನದ ಸ್ಥಳಗಳಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ಪತ್ತೆಗಾಗಿ ದಾಳಿ ನಡೆಸಲಾಗುತ್ತಿದೆ, ಅವರು ಎರಡು ವಾಣಿಜ್ಯ ಪ್ಲಾಟ್‌ಗಳನ್ನು ತನಗಾಗಿ ವಸತಿ ನಿವೇಶನವನ್ನಾಗಿ ಪರಿವರ್ತಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೂವರ ಬಂಧನ

ವಿಜಿಲೆನ್ಸ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409,420,467,468,471,120,66 ಅಡಿಯಲ್ಲಿ ಮನ್‌ಪ್ರೀತ್ ಬಾದಲ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಮಾಜಿ ಶಾಸಕ ಸರೂಪ್ ಚಂದ್ ಸಿಂಗ್ಲಾ ಅವರು 2021 ರಲ್ಲಿ ನೀಡಿದ ದೂರಿನ ಆಧಾರದ ಮೇಲೆ ವಿಜಿಲೆನ್ಸ್ ಬ್ಯೂರೋ ಈ ಬಗ್ಗೆ ತನಿಖೆ ಆರಂಭಿಸಿತ್ತು. ಮಾಡೆಲ್ ಟೌನ್ ನಲ್ಲಿ ನಿವೇಶನ ಖರೀದಿಸಿದ ಪ್ರಕರಣದಲ್ಲಿ ಕಳೆದ ಹಲವು ತಿಂಗಳಿಂದ ಮನ್ ಪ್ರೀತ್ ಬಾದಲ್ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಸುತ್ತಿದೆ. ಇದಕ್ಕೂ ಮುನ್ನ ಜುಲೈ 24 ರಂದು ಮನ್‌ಪ್ರೀತ್ ಬಾದಲ್ ವಿಜಿಲೆನ್ಸ್ ಕಚೇರಿಗೆ ಹಾಜರಾಗಿದ್ದರು, ಆದರೆ ಪ್ರಸ್ತುತ ಯಾವುದೇ ವಿಜಿಲೆನ್ಸ್ ಅಧಿಕಾರಿ ಈ ವಿಷಯದಲ್ಲಿ ಮಾತನಾಡಲು ಸಿದ್ಧವಾಗಿಲ್ಲ.

ಪೊಲೀಸರಿಂದ ಶೋಧ

ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಬಾದಲ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಮಂಗಳವಾರವೂ ಅಧಿಕಾರಿಗಳು ಅವರ ನಿವಾಸ ಮತ್ತು ಇತರ ಗೊತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಪಂಜಾಬ್ ಮಾಜಿ ಸಚಿವರ ವಿರುದ್ಧ ಸೋಮವಾರ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್, ಬಟಿಂಡಾ ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಜಿ ಮುಖ್ಯ ಆಡಳಿತಾಧಿಕಾರಿ ಬಿಕ್ರಮ್‌ಜಿತ್ ಶೆರ್ಗಿಲ್, ರಾಜೀವ್ ಕುಮಾರ್, ಅಮನದೀಪ್ ಸಿಂಗ್, ವಿಕಾಸ್ ಅರೋರಾ ಮತ್ತು ಪಂಕಜ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜೀವ್ ಕುಮಾರ್, ಅಮನದೀಪ್ ಸಿಂಗ್ ಮತ್ತು ವಿಕಾಸ್ ಅರೋರಾ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ಇದನ್ನೂ ಓದಿ: ಪಂಜಾಬ್: ಸುಖಪಾಲ್ ಸಿಂಗ್ ಖೈರಾ ಬಂಧನ ರಾಜಕೀಯ ಸೇಡು ಎಂದ ಕಾಂಗ್ರೆಸ್

ತನಿಖೆಯ ಸಂದರ್ಭದಲ್ಲಿ, ಬಾದಲ್ ಅವರು ಮಾಡೆಲ್ ಟೌನ್ ಹಂತ-1 ಬಟಿಂಡಾದಲ್ಲಿ 1,560 ಚದರ ಗಜ ಅಳತೆಯ ಎರಡು ಪ್ಲಾಟ್‌ಗಳನ್ನು ಖರೀದಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಲಕ್ಷ ರೂಪಾಯಿಗಳ ಆರ್ಥಿಕ ನಷ್ಟವನ್ನು ಉಂಟುಮಾಡಿದ್ದಾರೆ ಎಂದು ವಿಜಿಲೆನ್ಸ್ ಬ್ಯೂರೋ ತಿಳಿಸಿದೆ. 2021ರಲ್ಲಿ ಪ್ಲಾಟ್‌ಗಳ ಹರಾಜು ಪ್ರಕ್ರಿಯೆಯಲ್ಲಿ ಬಾದಲ್ ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕರನ್ನು ದಾರಿತಪ್ಪಿಸಿರುವುದು ಕಂಡುಬಂದಿದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ತಡೆಯಲು ನಕಲಿ ನಕ್ಷೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಬ್ಯೂರೋ ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ