
ಶಿಮ್ಲಾ, ನವೆಂಬರ್ 19: ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನಗಳು ನಿಷ್ಪ್ರಯೋಜಕವೆಂದು ಸಾಬೀತಾದವು ಮತ್ತು ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಕಠಿಣ ಸಮಯ ಎದುರಾಗಿತ್ತು ಎಂದು ಹಿಮಾಚಲ ಪ್ರದೇಶದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷ ಬಿಜೆಪಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಅಧಿವೇಶನದ ವೇಳೆ ಭ್ರಷ್ಟಾಚಾರದ ಕುರಿತು ಚರ್ಚಿಸಲು ಬಿಜೆಪಿ ನಿಲುವಳಿ ಸೂಚನೆ ಮಂಡಿಸಿದಾಗ ಪ್ರತಿಕ್ರಿಯಿಸಿದ ಸಚಿವ ಜಗತ್ ಸಿಂಗ್ ನೇಗಿ, ಡಸಾಲ್ಟ್ ಏವಿಯೇಷನ್‌ನ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಪ್ರತಿ ವಿಮಾನಕ್ಕೆ 700 ಕೋಟಿ ರೂ. ಬದಲಿಗೆ ಭಾರತ 2,300 ಕೋಟಿ ರೂ. ಪಾವತಿಸಿದೆ ಎಂದ ನೇಗಿ, ಆ ವಿಮಾನಗಳು ನಿಷ್ಪ್ರಯೋಜಕವೆಂದು ಸಾಬೀತಾದವು ಹಾಗೂ ಇದರಿಂದಾಗಿ ‘ಆಪರೇಷನ್ ಸಿಂಧೂರ್’ ವೇಳೆ ಭಾರತವು ಪಾಕಿಸ್ತಾನವನ್ನು ಎದುರಿಸಲು ಕಠಿಣ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿರುವ ಅವರು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ಸದನದ ಕಡತದಿಂದ ತೆಗೆದುಹಾಕಲು ಬಿಜೆಪಿ ಪಟ್ಟು:
ಹಿಮಾಚಲ ಪ್ರದೇಶದ ಸಚಿವರ ಹೇಳಿಕೆಯನ್ನು ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಖಂಡಿಸಿರುವ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ವಿವಾದಾತ್ಮಕ ಹೇಳಿಕೆಗಳನ್ನು ವಿಧಾನಸಭೆಯ ಕಲಾಪದ ಕಡತದಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಸ್ಪೀಕರ್ಗೆ ಒತ್ತಾಯಿಸಿದ್ದಾರೆ. ಕಡತದಿಂದ ತೆಗೆದುಹಾಕದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ
ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ವೀರ ಯೋಧರ ನಾಡಾದ ಹಿಮಾಚಲ ಪ್ರದೇಶದಲ್ಲಿ ಕುಳಿತು ಸಚಿವರು ಸೇನೆಯ ಕಾರ್ಯಾಚರಣೆಯನ್ನು ಪ್ರಶ್ನಿಸಿರುವುದು ಖಂಡನೀಯ ಎಂದಿದ್ದಾರೆ. ಬಿಜೆಪಿ ಶಾಸಕ ಸುಧೀರ್ ಶರ್ಮಾ ಮಾತನಾಡಿ, ಇಂತಹ ಅಭಿಪ್ರಾಯ ಹೊಂದಿರುವ ನೇಗಿ ಲಾಹೋರ್‌ಗೆ ಹೋಗಲಿ ಎಂದು ಕಿಡಿಕಾರಿದ್ದಾರೆ.
ಆದರೆ, ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ರಫೇಲ್ ವಿಮಾನಗಳ ಕಾರ್ಯಕ್ಷಮತೆಯ ಕುರಿತು ತಾವು ನೀಡಿದ ಹೇಳಿಕೆಗೆ ಜಗತ್ ಸಿಂಗ್ ನೇಗಿ ಬದ್ಧರಾಗಿದ್ದು, ಬಿಜೆಪಿಯ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ