Viral Video: ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ್ದೇಕೆ ಎಂದು ಅಮೀರ್ ಖಾನ್ ತಿಳಿಸಿದ್ದಾರೆ
Aamir Khan: ಅಮೀರ್ ಖಾನ್ ಮಾಧ್ಯಮದವರೊಂದಿಗೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ತಾವು ಯಾಕೆ ಸಾಮಾಜಿಕ ಜಾಲತಾಣವನ್ನು ತೊರೆಯಲು ಮನಸ್ಸು ಮಾಡಿದ್ದೇನೆ ಎಂದು ಕಾರಣಗಳನ್ನು ನೀಡಿದ್ದಾರೆ.
ಮುಂಬೈ: ಸಾಮಾಜಿಕ ಜಾಲತಾಣಗಳನ್ನು ತೊರೆಯುವುದಾಗಿ ಬಾಲಿವುಡ್ ಖ್ಯಾತ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ (Aamir Khan) ಮಾರ್ಚ್ 15ರಂದು ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಾನು ಅಷ್ಟು ಕ್ರಿಯಾಶೀಲನಾಗಿಲ್ಲ. ಈವರೆಗೆ ಇಲ್ಲಿ ಜೊತೆಯಾಗಿದ್ದು, ಶುಭಹಾರೈಸಿದ್ದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದರು. ಭಾನುವಾರ (ಮಾರ್ಚ್ 14)ವಷ್ಟೇ 56ನೇ ಜನ್ಮದಿನ ಆಚರಿಸಿಕೊಂಡಿದ್ದ ಬಾಲಿವುಡ್ ನಟ ಅಮೀರ್ ಖಾನ್ ಇಂದು ಏಕಾಏಕಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದಾರೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಅಮೀರ್ ಖಾನ್ ಮಾಧ್ಯಮದವರೊಂದಿಗೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ತಾವು ಯಾಕೆ ಸಾಮಾಜಿಕ ಜಾಲತಾಣವನ್ನು ತೊರೆಯಲು ಮನಸ್ಸು ಮಾಡಿದ್ದೇನೆ ಎಂದು ಕಾರಣ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಸಿನಿಮಾ ಸ್ಕ್ರೀನಿಂಗ್ ಒಂದರಲ್ಲಿ ಭಾಗವಹಿಸಿದ ಬಳಿಕ ಅಮೀರ್ ಖಾನ್ ಮಾತನಾಡಿದ್ದಾರೆ.
ಮಾಧ್ಯಮದವರು ಸುತ್ತುವರಿದು ಸಾಮಾಜಿಕ ಜಾಲತಾಣ ತೊರೆಯುವ ನಿರ್ಧಾರ ಏಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ನೀವು ನಿಮ್ಮ ಥಿಯರಿಗಳನ್ನು ಈ ನಿರ್ಧಾರದ ಮೇಲೆ ಹೇರಬೇಡಿ. ನಾನು ನನ್ನ ಪ್ರಪಂಚದಲ್ಲಿ ಬದುಕುತ್ತೇನೆ. ಅಷ್ಟೇ ಅಲ್ಲದೆ ನಾನು ನಿಜವಾಗೂ ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಆಕ್ಟಿವ್ ಆಗಿಲ್ಲ’ ಎಂದು ಹೇಳಿದ್ದಾರೆ. ಇಂದಿನ ದಿನಮಾನದಲ್ಲಿ ಮಾಧ್ಯಮದ ಪಾತ್ರವೂ ಬಹುಮುಖ್ಯವಾಗಿದೆ. ನಾನು ಮಾಧ್ಯಮದ ಮೂಲಕ ಸಂವಹನ ನಡೆಸುತ್ತೇನೆ ಎಂದೂ ಅಮೀರ್ ಖಾನ್ ಹೇಳಿದ್ದಾರೆ.
View this post on Instagram
ಅಮೀರ್ ಖಾನ್ ಕೊನೇ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ.. ಇದೇ ನನ್ನ ಕೊನೇ ಪೋಸ್ಟ್ ಆಗಲಿದೆ. ಬೇರೆ ಹೇಗಾದರೂ ನಾನು ಸಕ್ರಿಯನಾಗಿ ಇರುತ್ತೇನೆ. ಯಾವುದೇ ನೆಪ, ಸೋಗು ಹಾಕುವುದನ್ನು ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನ್ನ ಸಿನಿಮಾ ಕೆಲಸಗಳ ಮೇಲೆ ಪೂರ್ತಿಯಾಗಿ ಗಮನ ಹರಿಸಬೇಕಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಲ್ಲಿಸುತ್ತಿದ್ದೇನೆ. ನಿಮ್ಮೊಂದಿಗೆ ಖಂಡಿತ ಬೇರೆ ದಾರಿಯಲ್ಲಿ ಸಂವಹನ ನಡೆಸುತ್ತೇನೆ. ಇನ್ನೊಂದು ಮುಖ್ಯವಿಷಯವೆಂದರೆ ಆಮೀರ್ಖಾನ್ ಪ್ರೊಡಕ್ಷನ್ ತನ್ನ ಅಧಿಕೃತ ಚಾನಲ್ ಪ್ರಾರಂಭ ಮಾಡುತ್ತಿದ್ದು, ನನ್ನ ಮುಂದಿನ ಸಿನಿಮಾಗಳ ಕುರಿತಾದ ಎಲ್ಲ ಮಾಹಿತಿಯೂ ಅದರಲ್ಲಿ ಶೇರ್ ಆಗಲಿದೆ ಎಂದು ಅಮೀರ್ ಖಾನ್ ಹೇಳಿದ್ದಾರೆ.
ಇಂಥ ನಿರ್ಧಾರಗಳು ಮೊದಲಲ್ಲ ! ಕಳೆದ ವರ್ಷ ಫೆಬ್ರವರಿಯಲ್ಲಿ ಆಮೀರ್ ಖಾನ್ ಇಂಥದ್ದೇ ಒಂದು ನಿರ್ಧಾರ ಮಾಡಿದ್ದರು. ತಮ್ಮ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾಗುವವರೆಗೂ ನನ್ನ ಮೊಬೈಲ್ ಸ್ವಿಚ್ ಆನ್ ಮಾಡೋದಿಲ್ಲ ಎಂದು ಹೇಳಿದ್ದರು. ಲಾಲ್ ಸಿಂಗ್ ಚಡ್ಡಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದರಿಂದ ಹೀಗೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರು. ಲಾಲ್ ಸಿಂಗ್ ಚಡ್ಡಾ ಕೆಲಸಗಳು ಬಹುತೇಕ ಮುಗಿದಿದ್ದು, ಈ ವರ್ಷದ ಡಿಸೆಂಬರ್ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮಾಸ್ಕ್ ಹಾಕದ ಆಮೀರ್ ಖಾನ್ಗೆ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು!
Published On - 3:46 pm, Wed, 17 March 21