Ideas For India ಎಂಬ ಸದುದ್ದೇಶದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಯನಾಡ್ (Wayanad Congress MP) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಖತ್ ಐಡಿಯಾ ಮಾಡಿ ಲಂಡನ್ಗೆ ಹೋಗಿದ್ದಾರೆ. ಯಾವುದೆ ಸಂಸದ ವಿದೇಶ ಪ್ರವಾಸಕ್ಕೆ ಹೋಗಬೇಕೆಂದರೆ ಭಾರತದ ವಿದೇಶಾಂಗ ಸಚಿವಾಲಯದ (Ministry of External Affairs) ಅನುಮತಿ ಪಡೆಯಲೇಬೇಕು! ಆದರೆ ರಾಹುಲ್ ಗಾಂಧಿ ಅಂತಹ ಔಪಚಾರಿಕ ಪ್ರಕ್ರಿಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸೀದಾ ಲಂಡನ್ ಗೆ (London visit) ಹೋಗಿಬಂದಿದ್ದಾರೆ ಎಂದು MEA ಮೂಲಗಳು ತಿಳಿಸಿವೆ. ಇದು ಶಿಷ್ಟಾಚಾರದ ಪ್ರಶ್ನೆ ಒಂದು ಕಡೆಯಾಗಿದ್ದರೆ ಭದ್ರತೆಯ ದೃಷ್ಟಿಯಿಂದ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಹೊಣೆ ಯಾರು ಎಂಬ ಪ್ರಶ್ನೆಯೂ ಕಾಡತೊಡಗಿದೆ. ಕಾಂಗ್ರೆಸ್ ನಾಯಕ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದರಾ ಅಥವಾ ಟೇಕನ್ ಫಾರ್ ಗ್ರಾಂಟೆಡ್ಡಾ? ಎಂದು ಜನ ಕೇಳತೊಡಗಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳ ಬಯಸುವ ಸಂಸತ್ ಸದಸ್ಯರು ಕನಿಷ್ಟ ಪಕ್ಷ 3 ವಾರ ಮೊದಲು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಬೇಕು. ಅದನ್ನು MEA ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಅದಕ್ಕಿಂತ ಮುಖ್ಯವಾಗಿ ಸಂಸದರು ವಿದೇಶಿ ಸರ್ಕಾರ, ಸಂಸ್ಥೆಗಳಿಂದ ಹೀಗೆ ಆಹ್ವಾನ ಪಡೆದಾಗ ಅದು MEA ಮೂಲಕವೇ ಬರಬೇಕು.
ದೇಶ, ರಾಜ್ಯ, ಒಕ್ಕೂಟ; ಇಂಗ್ಲೆಂಡ್ನಲ್ಲಿ ರಾಹುಲ್ ಗಾಂಧಿಗೆ ಅಧಿಕಾರಿಯ ಪಾಠ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬ್ರಿಟನ್ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ (Cambridge University) ಭಾಷಣ ಮಾಡುವಾಗ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ಮಾತನಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಭಾರತೀಯ ರೈಲ್ವೆಯ ಟ್ರಾಫಿಕ್ ಸರ್ವೀಸ್ ಸೇವೆಯಲ್ಲಿರುವ ಸಿದ್ಧಾರ್ಥ ವರ್ಮಾ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾಮನ್ವೆಲ್ತ್ ಸ್ಕಾಲರ್ ಸಹ ಹೌದು.
Though there was a lot of interruption I tried to put across my points, including the fact that the Preamble itself mentions the word 'nation'.@ARanganathan72 also pointed this out earlier https://t.co/TmCx1xVT2M
— Siddhartha Verma (@Sid_IRTS) May 24, 2022
ರಾಹುಲ್ ಗಾಂಧಿ ಅವರು ಭಾಷಣ ಮಾಡುತ್ತಿದ್ದಾಗ ಮಧ್ಯಪ್ರವೇಶಿಸಿರುವ ಅವರು, ‘ನೀವು ಸಂವಿಧಾನದ 1ನೇ ವಿಧಿಯನ್ನು ಉಲ್ಲೇಖಿಸಿ ಭಾರತವು ರಾಜ್ಯಗಳ ಒಕ್ಕೂಟ ಎಂದು ಹೇಳಿದಿರಿ. ಆದರೆ ಒಂದು ಪುಟ ಹಿಂದಕ್ಕೆ ತಿರುವಿ, ಓದಿದ್ದರೆ ಭಾರತವು ಒಂದು ದೇಶ ಎನ್ನುವ ಉಲ್ಲೇಖ ಕಾಣಿಸುತ್ತಿತ್ತು. ಭಾರತವು ಜಗತ್ತಿನ ಅತ್ಯಂತ ಪುರಾತನ ಜೀವಂತ ನಾಗರೀಕತೆಗಳಲ್ಲಿ ಒಂದು. ಭಾರತ ಎನ್ನುವ ಪದದ ನಿಷ್ಪತ್ತಿಯು ವೇದಕಾಲಗಳಿಗೆ ಹೋಗುತ್ತದೆ. ತಕ್ಷಶಿಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ಆಚಾರ್ಯ ಚಾಣಕ್ಯ ನೀವು ಬೇರೆ ಜನಪದಗಳಿಗೆ ಸೇರಿದ್ದರೂ, ಒಂದು ದೇಶದ ಮಕ್ಕಳು ಎಂದು ಹೇಳಿದ್ದ’ ಎಂದು ವರ್ಮಾ ಅವರು ರಾಹುಲ್ ಗಾಂಧಿಗೆ ವಿವರಣೆ ನೀಡಿದ್ದಾರೆ.
‘ಆಚಾರ್ಯ ಚಾಣಕ್ಯ ದೇಶ ಎನ್ನುವ ಪದ ಬಳಸಿದ್ದರೇ’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ‘ಚಾಣಕ್ಯ ದೇಶ ಎನ್ನುವ ಪದ ಬಳಸಿಲ್ಲ. ಆದರೆ ರಾಷ್ಟ್ರ ಎನ್ನುವ ಪದ ಬಳಸಿದ್ದರು’ ಎಂದು ವರ್ಮಾ ಪ್ರತಿಕ್ರಿಯಿಸಿದ್ದರು. ‘ರಾಷ್ಟ್ರ ಎಂದರೆ ರಾಜನ ಅಧೀನದಲ್ಲಿರುವ ರಾಜ್ಯ’ ಎಂದು ರಾಹುಲ್ ವಿಶ್ಲೇಷಿಸಿದಾಗ ಮತ್ತೆ ಮಧ್ಯಪ್ರವೇಶಿಸಿದ ವರ್ಮಾ, ‘ಸಂಸ್ಕೃತದಲ್ಲಿ ರಾಷ್ಟ್ರ ಎಂದರೆ ದೇಶ ಎಂದ ಅರ್ಥ’ ಎಂದು ಪ್ರತಿಕ್ರಿಯಿಸಿದರು. ‘ದೇಶ (ನೇಶನ್) ಎನ್ನುವುದು ಪಾಶ್ಚಾತ್ಯರ ಪರಿಕಲ್ಪನೆ’ ಎಂದು ರಾಹುಲ್ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಇದಕ್ಕೆ ಅಧಿಕಾರಿ ವರ್ಮಾ ಸುದೀರ್ಘ ವಿವರಣೆ ನೀಡಿದರು. ‘ದೇಶದ ಬಗ್ಗೆ ನಾನು ಕೇವಲ ರಾಜಕೀಯವಾಗಿ ಮಾತನಾಡುತ್ತಿಲ್ಲ. ವಿಶ್ವದ ಹಲವೆಡೆ ಇಂಥ ಪ್ರಯೋಗಗಳು ನಡೆದಿವೆ. ದೃಢವಾದ ಸಾಮಾಜಿಕ, ಸಾಂಸ್ಕೃತಿಕ ಬಂಧ ಇರದಿದ್ದರೆ ಕೇವಲ ಸಂವಿಧಾನವು ಒಂದು ದೇಶವನ್ನು ರೂಪಿಸಲು ಆಗುವುದಿಲ್ಲ. ನೀವೊಬ್ಬ ರಾಜಕೀಯ ನಾಯಕರಾಗಿ ಭಾರತದ ಬಗ್ಗೆ ನಿಮ್ಮ ಆಲೋಚನೆಗಳು ತಪ್ಪುತಪ್ಪಾಗಿವೆ ಎಂದು ನಿಮಗೆ ಅನ್ನಿಸುವುದಿಲ್ಲವೇ. ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ಅಳಿಸಿಹಾಕುವ ನಿಮ್ಮ ಆಲೋಚನೆಗಳಿಂದ ದೇಶದ ಹಿತಕ್ಕೂ ಧಕ್ಕೆಯಾದೀತು’ ಎಂದು ಎಚ್ಚರಿಸಿದರು.
‘ನೀವು ಹೇಳುವ ರೀತಿಯಲ್ಲಿ ಯೋಚಿಸುವವನು ನಾನಲ್ಲ’ ಎಂದು ರಾಹುಲ್ ಗಾಂಧಿ ತಿಳಿಸಿದರು. ರಾಹುಲ್ ಗಾಂಧಿ ನೀಡಿದ ಉತ್ತರದ ವಿಡಿಯೊ ಶೀಘ್ರ ಪೋಸ್ಟ್ ಮಾಡುತ್ತೇನೆ’ ಎಂದು ಅವರು ತಿಳಿಸಿದರು.
ಪ್ರತಿಷ್ಠಿತ ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ನಡೆದ ‘75ರ ಹೊಸಿಲಲ್ಲಿ ಭಾರತ’ ಹೆಸರಿನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಿಂದೂ ರಾಷ್ಟ್ರೀಯವಾದ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಪಾತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
‘ಭಾರತದಲ್ಲಿ ಪ್ರತಿಪಕ್ಷಗಳು ತಮ್ಮ ವಿಚಾರ ಮಂಡಿಸಲು ಮಾಧ್ಯಮಗಳಲ್ಲಿ ಅವಕಾಶವೇ ಸಿಗುತ್ತಿಲ್ಲ. ಭಾರತದ ಮಾಧ್ಯಮಗಳನ್ನು ಸರ್ಕಾರವನ್ನು ಬೆಂಬಲಿಸುವ ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಹೀಗಾಗಿ ನಾವು ಒಂದು ರಾಜಕೀಯ ಪಕ್ಷವನ್ನಷ್ಟೇ ಎದುರಿಸುತ್ತಿಲ್ಲ. ಒಂದು ಸರ್ಕಾರವನ್ನು, ಅದರ ಅಧಿಕಾರವನ್ನು ಎದುರಿಸುತ್ತಿದ್ದೇವೆ. ಇದು ಬಹಳ ಕಷ್ಟ. ಆದರೆ ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ
ಭಾರತದ ಜನರು ಮಾತನಾಡಿದಾಗ ಮಾತ್ರ ನಮ್ಮ ದೇಶ ಜೀವಂತವಾಗಿರುತ್ತದೆ. ಯಾವಾಗ ಜನರು ಮೌನ ವಹಿಸುತ್ತಾರೋ ಆಗ ದೇಶವೂ ಸಾಯುತ್ತದೆ. ಭಾರತದಲ್ಲಿ ಯಾರನ್ನಾದರೂ ಹೊರಗಿಟ್ಟರೆ ಅದರ ವಿರುದ್ಧ ಧ್ವನಿಯೆತ್ತಲು ನಾನು ಹೆದರುವುದಿಲ್ಲ. ಅದಕ್ಕೆ ನನ್ನ ವಿರೋಧವಿದೆ ಮತ್ತು ಅದು ದೊಡ್ಡ ಅನ್ಯಾಯವಾಗಿದೆ. ಭಾರತದಲ್ಲಿ ಜಾತ್ಯತೀತ ರಾಷ್ಟ್ರವಾದರೂ ಅದನ್ನು ಎಲ್ಲದಕ್ಕೂ ಅನ್ವಯಿಸಬೇಕು. ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ಸಹಾನುಭೂತಿಯಿಂದ ಕಾಣಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಜನಸಂಖ್ಯೆಯ ದೊಡ್ಡ ಭಾಗಗಳನ್ನು ಬಿಟ್ಟು ಭಾರತದ ದೃಷ್ಟಿಕೋನವನ್ನು ನಿರ್ಮಿಸುತ್ತಿದ್ದಾರೆ. ಅದನ್ನು ಭಾರತದ ದೃಷ್ಟಿಕೋನ ಎಂದು ಹೇಳಲು ಸಾಧ್ಯವಿಲ್ಲ, ಅದು ಒಂದು ದೃಷ್ಟಿಕೋನವಷ್ಟೆ ಎಂದು ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ‘ಇಂಡಿಯಾ ಅಟ್ 75′ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್ ಪಕ್ಷದೊಳಗೆ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ನಾನು ಹಿಂದೂ ಧರ್ಮವನ್ನು ಸಾಕಷ್ಟು ವಿವರವಾಗಿ ಅಧ್ಯಯನ ಮಾಡಿದ್ದೇನೆ. ಜನರನ್ನು ಕೊಲ್ಲಲು ಮತ್ತು ಜನರನ್ನು ಹೊಡೆಯಲು ಹಿಂದುತ್ವ ಎಲ್ಲಿಯೂ ಹೇಳಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಭಾರತ ಮಾತನಾಡಿದಾಗ ಭಾರತ ಜೀವಂತವಾಗುತ್ತದೆ. ಯಾವಾಗ ಭಾರತ ಮೌನ ವಹಿಸುತ್ತದೆಯೋ ಆಗ ಭಾರತ ಸಾಯುತ್ತದೆ. ಭಾರತಕ್ಕೆ ಮಾತನಾಡಲು ಅವಕಾಶ ನೀಡುವ ಸಂಸ್ಥೆಗಳ ಮೇಲಿನ ವ್ಯವಸ್ಥಿತ ದಾಳಿ, ಸಂಸತ್ತು, ಚುನಾವಣಾ ವ್ಯವಸ್ಥೆ, ಪ್ರಜಾಪ್ರಭುತ್ವದ ಮೂಲ ರಚನೆಯನ್ನು ನಾವು ನೋಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಸಂಖ್ಯೆಯ ಎಲ್ಲಾ ಭಾಗಗಳನ್ನು ಒಳಗೊಳ್ಳದ ಭಾರತದ ದೃಷ್ಟಿಕೋನವನ್ನು ರಚಿಸುತ್ತಿದ್ದಾರೆ. ಇದು ಅನ್ಯಾಯವಾಗಿದೆ ಮತ್ತು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ರಾಹುಲ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಆದರೆ ಭಾರತದ ಕಲ್ಪನೆಯ ಮೇಲೆ ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
Democracy in India is a global public good. We're the only people who have managed democracy at our unparalleled scale.
Had an enriching exchange on a wide range of topics at the #IdeasForIndia conference in London. pic.twitter.com/QyiIcdFfjN
— Rahul Gandhi (@RahulGandhi) May 20, 2022
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Wed, 25 May 22