ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿಯಾಗಿದರು. ಅದಾದ ಬಳಿಕ ಅವರು ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಭಗವಂತ್ ಮಾನ್ ಮಾರ್ಚ್ 16ರಂದು ಪಂಜಾಬ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ರಾಜ್ಯಕ್ಕಿದ್ದ ಉಡ್ತಾ ಪಂಜಾಬ್ ಹಣೆಪಟ್ಟಿಯನ್ನು ತೊಡೆದು, ಭಡ್ತಾ ಪಂಜಾಬ್ (ಅಭಿವೃದ್ಧಿ) ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ನಿಯಂತ್ರಣಕ್ಕೆ ಈಗಾಗಲೇ ಹೊಸದಾದ ಕ್ರಮವನ್ನೂ ಕೈಗೊಂಡಿದ್ದಾರೆ. ಪಂಜಾಬ್ನ 17ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್ರಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದರು, ಕೇಂದ್ರ ಮತ್ತು ಪಂಜಾಬ್ (Punjab) ರಾಜ್ಯ ಸರ್ಕಾರಗಳು ಒಟ್ಟಾಗಿ ರಾಜ್ಯದ ಅಭಿವೃದ್ಧಿ ಮಾಡೋಣ ಎಂದಿದ್ದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ ಭಗವಂತ್ ಮಾನ್, ರಾಷ್ಟ್ರೀಯ ಭದ್ರತೆ ನಿಭಾಯಿಸುವುದಕ್ಕೆ ನಮಗೆ ಕೇಂದ್ರದ ಬೆಂಬಲದ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಹೇಳಿದ್ದೇನೆ. ಪಂಜಾಬ್ನ ಆರ್ಥಿಕ ಸ್ಥಿತಿ ತಳಮಟ್ಟದಲ್ಲಿದ್ದು ಚಿಂತಾಜನಕವೆನಿಸಿದೆ. ಹೀಗಾಗಿ ಇನ್ನೆರಡು ವರ್ಷಗಳ ಕಾಲ ತಲಾ 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದೇನೆ. ಹಣ ಬಿಡುಗಡೆ ಮಾಡಿದರೆ ನಮ್ಮ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣಬಹುದು ಎಂದ ಮಾನ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಮಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಬೇಕು. ಈ ದೇಶದ ಶತ್ರುಗಳು ಪಂಜಾಬ್ನ ಸುಸ್ಥಿತಿಯನ್ನು ಹಾಳುಗೆಡವಲು ಈಗಾಗಲೇ ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ. ಆದರೆ ಪಂಜಾಬ್ನಲ್ಲಿ ಸಾಮಾಜಿಕ ಸಔಹಾರ್ದತೆ, ಬಾಂಧವ್ಯ ಬಲಿಷ್ಠವಾಗಿದೆ. ಅಲ್ಲಿಯ ಜನರು ಶಾಂತಿಯನ್ನು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಹೇಳಿದ್ದಾಗಿ ಭಗವಂತ್ ಮಾನ್ ತಿಳಿಸಿದ್ದಾರೆ. ನಾನು ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆಯೂ ಮನವರಿಕೆ ಮಾಡಿಸಿದ್ದೇನೆ. ಅವರು ಈ ವಿಚಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮಾತನಾಡುತ್ತಾರೆ ಎಂಬ ಆಶಯವಿದೆ. ಹಾಗೇ, ಎಲ್ಲ ವಿಚಾರಗಳಲ್ಲೂ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.
Published On - 5:15 pm, Thu, 24 March 22