ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮಸೂದೆ ಅಂಗೀಕರಿಸಲು ರಾಜಸ್ಥಾನ ಸರ್ಕಾರ ನಿರ್ಧಾರ

|

Updated on: Jul 04, 2023 | 8:34 PM

ಪೇಪರ್ ಸೋರಿಕೆ ವಿರುದ್ಧದ ಕಾನೂನಿನಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯನ್ನಾಗಿ ಮಾಡಲು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ತರಲು ನಿರ್ಧರಿಸಲಾಗಿದೆ ಎಂದು ಗೆಹ್ಲೋಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮಸೂದೆ ಅಂಗೀಕರಿಸಲು ರಾಜಸ್ಥಾನ ಸರ್ಕಾರ ನಿರ್ಧಾರ
ಅಶೋಕ್ ಗೆಹ್ಲೋಟ್
Follow us on

ಜೈಪುರ: ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆಯಲ್ಲಿ (Exam Paper Leaks) ಭಾಗಿಯಾಗಿರುವವರ ಶಿಕ್ಷೆಯನ್ನು ಪ್ರಸ್ತುತ 10 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಹೆಚ್ಚಿಸುವ ಮಸೂದೆಯನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ತರಲು ರಾಜಸ್ಥಾನ (Rajasthan) ಸರ್ಕಾರ ಯೋಜಿಸಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮಂಗಳವಾರ ತಿಳಿಸಿದ್ದಾರೆ. ಮಾರ್ಚ್ 2022 ರಲ್ಲಿ ಸರ್ಕಾರಿ ಪರೀಕ್ಷೆಯ ಪತ್ರಿಕೆ ಸೋರಿಕೆ ಮತ್ತು ಅಂತಹ ನೇಮಕಾತಿ ಪರೀಕ್ಷೆಗಳಲ್ಲಿ ನಕಲು ಮಾಡಿದ ಅಪರಾಧಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 10 ಕೋಟಿ ದಂಡ ವಿಧಿಸುವ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು. ಪತ್ರಿಕೆ ಸೋರಿಕೆಯಿಂದಾಗಿ ಸೆಪ್ಟೆಂಬರ್ 2021 ರಲ್ಲಿ ನಡೆದ REET ಹಂತ-ಎರಡು ಪರೀಕ್ಷೆಯನ್ನು ರದ್ದುಗೊಳಿಸಿದ ಒಂದು ತಿಂಗಳ ನಂತರ ಇದು ಬಂದಿದೆ.

ಪೇಪರ್ ಸೋರಿಕೆ ವಿರುದ್ಧದ ಕಾನೂನಿನಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯನ್ನಾಗಿ ಮಾಡಲು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ತರಲು ನಿರ್ಧರಿಸಲಾಗಿದೆ ಎಂದು ಗೆಹ್ಲೋಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾರದರ್ಶಕತೆ ತರಲು, ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ), ಸಿಬ್ಬಂದಿ ಇಲಾಖೆ (ಡಿಒಪಿ), ರಾಜಸ್ಥಾನ ಸಿಬ್ಬಂದಿ ಆಯ್ಕೆ ಮಂಡಳಿ (ಆರ್‌ಎಸ್‌ಎಸ್‌ಬಿ) ಯೊಂದಿಗೆ ಚರ್ಚಿಸಿದ ನಂತರ ಉತ್ತಮ ಪ್ರಕ್ರಿಯೆಯನ್ನು ಸಿದ್ಧಪಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪೇಪರ್ ಸೋರಿಕೆ ವಿಚಾರವಾಗಿ ರಾಜಸ್ಥಾನದ ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಬರುತ್ತಿವೆ. ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

REET ಪೇಪರ್ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ, ಪ್ರಸ್ತುತ ಇದನ್ನು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ತನಿಖೆ ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ