ಬಿಹಾರ: ಬಿಹಾರದ ಸಪೌಲ್ನ ಗ್ರಾಮವೊಂದರಲ್ಲಿ ಅಪರೂಪದ ಅಮೆರಿಕನ್ ಬಾರ್ನ್ ಗೂಬೆಯನ್ನು (American barn owl) ರಕ್ಷಿಸಲಾಗಿದೆ. ಕಾಗೆಗಳ ಗುಂಪು ಈ ಪಕ್ಷಿಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸಪೌಲ್ ಬಳಿಯ ದಪರಾಖಾ ಎನ್ನುವ ಗ್ರಾಮದ ಗ್ರಾಮಸ್ಥರು ಪಕ್ಷಿಯನ್ನು ರಕ್ಷಿಸಿದ್ದಾರೆ. ತ್ರಿವೇಣಿ ಗಂಜ್ ಪೊಲೀಸ್ ಠಾಣೆಯಲ್ಲಿ ಈ ಅಪರೂಪದ ಗೂಬೆ ಕಾಣಿಸಿಕೊಂಡಿದೆ. ದಪರಾಖಾ ಗ್ರಾಮದ ರಾಹುಲ್ ಎನ್ನುವವರು ಮನೆಯಿಂದ ಹೊರಗೆ ಹೋಗಿದ್ದಾಗ ಕಾಗೆಗಳ ಗುಂಪು ಗೂಬೆಯ ಮೇಲೆ ಅಟ್ಯಾಕ್ ಮಾಡಿದ್ದು, ಇದನ್ನು ಕಂಡು ರಾಹುಲ್ ಕಾಗೆಗಳಿಂದ ಗೂಬೆಯನ್ನು ರಕ್ಷಿಸಿ ತಮ್ಮ ಮನೆಗೆ ತಂದು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಭಾರತದಲ್ಲಿ ಕಾಣಿಸಿಕೊಂಡ ಅಪರೂಪದ ಈ ಗೂಬೆಯ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಪುಣೆಯ ಹಿರಿಯ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕನ್ ಬಾರ್ನ್ ಗೂಬೆ ಸಾಮಾನ್ಯವಾಗಿ ದಕ್ಷಿಣ ಮತ್ತು ಉತ್ತರ ಅಮೆರಿಕ ಭಾಗಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ. ಇದರ ಕೆಲವು ಉಪಜಾತಿಗಳು ಇಂಗ್ಲೆಂಡ್ ಮತ್ತು ಯುರೋಪ್ನ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ. ಹೀಗಾಗಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಅಚಾನಕ್ಕಾಗಿ ಸಿಕ್ಕಿದೆ. ಅಮೆರಿಕನ್ ಬಾರ್ನ್ ಗೂಬೆಯ ಉದ್ದನೆಯ ರೆಕ್ಕೆ ಮತ್ತು ಅಗಲವಾದ ಮುಖ ವಿಶೇಷ ಆಕರ್ಷಣೆಯಾಗಿದೆ. ಈ ಪಕ್ಷಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಹೀಗಾಗಿ ಇದೀಗ ಬಿಹಾರದಲ್ಲಿ ಸೆರೆಸಿಕ್ಕ ಪಕ್ಷಿಯ ರಕ್ಷಣೆ ಮಾಡಬೇಕಿದೆ.
ಕೆಲವು ದಿನಗಳ ಹಿಂದೆ 120 ವರ್ಷಗಳ ಬಳಿಕ ಮಾಂಡರಿಯನ್ ಬಾತುಕೋಳಿ ಕಾಣಿಸಿಕೊಂಡಿತ್ತು. ತಿನ್ಸುಕಿಯಾ ಜಿಲ್ಲೆಯ ಪಕ್ಷಿಪ್ರೇಮಿ ಮಾದಬ್ ಗೋಗಯ್ ಅವರು ಈ ಬಾತುಕೋಳಿಯನ್ನು ಗುರುತಿಸಿದ್ದರು. ಮಾಂಡರಿಯನ್ ಬಾತುಕೋಳಿ ಜಗತ್ತಿನ ಅತ್ಯಂತ ಸುಂದರ ಬಾತುಕೋಳಿ ಅಗಿದೆ.
ಇದನ್ನೂ ಓದಿ:
Metro Man Sreedharan ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಕೇರಳದ ಮೆಟ್ರೊಮ್ಯಾನ್ ಇ ಶ್ರೀಧರನ್
Published On - 4:34 pm, Thu, 16 December 21