Pushkar Dhami: 2ನೇ ಅವಧಿಗೆ ಉತ್ತರಾಖಂಡದ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ; ಪ್ರಧಾನಿ ಮೋದಿ ಭಾಗಿ

46 ವರ್ಷದ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್ ಪ್ರಮಾಣ ವಚನ ಬೋಧಿಸಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರ ಎರಡನೇ ಅವಧಿಯಾಗಿದೆ.

Pushkar Dhami: 2ನೇ ಅವಧಿಗೆ ಉತ್ತರಾಖಂಡದ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ; ಪ್ರಧಾನಿ ಮೋದಿ ಭಾಗಿ
ಪುಷ್ಕರ್ ಸಿಂಗ್ ಧಾಮಿ
Follow us
| Updated By: ಸುಷ್ಮಾ ಚಕ್ರೆ

Updated on:Mar 23, 2022 | 4:39 PM

ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಇಂದು ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಯೋಗಿ ಆದಿತ್ಯನಾಥ್, ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಇತರ ಬಿಜೆಪಿ ನಾಯಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. 46 ವರ್ಷದ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್ ಪ್ರಮಾಣ ವಚನ ಬೋಧಿಸಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರ ಎರಡನೇ ಅವಧಿಯಾಗಿದೆ. ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ 8 ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಧನ್ ಸಿಂಗ್ ರಾವತ್, ರೇಖಾ ಆರ್ಯ ಮತ್ತು ಗಣೇಶ್ ಜೋಷಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೆಲ್ಲರೂ ಧಾಮಿ ನೇತೃತ್ವದ ಈ ಹಿಂದಿನ ಸಂಪುಟದಲ್ಲೂ ಸಚಿವರಾಗಿದ್ದರು.

ಮೂರು ಹೊಸ ಮುಖಗಳಾದ ಚಂದನ್ ರಾಮ್ ದಾಸ್, ಸೌರಭ್ ಬಹುಗುಣ ಮತ್ತು ಪ್ರೇಮಚಂದ್ ಅಗರ್ವಾಲ್ ಕೂಡ ಇಂದು ಪುಷ್ಕರ್ ಸಿಂಗ್ ಧಾಮಿ ಅವರ ಕ್ಯಾಬಿನೆಟ್​ಗೆ ಸೇರ್ಪಡೆಯಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು.

ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ರಾಜ್ಯಸಭಾ ಸದಸ್ಯ ಅನಿಲ್ ಬಲುನಿ, ಶಾಸಕ ಧನ್ ಸಿಂಗ್ ರಾವತ್ ಮತ್ತು ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಸೇರಿದಂತೆ ಹಲವು ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಸಂಭವನೀಯ ಆಯ್ಕೆಗಳಲ್ಲಿತ್ತು.

2012ರ ವಿಧಾನಸಭಾ ಚುನಾವಣೆಯ ನಂತರ ಅವರು ಗೆಲ್ಲುತ್ತಿದ್ದ ಖತಿಮಾದಲ್ಲಿ ಪುಷ್ಕರ್ ಸಿಂಗ್ ಧಾಮಿ ಸೋತಿದ್ದರಿಂದ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಬಿಜೆಪಿಯ ಸಂದಿಗ್ಧತೆ ಉಂಟಾಗಿದೆ. ಪುಷ್ಕರ್ ಸಿಂಗ್ ಧಾಮಿ ಅವರು ಖತಿಮಾದಿಂದ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ವಿರುದ್ಧ 6,579 ಮತಗಳ ಅಂತರದಿಂದ ಸೋತಿದ್ದರು. ಆದರೆ, ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಎಂಟು ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣೆಯಲ್ಲಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ಉತ್ತರಾಖಂಡದ 21 ವರ್ಷಗಳ ಇತಿಹಾಸದಲ್ಲಿ ಸತತ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಧಾಮಿ ಅವರು ಆರು ತಿಂಗಳೊಳಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಬೇಕು.

ಇದನ್ನೂ ಓದಿ: Pushkar Singh Dhami ಉತ್ತರಾಖಂಡ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಪುಷ್ಕರ್ ಸಿಂಗ್ ಧಾಮಿ

ಉತ್ತರಾಖಂಡ್​ ಮುಖ್ಯಮಂತ್ರಿ ಆಯ್ಕೆ ಸಭೆ ಇಂದು; ನಾಳೆಯೇ ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರ

Published On - 4:39 pm, Wed, 23 March 22