ಕೊರೊನಾ ಎರಡನೇ ಅಲೆಯ ನಂತರ ರೈಲ್ವೆ ಇಲಾಖೆ (Railways) ತನ್ನ ಸೇವೆಯಲ್ಲಿ ಹಲವು ಬದಲಾವಣೆ ಮಾಡಿತ್ತು. ಇದೀಗ ಜನಜೀವನ ಸಹಜಸ್ಥಿತಿಗೆ ಬರುತ್ತಿರುವುದರಿಂದ ತನ್ನ ಹಳೆಯ ಸೇವೆಗಳನ್ನು ಮರುಪ್ರಾರಂಭಹಗೊಳಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಅದು ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಬೇಯಿಸಿದ ಊಟದ ಸೇವೆಯನ್ನು (Cooked Meal) ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಸಾಂಕ್ರಾಮಿಕ ರೋಗದ ಕಾತರಣದಿಂದ ಹೇರಲಾಗಿದ್ದ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗಿರುವುದರಿಂದ, ಸೇವೆಗಳನ್ನು ಪುನಃಸ್ಥಾಪಿಸಿ, ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಊಟವನ್ನು ಪುನರಾರಂಭಿಸಲು ರೈಲ್ವೆ ಮಂಡಳಿಯು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವನ್ನು (Indian Railway Catering and Tourism Corporation- IRCTC) ಪತ್ರದಲ್ಲಿ ಕೇಳಿದೆ.
ರೈಲ್ವೆ ಸೇವೆಗಳನ್ನು ಈ ಹಿಂದಿನಂತೆ ನೀಡಲು ಪ್ರಯಾಣಿಕರಿಗೆ ಆಹಾರದ ಸೇವೆಯಲ್ಲಿ ಹೇರಲಾಗಿದ್ದ ನಿಯಮಗಳನ್ನು ಸಡಿಲಗೊಳಿಸಲು ಇಲಾಖೆ ನಿರ್ಧರಿಸಿದೆ. ಆದ್ದರಿಂದ ಪ್ರಯಾಣಿಕರಿಗೆ ಇನ್ನು ಮುಂದೆ ಬೇಯಿಸಿದ ಆಹಾರ ಈ ಮೊದಲಿನಂತೆ ಪ್ರಯಾಣದ ವೇಳೆ ಲಭ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ವೇಳೆ ಸಿದ್ಧ ಆಹಾರದ ಸೇವೆ ಈಗಿನಂತೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಬೇಯಿಸಿದ ಆಹಾರದ ಸೇವೆ ಡಿಸೆಂಬರ್ 1 ಅಥವಾ ಅದಕ್ಕಿಂತ ಮೊದಲೇ ಪ್ರಯಾಣಿಕರಿಗೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ತಿಂಗಳ ಪ್ರಾರಂಭದಲ್ಲಿ ರೈಲ್ವೆಯು ಕೊರೊನಾ ಕಾಲದಲ್ಲಿ ಪ್ರಾರಂಭವಾಗಿದ್ದ ‘ವಿಶೇಷ ರೈಲುಗಳು’ ಎಂಬ ಹೆಸರನ್ನು ತೆಗೆದು, ಮೊದಲಿನಂತೆ ಸಾಮಾನ್ಯ ರೈಲುಗಳಾಗಿ ಸಂಚರಿಸಲಿವೆ ಎಂದು ತಿಳಿಸಿತ್ತು. ಅಲ್ಲದೇ ಈ ಹಿಂದಿದ್ದ ಮೂಲ ಟಿಕೆಟ್ ಬೆಲೆಯನ್ನು ಮತ್ತೆ ನಿಗದಿಗೊಳಿಸಲು ರೈಲ್ವೆ ನಿರ್ಧರಿಸಿದೆ. ಈ ಮೂಲಕ ಮತ್ತೆ ಮೊದಲಿನಂತೆ ಸೇವೆ ನೀಡಲು ರೈಲ್ವೆ ಸಿದ್ಧತೆ ನಡೆಸಿದೆ.
ದೇಶದಲ್ಲಿ ಪ್ರತಿದಿನ ಸುಮಾರು 10,000- 15,000 ಕೇಸ್ಗಳು ದಾಖಲಾಗುತ್ತಿವೆ. ಪಾಸಿಟಿವಿಟಿ ಪ್ರಮಾಣ ಸ್ಥಿರದಲ್ಲಿರುವುದರಿಂದ ರೈಲ್ವೆ ಸಾಮಾನ್ಯ ನಿಯಮಗಳನ್ನು ಮರುಅನುಷ್ಠಾನಗೊಳಿಸುತ್ತಿದೆ. ಇತ್ತೀಚೆಗಷ್ಟೇ ದೇಶಿ ವಿಮಾನಗಳಲ್ಲೂ ಬೇಯಿಸಿದ ಆಹಾರವನ್ನು ನೀಡಲು ನಾಗರಿಕ ಸಚಿವಾಲಯ ಅನುಮೋದನೆ ನೀಡಿತ್ತು.
ಇದನ್ನೂ ಓದಿ:
Kerala Rain: ಕೇರಳದಲ್ಲಿ ಭಾರೀ ಮಳೆಯಿಂದ ಉಕ್ಕಿ ಹರಿದ ಪಂಬಾ ನದಿ; ಇಂದು ಶಬರಿಮಲೆ ಯಾತ್ರೆ ಸ್ಥಗಿತ
Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ
Published On - 9:51 am, Sat, 20 November 21