ಲಂಡನ್: ಮಾಜಿ ಕಾಂಗ್ರೆಸ್ ಅಧ್ಯಕ್ಷ ಹಾಗು ಸಂಸದ ರಾಹುಲ್ ಗಾಂಧಿ (Rahul Gandhi) ಭಾರತ ದೇಶ ಅಪಾಯದಲ್ಲಿದೆ ಎಂದು ಮತ್ತೆ ಧ್ವನಿ ಎತ್ತಿದ್ದು ಪೆಗಾಸಸ್ ಸ್ಪೈವೇರ್ (Pegasus Spyware) ಘಟನೆಯನ್ನು ಮತ್ತೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಬ್ರಿಟನ್ನ ಕೇಂಬ್ರಿಡ್ಜ್ ಯೂನಿವರ್ಸಿಟಿಯ (Cambridge University) ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಾದ ಸಾಂಸ್ಥಿಕ ಚೌಕಟ್ಟು ದುರ್ಬಲಗೊಳ್ಳುತ್ತಿದೆ. ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಮೂಲ ಸ್ವರೂಪವೇ ಆಕ್ರಮಕ್ಕೊಳಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ನಲ್ಲಿ ’21ನೇ ಶತಮಾನದಲ್ಲಿ ಆಲಿಕೆಯ ಕಲಿಕೆ‘ (Learning to Listen in the 21st Century) ವಿಚಾರದ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.
“ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಆಕ್ರಮಣಕ್ಕೊಳಗಾಗಿದೆ. ಡೆಮಾಕ್ರಸಿ ಮೇಲಿನ ಆಕ್ರಮಣವನ್ನು ಎದುರಿಸಲು ನಾವು ಯತ್ನಿಸುತ್ತಿದ್ದೇವೆ. ವಿಪಕ್ಷ ನಾಯಕರ ಮೇಲೆ ಸರ್ಕಾರ ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸುತ್ತಿದೆ. ನನ್ನ ಫೋನ್ನಲ್ಲೇ ಪೆಗಾಸಸ್ ಹಾಕಲಾಗಿತ್ತು. ಬಹಳಷ್ಟು ರಾಜಕಾರಣಿಗಳ ಮೊಬೈಲ್ಗಳಲ್ಲಿ ಪೆಗಾಸಸ್ ಇತ್ತು. ಫೋನ್ನಲ್ಲಿ ಮಾತನಾಡುವಾಗ ಹುಷಾರಾಗಿರಬೇಕೆಂದು ನನಗೆ ಹೇಳಲಾಗಿತ್ತು” ಎಂದು ಯೂನಿವರ್ಸಿಟಿಯಲ್ಲಿ ವಿಸಿಟಿಂಗ್ ಫೆಲೋ ಆಗಿದ್ದ ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಧ್ಯಮ ಮತ್ತು ನ್ಯಾಯಾಂಗವನ್ನು ಸರ್ಕಾರ ನಿಯಂತ್ರಿಸುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು ಜನಾಂಗದವರನ್ನು ಬೆದರಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದರು.
ಇದನ್ನೂ ಓದಿ: ಈಗ ಈಶಾನ್ಯ ರಾಜ್ಯಗಳು ದಿಲ್ಲಿಯಿಂದ ಅಥವಾ ಹೃದಯದಿಂದ ದೂರವಿಲ್ಲ: ಪ್ರಧಾನಿ ಮೋದಿ
ರಾಹುಲ್ ಗಾಂಧಿ ಬ್ರಿಟನ್ ದೇಶಕ್ಕೆ ಒಂದು ವಾರ ಕಾಲದ ಪ್ರವಾಸದಲ್ಲಿದ್ದಾರೆ. ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲೇ ಕೆಲ ಸಭೆ, ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುವುದುಂಟು. ಭಾರತ ಮತ್ತು ಚೀನಾ ಸಂಬಂಧಗಳ ಬಗ್ಗೆ ಕ್ಲೋಸ್ಡ್–ಡೋರ್ ಸೆಷನ್ನಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಲಂಡನ್ನಲ್ಲಿ ಅನಿವಾಸಿ ಭಾರತೀಯರ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಯೇ, ಕಾಂಗ್ರೆಸ್ನ ವಿದೇಶೀ ವಿಭಾಗದ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
ಏನಿದು ಪೆಗಾಸಸ್ ವಿವಾದ?
ಪೆಗಾಸಸ್ ಎನ್ನುವುದು ಇಸ್ರೇಲ್ ಕಂಪನಿಯೊಂದು ತಯಾರಿಸಿದ ಸ್ಪೈವೇರ್. ಸ್ಪೈವೇರ್ ಎಂಬುದು ವಂಚಕ ಸಾಫ್ಟ್ವೇರ್. ಇದು ಯಾವುದೇ ಫೋನ್ನಿಂದ ಮಾಹಿತಿ ಕದ್ದು ರವಾನಿಸುತ್ತದೆ. ಭಾರತದ ಹಲವು ರಾಜಕಾರಣಿಗಳು, ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು ಹೀಗೆ ನಾನಾ ವಿಭಾಗದ ನಾನಾ ಸ್ತರದ ವ್ಯಕ್ತಿಗಳ ಮೊಬೈಲ್ಗಳನ್ನು ಪೆಗಾಸಸ್ ಮೂಲಕ ಸರ್ಕಾರ ಕಣ್ಗಾವಲಿನಲ್ಲಿಟ್ಟಿತ್ತು ಎಂಬುದು ವಿಪಕ್ಷಗಳ ಆರೋಪ.