ನಾಗ್ಪುರ: ರಾಜಕಾರಣಿಯೊಬ್ಬರು ನನಗೆ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರಲು ಆಫರ್ ನೀಡಿದ್ದರು. ಆ ಪಕ್ಷದ ಸದಸ್ಯನಾಗುವುದಕ್ಕಿಂತ ಬಾವಿಗೆ ಹಾರಿ ಸಾಯುವುದೇ ಒಳ್ಳೆಯದು ಎಂದು ಹೇಳಿ ನಾನು ಅದನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ ಕೇಂದ್ರ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ (Nitin Gadkari). ಕಾಂಗ್ರೆಸ್ ತನ್ನ 60 ವರ್ಷಗಳ ಆಡಳಿತದಲ್ಲಿ ಮಾಡಿದ ಕೆಲಸಗಳಿಗೆ ಹೋಲಿಸಿದರೆ ಕಳೆದ ಒಂಬತ್ತು ವರ್ಷಗಳಲ್ಲಿ ಬಿಜೆಪಿ (BJP) ಸರ್ಕಾರವು ದೇಶದಲ್ಲಿ ಎರಡು ಪಟ್ಟು ಕೆಲಸ ಮಾಡಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ಭಂಡಾರಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಬಿಜೆಪಿಗಾಗಿ ಕೆಲಸ ಮಾಡಿದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದು, ಪಕ್ಷದ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.
ದಿವಂಗತ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜಿಚ್ಕರ್ ಒಮ್ಮೆ ತಮಗೆ ನೀಡಿದ ಆಫರ್ ಬಗ್ಗೆಯೂ ಗಡ್ಕರಿ ನೆನಪಿಸಿಕೊಂಡಿದ್ದಾರೆ. ಜಿಚ್ಕರ್ ಒಮ್ಮೆ ನನ್ನಲ್ಲಿ ನೀವು ಪಕ್ಷದ ಉತ್ತಮ ಕಾರ್ಯಕರ್ತ ಮತ್ತು ನಾಯಕ. ನೀವು ಕಾಂಗ್ರೆಸ್ ಸೇರಿದರೆ, ನಿಮಗೆ ಉಜ್ವಲ ಭವಿಷ್ಯವಿದೆ ಎಂದಿದ್ದರು. ಅದಕ್ಕೆ ನಾನು ಕಾಂಗ್ರೆಸ್ ಸೇರುವುದಕ್ಕಿಂತ ಬಾವಿಗೆ ಹಾರುತ್ತೇನೆ ಎಂದು ಹೇಳಿದೆ. ನಾನು ಬಿಜೆಪಿ ಮತ್ತು ಅದರ ಸಿದ್ಧಾಂತದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದು, ಅದಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಗಡ್ಕರಿ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗಾಗಿ ಕೆಲಸ ಮಾಡುವಾಗ, ನನ್ನಲ್ಲಿ ಎಳವೆಯಲ್ಲೇ ಮೌಲ್ಯಗಳನ್ನು ತುಂಬಿದ್ದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗಡ್ಕರಿ ಶ್ಲಾಘಿಸಿದ್ದಾರೆ.
ಕಾಂಗ್ರೆಸ್ ಬಗ್ಗೆ ಮಾತನಾಡಿದ ಸಚಿವರು, ಪಕ್ಷ ರಚನೆಯಾದಾಗಿನಿಂದ ಹಲವು ಬಾರಿ ವಿಭಜನೆಯಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಇತಿಹಾಸವನ್ನು ನಾವು ಮರೆಯಬಾರದುಯ ಭವಿಷ್ಯಕ್ಕಾಗಿ ನಾವು ಹಿಂದಿನದನ್ನು ಕಲಿಯಬೇಕು. ಕಾಂಗ್ರೆಸ್ ತನ್ನ 60 ವರ್ಷಗಳ ಆಡಳಿತದಲ್ಲಿ ‘ಗರೀಬಿ ಹಟಾವೋ’ (ಬಡತನ ನಿರ್ಮೂಲನೆ) ಎಂಬ ಘೋಷಣೆಯನ್ನು ನೀಡಿತು. ಆದರೆ ವೈಯಕ್ತಿಕ ಲಾಭಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಿತು ಎಂದಿದ್ದಾರೆ.
ಇದನ್ನೂ ಓದಿ: ಪಠ್ಯಕ್ರಮದಿಂದ ಸಾವರ್ಕರ್ ಪಠ್ಯ ಕೈಬಿಡುವ ಕಾಂಗ್ರೆಸ್ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಲಿದೆ: ಮೊಮ್ಮಗ ರಂಜಿತ್
ಇದೇ ವೇಳೆ ಭಾರತವನ್ನು ಆರ್ಥಿಕ ಸೂಪರ್ ಪವರ್ ಮಾಡುವ ಅವರ ದೃಷ್ಟಿಕೋನಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಗಡ್ಕರಿ ದೇಶದ ಭವಿಷ್ಯ ಉಜ್ವಲವಾಗಿದೆ. ಕಾಂಗ್ರೆಸ್ ತನ್ನ 60 ವರ್ಷಗಳ ಆಡಳಿತದಲ್ಲಿ ಮಾಡಲಾಗದ ಕೆಲಸವನ್ನು ಕಳೆದ ಒಂಬತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ದುಪ್ಪಟ್ಟು ಮಾಡಿದೆ ಎಂದು ಗಡ್ಕರಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿದ್ದಾಗ, 2024 ರ ಅಂತ್ಯದ ವೇಳೆಗೆ ಯುಪಿಯ ರಸ್ತೆಗಳು ಯುಎಸ್‌ನಲ್ಲಿರುವಂತೆ ಆಗುತ್ತವೆ ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ ಗಡ್ಕರಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ