ಕೃಷಿ ತಿದ್ದುಪಡಿ ಕಾಯ್ದೆ ವಾಪಸ್; ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಅಧಿಕ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಪ್ರತಿಪಕ್ಷಗಳು

| Updated By: shivaprasad.hs

Updated on: Nov 19, 2021 | 11:10 AM

Farm Bills Repeal: ಕೇಂದ್ರ ಸರ್ಕಾರ ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಇದನ್ನು ರೈತರ ಹೋರಾಟದ ವಿಜಯ ಎಂದು ಪ್ರತಿಪಕ್ಷಗಳು ವ್ಯಾಖ್ಯಾನಿಸಿದ್ದು, ಮೃತಪಟ್ಟ 700ಕ್ಕೂ ಅಧಿಕ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿವೆ.

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್; ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಅಧಿಕ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಪ್ರತಿಪಕ್ಷಗಳು
ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ
Follow us on

ಕೇಂದ್ರ ಸರ್ಕಾರದ 3 ಕೃಷಿ ತಿದ್ದುಪಡಿ ಕಾಯ್ದೆಗೆ ರೈತರಿಂದ ಅಪಾರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಹಿಂಪಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 19) ಬೆಳಗ್ಗೆ ಘೋಷಿಸಿದ್ದಾರೆ. ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿವೆ. ಇದೇ ವೇಳೆ ನಾಯಕರು, ಹೋರಾಟದಲ್ಲಿ ಮೃತಪಟ್ಟ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈ ಕುರಿತು ಟ್ವೀಟ್ ಮಾಡಿದ್ದು, ಸತ್ಯಾಗ್ರಹದಿಂದಾಗಿ ಅಹಂಕಾರ ತಲೆ ತಗ್ಗಿಸುವಂತಾಗಿದೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕೂಡ ಟ್ವೀಟ್ ಮಾಡಿದ್ದು, ಇದು ರೈತರ ವಿಜಯ ಎಂದು ವ್ಯಾಖ್ಯಾನಿಸಿದ್ದಾರೆ. ಹೋರಾಟದಲ್ಲಿ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿಯನ್ನು ಮಮತಾ ಸಲ್ಲಿಸಿದ್ದಾರೆ.

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಹೋರಾಟದಲ್ಲಿ ಮೃತಪಟ್ಟ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ‘‘ಹೋರಾಟದಲ್ಲಿ 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ?’’ ಎಂದು ಪ್ರಶ್ನಿಸಿರುವ ಅವರು, ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಪಿ.ಚಿದಂಬರಮ್ ಟ್ವೀಟ್ ಮಾಡಿ, ಪೂರ್ಣ ಮನಸ್ಸಿನಿಂದ ಬದಲಾವಣೆ ಮಾಡದೇ, ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಹೋರಾಟದಿಂದ ಸಾಧ್ಯವಾಗುವುದಕ್ಕಿಂತ ಹೆಚ್ಚಾಗಿ, ಚುನಾವಣಾ ಭಯ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡುತ್ತಾ, ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಟೀಕಿಸಿದ್ದಾರೆ. ಜೊತೆಗೆ ಅವರು, ಇದು ರೈತರ ಹೋರಾಟದ ವಿಜಯ ಎಂದು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, 700ಕ್ಕೂ ಅಧಿಕ ರೈತರು ಹುತಾತ್ಮರಾಗಿ, ದೇಶದ ರೈತರು ಹಾಗೂ ಕೃಷಿಯನ್ನು ರಕ್ಷಿಸಿದ್ದಾರೆ. ಅವರನ್ನು ಮುಂದಿನ ಪೀಳಿಗೆ ಸ್ಮರಿಸುತ್ತದೆ. ಎಲ್ಲಾ ರೈತರಿಗೆ ನನ್ನ ನಮನಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಕೃಷಿ ಮಸೂದೆ ವಾಪಸ್​: ಪ್ರಜಾಸತ್ತೆಯಲ್ಲಿ ಜನಶಕ್ತಿಯೇ ಅಂತಿಮ, ಇದು ರಾಜಕೀಯ ತೀರ್ಮಾನ- ವಿಪಕ್ಷ ನಾಯಕರುಗಳ ಪ್ರತಿಕ್ರಿಯೆ

ರೈತರ ಆಂದೋಲನ ತಕ್ಷಣ ಹಿಂಪಡೆಯುವುದಿಲ್ಲ, ಸಂಸತ್​​ನಲ್ಲಿ ಕೃಷಿ ಕಾನೂನು ರದ್ದಾಗಲಿ: ರಾಕೇಶ್ ಟಿಕಾಯತ್

Published On - 11:07 am, Fri, 19 November 21