ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಚಿನ್ ಪೈಲಟ್

| Updated By: ರಶ್ಮಿ ಕಲ್ಲಕಟ್ಟ

Updated on: Sep 29, 2022 | 8:27 PM

ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಸಚಿನ್ ಪೈಲಟ್ ಆಗಮಿಸಿದ್ದು, ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ರಾಷ್ಟ್ರೀಯ ನೇತೃತ್ವ ಪರಿಹಾರ ಸೂಚಿಸುವ ನಿರೀಕ್ಷೆ ಇದೆ .

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಚಿನ್ ಪೈಲಟ್
ಸಚಿನ್ ಪೈಲಟ್
Follow us on

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಿರುವ ಚುನಾವಣೆಯಿಂದ ಹಿಂದೆ ಸರಿದಿದ್ದು, ಇಂದು (ಗುರುವಾರ)ಸಂಜೆ  ಸಚಿನ್ ಪೈಲಟ್ (Sachin Pilot) ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ರಾಷ್ಟ್ರೀಯ ನೇತೃತ್ವ ಪರಿಹಾರ ಸೂಚಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ ಮತ್ತು  ಇತರ ನಾಯಕರ ಬಗ್ಗೆ ಮಾತನಾಡಬೇಡಿ ಎಂದುರಾಜಸ್ಥಾನ ಶಾಸಕರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಯಾವುದೇ ಮಟ್ಟದ ನಾಯಕರು ಇತರ ನಾಯಕರ ಬಗ್ಗೆಯಾಗಲೀ ಪಕ್ಷದ ಆಂತರಿಕ ವಿಷಯದ ಬಗ್ಗೆಯಾಗಲೀ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು ಎಂದು ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಆದೇಶ ನೀಡಿದ್ದಾರೆ.

ನಾವು ಪ್ರತಿಸ್ಪರ್ಧಿಗಳಲ್ಲ, ನಮ್ಮ ನಡುವೆ ಇರುವುದು ಸೌಹಾರ್ದ ಸ್ಪರ್ಧೆ: ಶಶಿ ತರೂರ್

ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ದಿಗ್ವಜಯ ಸಿಂಗ್ ಅವರ ನಿರ್ಧಾರವನ್ನು ಶಶಿ ತರೂರ್ ಸ್ವಾಗತಿಸಿದ್ದಾರೆ. ಶಶಿ ತರೂರ್ ಕೂಡಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇಂದು ದಿಗ್ವಜಯ ಸಿಂಗ್  ತರೂರ್ ಅವರನ್ನು  ಭೇಟಿ ಮಾಡಿದ್ದಾರೆ. ಸಿಂಗ್ ಜತೆಗಿರುವ ಫೋಟೊ ಶೇರ್ ಮಾಡಿದ ತಿರುವನಂತಪುರಂ ಸಂಸದ ತರೂರ್, ನಾವು ಇಬ್ಬರೂ ಪ್ರತಿಸ್ಪರ್ಧಿಗಳಲ್ಲ. ನಮ್ಮಿಬ್ಬರಲ್ಲಿ ಯಾರೇ ಗೆದ್ದರೂ ಅದು ಕಾಂಗ್ರೆಸ್ ಪಕ್ಷದ ಗೆಲುವು ಆಗಿರುತ್ತದೆ ಎಂದಿದ್ದಾರೆ. ಇಂದು ಮಧ್ಯಾಹ್ನ ಮಧ್ಯಾಹ್ನ ದಿಗ್ವಿಜಯ ಸಿಂಗ್ ನನ್ನನ್ನು ಭೇಟಿಯಾದರು. ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಪೈಪೋಟಿಯಲ್ಲ ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ನಾವಿಬ್ಬರೂ ಒಪ್ಪಿಕೊಂಡೆವು. ಯಾರೇ ಮೇಲುಗೈ ಸಾಧಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ ಆಗಿ ಉಳಿಯುತ್ತಾರೋ ಇಲ್ಲವೋ?; ಇನ್ನೆರಡು ದಿನಗಳಲ್ಲಿ ನಿರ್ಧಾರ

ಸೋನಿಯಾ ಗಾಂಧಿಯವರ  ಕ್ಷಮೆಯಾಚಿಸುವ ಮೂಲಕ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಇದಾದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್, ಗೆಹ್ಲೋಟ್  ರಾಜಸ್ಥಾನ  ಸಿಎಂ ಸ್ಥಾನದಲ್ಲಿ ಉಳಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಸೋನಿಯಾ ಗಾಂಧಿ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಭಾನುವಾರದ ಘಟನೆ ಬಗ್ಗೆ ತಾನು ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿರುವುದಾಗಿ ಗೆಹ್ಲೋಟ್ ಹೇಳಿದ್ದಾರೆ. ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೇನ್ , ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದ ಸಭೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಬಹಿರಂಗ ಬಂಡಾಯವೆದ್ದಿದ್ದರು. ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ರಾಜಸ್ಥಾನ ಸಿಎಂ ಸ್ಥಾನಕ್ಕೆ ಸಚಿನ್ ಪೈಲಟ್ ಬರಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರಾಜಸ್ಥಾನದಲ್ಲಿ 90ಕ್ಕೂ ಹೆಚ್ಚು ಶಾಸಕರು ಭಾನುವಾರ ರಾಜೀನಾಮೆ ಬೆದರಿಕೆ ಒಡ್ಡಿದ್ದರು. ಆದಾಗ್ಯೂ,ಗೆಹ್ಲೋಟ್ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಕೇಳಿದಾಗ ಆ ಬಗ್ಗೆ ನಿರ್ಧಾರ ಸೋನಿಯಾ ಗಾಂಧಿ ಅವರದ್ದು ಎಂದು ವೇಣುಗೋಪಾಲ್ ಹೇಳಿದ್ದಾರೆ.

Published On - 8:10 pm, Thu, 29 September 22