ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಗುಜರಾತ್‌ನಿಂದ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹಾಗೂ ಮಾಹಾರಾಷ್ಟ್ರದಿಂದ ಇತ್ತಿಚೇಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ (Ashok Chavan) ಅವರಿಗೆ ರಾಜ್ಯಸಭೆಗೆ ಟಿಕೆಟ್ ನೀಡಿದೆ. ನಡ್ಡಾ ಅವರು ಪ್ರಸ್ತುತ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಆಡಳಿತವಿರುವ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾಬಲವಿಲ್ಲದ ಕಾರಣ ನಡ್ಡಾ ಅವರನ್ನು ಈ ಬಾರಿ ಗುಜರಾತ್‌ನಿಂದ ಕಣಕ್ಕಿಳಿಸಲಿದೆ. ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಅವರು ನೆನ್ನೆ ತಾನೇ ಬಿಜೆಪಿಗೆ ಸೇರಿದರು. ಇಂದು ಅವರಿಗೆ ಮಹಾರಾಷ್ಟ್ರದಿಂದ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.
ಬಿಜೆಪಿ ರಾಜ್ಯಸಭಾ ಚುನಾವಣೆಗೆ ಗುಜರಾತ್‌ನಿಂದ ನಾಲ್ಕು ಜನರನ್ನು ಹಾಗೂ ಮಹಾರಾಷ್ಟ್ರದಿಂದ ಮೂರು ಜನರನ್ನು ಕಣಕ್ಕಿಳಿಸಿದೆ. ಗುಜರಾತ್‌ನಿಂದ ಜೆಪಿ ನಡ್ಡಾ, ಗೋವಿಂದಭಾಯ್ ಧೋಲಾಕಿಯಾ, ಮಾಯಾಂಕ್‌ಭಾಯ್ ನಾಯಕ್ ಮತ್ತು ಡಾ ಜಶ್ವಂತ್‌ಸಿನ್ಹ್ ಪರ್ಮಾರ್, ಮಹಾರಾಷ್ಟ್ರದಿಂದ ಅಶೋಕ್ ಚವಾಣ್, ಮೇಧಾ ಕುಲಕರ್ಣಿ ಮತ್ತು ಡಾ ಅಜಿತ್ ಗೋಪ್‌ಛಾಡೆ ಆಯ್ಕೆ ಮಾಡಿದೆ.
ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮಧ್ಯಪ್ರದೇಶದಿಂದ ಕೇಂದ್ರ ಸಚಿವರಾದ ಎಲ್ ಮುರುಗನ್, ಮಾಯಾ ನರೋಲ್ಯ, ಬನ್ಸಿಲಾಲ್ ಗುರ್ಜರ್ ಮತ್ತು ಉಮೇಶ್ ನಾಥ್ ಮಹಾರಾಯ್ ಅವರನ್ನು ಕಣಕ್ಕಿಳಿಸಿದೆ. ಒಡಿಶಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸೂಚಿಸಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ವಿಭಾಕರ್ ಶಾಸ್ತ್ರಿ ಕಾಂಗ್ರೆಸ್‌ಗೆ ರಾಜೀನಾಮೆ
ಜೆಪಿ ನಡ್ಡಾಗೆ ರಾಜ್ಯ ಸಭಾ ಟಿಕೆಟ್ ನೀಡಿರೋದು ವೈಯಕ್ತಿವಾಗಿ ನನಗೆ ಸಂತೋಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾಗಿ ನಡ್ಡಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕಳೆದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ನಡ್ಡಾ ಪಾತ್ರ ಇದೆ. ನಡ್ಡಾ ಮೊದಲ ಬಾರಿ ಅಲ್ಲ, ಈ ಹಿಂದೆ ಕೂಡಾ ರಾಜ್ಯ ಸಭೆಯಿಂದ ಸ್ಪರ್ಧೆ ಮಾಡಿದ್ದಾರೆ. ಇದೀಗ ಗುಜರಾತ್ ನಿಂದ ಅವರು ರಾಜ್ಯಸಭೆಗೆ ಸ್ಪರ್ಧೆ ಮಾಡ್ತಿರೋದು ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Wed, 14 February 24