ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರ ಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಸಲುವಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಇಂದು ಮಧ್ಯಾಹ್ನ 3ಗಂಟೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಲಿದ್ದಾರೆ. ಸದ್ಯ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಯಾವೆಲ್ಲ ಯೋಜನೆ ರೂಪಿಸಬಹುದು ಎಂಬ ಬಗ್ಗೆ ಇಂದು ರಾಕೇಶ್ ಟಿಕಾಯತ್ ಕೋಲ್ಕತ್ತದಲ್ಲಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.
ಈ ಬಾರಿ ನರೇಂದ್ರ ಮೋದಿಯವರು ವಿಧಾನಸಭೆ ಚುನಾವಣೆಯಲ್ಲಿ ಸೋಲಲಿ ಎಂಬ ಆಶಯದೊಂದಿಗೆ, ವಿಧಾನಸಭೆ ಚುನಾವಣೆಗೂ ಮೊದಲು ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ, ಟಿಎಂಸಿ ಪರ ಪ್ರಚಾರ ನಡೆಸಿದ್ದ ರಾಕೇಶ್ ಟಿಕಾಯತ್, ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಹಾಗೇ ಮತ್ತೊಮ್ಮೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪಟ್ಟಕ್ಕೇರಿದ ಮಮತಾ ಬ್ಯಾನರ್ಜಿಯವರಿಗೆ ರಾಕೇಶ್ ಅಭಿನಂದನೆ ಸಲ್ಲಿಸಲಿದ್ದಾರೆ.
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದನ್ನು ವಿರೋಧಿಸಿ ಕಳೆದ ನವೆಂಬರ್ನಿಂದಲೂ ದೆಹಲಿಯ ಗಡಿಭಾಗಗಳಲ್ಲಿ ರಾಕೇಶ್ ಟಿಕಾಯತ್ ಸೇರಿ ನೂರಾರು ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸಹ ಈ ಕೃಷಿಕಾಯ್ದೆಗಳನ್ನು ವಿರೋಧಿಸುತ್ತಿದ್ದು, ತಾನು ರೈತರ ಪ್ರತಿಭಟನೆಗಳಿಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೆಷಲ್ ಉದುರು ಸಜ್ಜಕ; ಸಿಹಿಯಾದ ಅಡುಗೆ ಇಷ್ಟಪಡುವವರು ಮಾಡಿ ಸವಿಯಿರಿ
(Rakesh Tikait to meet Mamata Banerjee today in kolkata)