ದೆಹಲಿ: ಗರ್ಭಪಾತದ ಗರಿಷ್ಠ ಅವಧಿ ಮಿತಿ ಹೆಚ್ಚಿಸುವ ಮಸೂದೆ ರಾಜ್ಯಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಇಷ್ಟು ದಿನ ವಿಶೇಷ ಸಂದರ್ಭಗಳಲ್ಲಿ 20ವಾರಗಳವರೆಗಿನ ಗರ್ಭವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶ ಇತ್ತು. ಅದರ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲು ಕಳೆದ ವರ್ಷವೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಹಾಗೇ ಲೋಕಸಭೆಯಲ್ಲೂ ಮಸೂದೆ ಪಾಸ್ ಆಗಿತ್ತು. ನಿನ್ನೆ ರಾಜ್ಯಸಭೆಯಲ್ಲೂ ಬಿಲ್ ಪಾಸ್ ಆಗಿದೆ.
ವಿಶೇಷ ಸಂದರ್ಭಗಳಲ್ಲಿ, ಅಂದರೆ ಅತ್ಯಾಚಾರ ಸಂತ್ರಸ್ತೆಯರು ಗರ್ಭ ಧರಿಸಿದಾಗ, ರಕ್ತಸಂಬಂಧಿಗಳಿಂದಲೇ ಗರ್ಭಿಣಿಯಾದವರು, ಅಪ್ರಾಪ್ತೆಯರು-ಅಂಗವಿಕಲೆಯರು ಗರ್ಭ ಧರಿಸಿ ಸಂಕಷ್ಟಕ್ಕೀಡಾದಾಗ ಅವರು ಗರ್ಭಪಾತ ಮಾಡಿಸಿಕೊಳ್ಳಬೇಕಾದರೆ ಅದರ ಮಿತಿ 20 ವಾರಗಳು ಮಾತ್ರ ಇತ್ತು. ಅದಕ್ಕಿಂತಲೂ ಜಾಸ್ತಿಯಾಗಿದ್ದರೆ ಗರ್ಭ ತೆಗೆಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ ಇದೀಗ ಪಾಸ್ ಆಗಿರುವ ಮಸೂದೆ ಕಾಯ್ದೆಯಾದ ತಕ್ಷಣದಿಂದ ಮಿತಿ 24ವಾರಗಳಿಗೆ ಅಂದರೆ 6 ತಿಂಗಳವರೆಗೆ ಇರುತ್ತದೆ.
1971ರ ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಗೆ 2020ರಲ್ಲಿ ತರಲಾದ ಈ ತಿದ್ದುಪಡಿಗೆ ವರ್ಷದ ಹಿಂದೆಯೇ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು. ನಿನ್ನೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಪಾಸ್ ಆಯಿತು. ಈ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳಿಸಬೇಕು ಎಂಬ ನಿರ್ಣಯವನ್ನು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಮಂಡಿಸಿದರೂ ಅದಕ್ಕೆ ಹಿನ್ನಡೆಯಾಯಿತು. ಕೊನೆಯಲ್ಲಿ ಮಸೂದೆ ಪಾಸ್ ಆಗಿದೆ ಎಂದು ರಾಜ್ಯಸಭೆಯ ಡೆಪ್ಯೂಟಿ ಚೇರ್ಮನ್ ಹರ್ವಿನಾಶ್ ನಾರಾಯಣ್ ಸಿಂಗ್ ಘೋಷಿಸಿದರು.
ಗರ್ಭಪಾತ ಕಾಯ್ದೆಗೆ ಒಮ್ಮೆಲೇ ಈ ತಿದ್ದುಪಡಿ ತಂದಿಲ್ಲ. ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗಿತ್ತು. ಜಾಗತಿಕವಾಗಿ ಈ ವಿಷಯಗಳಲ್ಲಿ ಯಾವ ನಿಯಮಗಳಿವೆ ಎಂಬುದನ್ನೂ ಪರಿಶೀಲನೆ ಮಾಡಿದ ಬಳಿಕವಷ್ಟೇ 20 ವಾರಗಳ ಮಿತಿಯನ್ನು 24ವಾರಗಳಿಗೆ ಹೆಚ್ಚಿಸಲಾಗಿದೆ. ಮಹಿಳೆಯರ ಗೌರವ-ಘನತೆಗೆ ಧಕ್ಕೆ ತರುವ ಯಾವುದೇ ಕಾನೂನನ್ನೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ತರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಯಾವುದೇ ಮಸೂದೆ ಮಂಡನೆಯಾದಾಗಲೂ ಅದನ್ನು ವಿರೋಧಿಸುವುದು ಕೆಲವು ಪಕ್ಷಗಳ, ನಾಯಕರ ಸಹಜ ಪ್ರವೃತ್ತಿ. ಕಾಂಗ್ರೆಸ್ ಅಷ್ಟೇ ಅಲ್ಲ, ಉಳಿದ ಪಕ್ಷಗಳಾದ ಶಿವಸೇನಾ, ಎಐಟಿಸಿ, ಸಿಪಿಟಿ, ಸಿಪಿಐ ಎಂ, ಸಮಾಜವಾದಿ ಪಕ್ಷದ ಹಲವು ನಾಯಕರೂ ಸಹ ಬಿಲ್ನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸಲು ಒತ್ತಾಯಿಸಿದರು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video: ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ್ದೇಕೆ ಎಂದು ಅಮೀರ್ ಖಾನ್ ತಿಳಿಸಿದ್ದಾರೆ
Published On - 3:57 pm, Wed, 17 March 21