ಚಂಡೀಗಡ: ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಸುಖ್ಚಿಂದರ್ ರಂಧಾವಾ ಅವರ ಹೆಸರನ್ನು ಪಂಜಾಬ್ ಕಾಂಗ್ರೆಸ್ ಸಮಿತಿ ಶಿಫಾರಸು ಮಾಡಿದೆ. ಇವರು ಸಹ ಅಮರಿಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರಾಹುಲ್ ಗಾಂಧಿ ಅವರ ಮನೆಯಲ್ಲಿ ಈ ಸಂಬಂಧ ಸುದೀರ್ಘ ಚರ್ಚೆ ನಡೆಯುತ್ತಿದೆ. ಹಿರಿಯ ನಾಯಕಿ ಅಂಬಿಕಾ ಸೋನಿ ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಂಗ್ರೆಸ್ನ ಪಂಜಾಬ್ ಘಟಕದಲ್ಲಿ ಈಚಿನ ದಿನಗಳಲ್ಲಿ ಆದ ಕೆಲ ಬೆಳವಣಿಗೆಗಳಿಂದ ಬೇಸತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ರಾಜೀನಾಮೆಯ ಒಂದು ದಿನದ ನಂತರ, ಅಂದರೆ ಭಾನುವಾರ ಪಕ್ಷದ ಶಾಸಕರ ಸಭೆ ನಡೆದಿತ್ತು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಸುಖ್ವಿಂದರ್ ರಂಧಾವಾ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಅಮರಿಂದರ್ ಸಿಂಗ್ ಸಂಪುಟದಲ್ಲಿ ಸುಖ್ಜಿಂದರ್ ರಂಧಾವಾ ಸೆರೆಮನೆ ಮತ್ತು ಸಹಕಾರ ಇಲಾಖೆಯ ರಾಜ್ಯಖಾತೆ ಸಚಿವರಾಗಿದ್ದರು. ಸಭೆಯ ನಡುವೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ನಾನೆಂದೂ ಯಾವುದೇ ಹುದ್ದೆಯನ್ನು ಬೆಂಬತ್ತಿ ಹೋದವನಲ್ಲ ಎಂದು ಹೇಳಿದ್ದರು. ಪರೋಕ್ಷವಾಗಿ ಅಮರಿಂದರ್ ಸಿಂಗ್ ಅವರನ್ನು ಟೀಕಿಸಿದ ಅವರು, ‘ರಾಜ್ಯದ ಜನರು ಮತ್ತು ಪಕ್ಷ ತಮ್ಮ ಪರವಾಗಿ ಇರುವವರೆಗೆ ಮುಖ್ಯಮಂತ್ರಿಯಾದವರು ಆ ಸ್ಥಾನದಲ್ಲಿ ಇರುತ್ತಾರೆ’ ಎಂದು ಹೇಳಿದರು.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಬಗ್ಗೆ ಟ್ವೀಟ್ ಮಾಡಿದ್ದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸಹಾಯಕ ರಾಜೀನಾಮೆ
ಇದನ್ನೂ ಓದಿ: Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
(Punjab Congress Proposes Sukhjinder Randhawa for Chief Minister Post)
Published On - 3:59 pm, Sun, 19 September 21