ಜೂನ್ 2 ರ ಸಂಜೆ, ಒಡಿಶಾದ (Odisha) ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ (Odisha Train Accident) ಸಂಭವಿಸಿದಾಗ, ಅದೆಷ್ಟು ಗಂಭೀರವಾಗಿತ್ತು ಎಂಬುದು ಯಾರಿಗೂ ಗೊತ್ತಾಗಿಲ್ಲ. ಆ ಹೊತ್ತಲ್ಲಿ ಭಾರತೀಯ ರೈಲ್ವೆಯ ಸಂಬಂಧಪಟ್ಟ ಇಲಾಖೆಗೆ ದೊಡ್ಡ ಸವಾಲೇ ಎದುರಾಗಿತ್ತು. ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಧಾವಿಸಿದರು. ಅಪಘಾತದ ಸ್ಥಳಕ್ಕೆ ಪ್ರಯಾಣಿಸಿದ ಅವರು, ಅಪಘಾತದ ತಾಂತ್ರಿಕತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಜತೆಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು. ನಾವು ಮಾಡಬೇಕಾದ ಮುಂದಿನ ಕೆಲಸ ಏನು? ಮತ್ತು ಮುಂದಿನ ಯೋಜನೆ ಏನು ಎಂಬುದನ್ನು ಸಚಿವರು ಹೇಳಿದರು ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದರು.
ಮಾನವ ಸಂಪನ್ಮೂಲದ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನೋಡಲಾಗಿತ್ತು. ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು, ಗಾಯಾಳುಗಳಿಗೆ ವೈದ್ಯಕೀಯ ನೆರವು ಒದಗಿಸುವುದನ್ನು ಖಾತ್ರಿಪಡಿಸಬೇಕು. ರೈಲು ಮಾರ್ಗವನ್ನು ಆದಷ್ಟು ಬೇಗ ತೆರವು ಮಾಡಿ, ಮುಂದಿನ ರೈಲು ಸಂಚಾರ ಸುಗಮವಾಗುವಂತೆ ಮಾಡಬೇಕು ಎಂಬುದು ಆದ್ಯತೆಯ ಕೆಲಸವಾಗಿತ್ತು.
ಈ ಎಲ್ಲ ಕೆಲಸ ಮಾಡಲು ಕನಿಷ್ಠ 70 ಸದಸ್ಯರೊಂದಿಗೆ ಎಂಟು ತಂಡಗಳನ್ನು ರಚಿಸಲಾಗಿದೆ. ನಂತರ ಈ ಎರಡು ತಂಡಗಳಲ್ಲಿ ಪ್ರತಿಯೊಂದನ್ನು ಹಿರಿಯ ವಿಭಾಗ ಇಂಜಿನಿಯರ್‌ಗಳು (SSI) ಮೇಲ್ವಿಚಾರಣೆ ಮಾಡಿದರು. ಇದಲ್ಲದೆ, ಈ ಎಸ್‌ಎಸ್‌ಇಯನ್ನು ಒಬ್ಬ ಡಿಆರ್‌ಎಂ ಮತ್ತು ಒಬ್ಬ ಜಿಎಂ ರೈಲ್ವೇಸ್ ಮೇಲ್ವಿಚಾರಣೆ ಮಾಡಿದರು. ರೈಲ್ವೆ ಮಂಡಳಿಯ ಸದಸ್ಯರು ಮತ್ತಷ್ಟು ಮೇಲ್ವಿಚಾರಣೆ ಮಾಡಿದರು ಎಂದು ರೈಲ್ವೇ ಸಚಿವಾಲಯದ ಹಿರಿಯ ಮೂಲವೊಂದು ಎಎನ್‌ಐಗೆ ತಿಳಿಸಿದೆ.
ರೈಲ್ವೆ ಸಚಿವಾಲಯದ ಈ ಅಧಿಕಾರಿಗಳು ರೈಲು ಹಳಿ ಮತ್ತು ಅದರ ದುರಸ್ತಿ ಕಾರ್ಯದಲ್ಲಿ ನೆರವಾದರು. ಇದಿಷ್ಟೇ ಅಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದವರಿಗೆ ಅಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬುದನ್ನೂ ಗಮನ ಹರಿಸಬೇಕಿತ್ತು.ರೈಲ್ವೆ ಮಂಡಳಿಯ ಅಧ್ಯಕ್ಷರನ್ನು ಕಟಕ್‌ನ ಆಸ್ಪತ್ರೆ ಮೇಲ್ವಿಚಾರಣೆ ನಡೆಸಲು ಹೇಳಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರಿಗೆ ಗರಿಷ್ಠ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಯ ಮಹಾ ನಿರ್ದೇಶಕರನ್ನು ಭುವನೇಶ್ವರದ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಅಲ್ಲಿನ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಇರುವವರ ಸೌಕರ್ಯವೂ ಅಷ್ಟೇ ಮುಖ್ಯ ಎಂಬ ಸೂಚನೆಗಳನ್ನು ನಮಗೆ ನೀಡಲಾಗಿತ್ತು. ಆದ್ದರಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ತಂಡದಲ್ಲಿ ನೆಲದ ಮೇಲೆ ಕೆಲಸ ಮಾಡಿದ ಇನ್ನೊಬ್ಬ ಹಿರಿಯ ಅಧಿಕಾರಿ ಹೇಳಿದ್ದಾರೆ.
ದೆಹಲಿಯಲ್ಲಿರುವ ರೈಲ್ವೇ ಸಚಿವಾಲಯದ ಪ್ರಧಾನ ಕಚೇರಿಯಲ್ಲಿನ ವಾರ್ ರೂಮ್ ಈ ಎಲ್ಲ ಬೆಳವಣಿಗೆಗಳ ಮೇಲೆ 24 ಗಂಟೆ ನಿರಂತರ ನಿಗಾ ಇರಿಸಿದೆ. ಅಪಘಾತದ ನಂತರ ಅಲ್ಲಿನ ಬೆಳವಣಿಗೆಗಳ ಲೈವ್ ಫೀಡ್ ನೀಡುವ ನಾಲ್ಕು ಕ್ಯಾಮೆರಾಗಳನ್ನು ಅತ್ಯಂತ ಹಿರಿಯ ಮಟ್ಟದ ಅಧಿಕಾರಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು. ಈ ಕೆಲಸಗಳ ಎಲ್ಲಾ ವಿವರಗಳನ್ನು ನೈಜ ಸಮಯದಲ್ಲಿ ಸಚಿವರು ಮತ್ತು ಅವರ ತಂಡಕ್ಕೆ ತಿಳಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಒಬ್ಬ ಅನುಭವಿ ಅಧಿಕಾರಿ ರಾಜಕಾರಣಿಯಾಗಿ, ಭಾರತದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವಿಪತ್ತು ನಿರ್ವಹಣೆ ಹೊಸ ವಿಷಯವೇನಲ್ಲ. 1999 ರಲ್ಲಿ ಬಾಲಸೋರ್ ಜಿಲ್ಲೆಯ ಕಲೆಕ್ಟರ್ ಆಗಿ, ವೈಷ್ಣವ್ ಸೂಪರ್ ಸೈಕ್ಲೋನ್ ಬಿಕ್ಕಟ್ಟನ್ನು ನಿಭಾಯಿಸಿದ್ದರು. ಅಲ್ಲಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ನಿಭಾಯಿಸಬೇಕಿತ್ತು. ಸಿಕ್ಕಾಪಟ್ಟೆ ಕೆಲಸ ಮತ್ತು ಹದಗೆಟ್ಟ ಹವಾಮಾನವು ಒಂದು ಸವಾಲಾಗಿದ್ದು,ಅಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಮರಳುವ ಮೊದಲು ಸಾಕಷ್ಟು ವಿರಾಮಗಳು ಮತ್ತು ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನಿರ್ವಹಿಸಲಾಯಿತು.
ಅಪಘಾತದ ಸ್ಥಳದಲ್ಲಿ ಅಥವಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರತಿಯೊಂದು ತಂಡಕ್ಕೂ ಸಮಯೋಚಿತ ವಿರಾಮಗಳನ್ನು ನೀಡಲಾಗಿದೆ. ಅವರು ಬಳಲದಂತೆ ನೋಡಿಕೊಳ್ಳಲಾಗಿದೆ ಎಂದು ತಂಡದ ಸದಸ್ಯರೊಬ್ಬರು ಎಎನ್ಐಗೆ ತಿಳಿಸಿದರು. ಭಾನುವಾರ ರಾತ್ರಿ, ಅಪ್ ಲೈನ್ ಚಾಲನೆಯಾದಾಗ ಈ ತಂಡವು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಯಿತು.
ತನ್ನ ಇಡೀ ತಂಡದೊಂದಿಗೆ 51 ಗಂಟೆಗಳ ಕಾಲ ಜತೆಯಾಗಿ ನಿಂತ ಅಶ್ವಿನಿ ವೈಷ್ಣವ್ ಎಲ್ಲ ಕೆಲಸಗಳಾದ ನಂತರ ಕೈ ಮುಗಿದು ದೇವರಿಗೆ ಧನ್ಯವಾದ ಸಲ್ಲಿಸಿದಾಗ ಎಲ್ಲರೂ ಭಾವುಕರಾಗಿದ್ದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Wed, 7 June 23