Rahul Gandhi: ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ; ಮೋದಿ ಉಪನಾಮ ಹೇಳಿಕೆ ಸಂಬಂಧಿಸಿ ಶಿಕ್ಷೆ

|

Updated on: Mar 24, 2023 | 3:33 PM

ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿಯವರನ್ನು ಮಾರ್ಚ್ 23ರಿಂದಲೇ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿಯವರನ್ನು (Rahul Gandhi) ಮೋದಿ ಉಪನಾಮ ಹೇಳಿಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ದಿನಾಂಕದಿಂದ (ಮಾರ್ಚ್ 23) ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಲೋಕಸಭಾ​ ಸದಸ್ಯತ್ವ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಆದೇಶ ನೀಡಲಾಗಿದೆ. ರಾಹುಲ್ ಅಪರಾಧಿ ಹಿನ್ನೆಲೆ ವಯನಾಡು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮಾನಹಾನಿ ಪ್ರಕರಣದಲ್ಲಿ ರಾಹುಲ್​ ಗಾಂಧಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿ ಸೂರತ್​ ಕೋರ್ಟ್ ತೀರ್ಪು ನೀಡಿತ್ತು, ನಂತರ 30 ದಿನಗಳ ಜಾಮೀನು ಕೂಡ ಮಂಜೂರು ಮಾಡಲಾಗಿತ್ತು.

ರಾಹುಲ್ ಗಾಂಧಿ ಅವರನ್ನು ಮಾರ್ಚ್ 23, 2023 ರಿಂದ ಆರ್ಟಿಕಲ್ 102(1)(ಇ) ನ ನಿಬಂಧನೆಗಳ ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಭಾರತದ ಸಂವಿಧಾನವು 1951 ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರೊಂದಿಗೆ ಹೇಳಿರುವಂತೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಲೋಕಸಭೆಯ ಕಾರ್ಯದರ್ಶಿ ಇಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಪಕ್ಷದಿಂದ ಮಹತ್ವದ ಸಭೆ

ಇದೀಗ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹರಾಗಿರುವ ಬೆನ್ನಲ್ಲೇ ಇಂದು ಸಂಜೆ 5.30ಕ್ಕೆ ದೆಹಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಿದೆ. ಖರ್ಗೆ ಅವರು ಪಿಸಿಸಿ ಅಧ್ಯಕ್ಷರು, ಸಿಎಲ್​​ಪಿ ನಾಯಕರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದು, ಇವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಹೆಚ್​.ಕೆ.ಪಾಟೀಲ್​ ಕೂಡ ವರ್ಚುವಲ್​ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ  ನೆನ್ನೆ  ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್  ಲೋಕಸಭೆ ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ. ಗುಜರಾತ್‌ನ ಸೂರತ್‌ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನಂತರ ವಿನೀತ್ ಜಿಂದಾಲ್ ಲೋಕಸಭಾಧ್ಯಕ್ಷರಿಗೆ ದೂರು ನೀಡಿದ್ದರು. ರಾಹುಲ್ ಸಾರ್ವಜನಿಕ ಸಭೆಯಲ್ಲಿ ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡಿರುವುದು ಹೇಗೆ?ಎಂಬ ಟೀಕೆಗಳ ಮೇಲೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 499 ಮತ್ತು 500 (ಮಾನನಷ್ಟ ವ್ಯವಹರಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿಯ ಅವರು ಕೊನೆಯದಾಗಿ 2021ರ ಅಕ್ಟೋಬರ್‌ನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ ಎಂದು ಪ್ರಶ್ನಿಸಿದ್ದರು.

Published On - 2:34 pm, Fri, 24 March 23