
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಮತ್ತು ಫಾರ್ಮಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಭ ಸುದ್ದಿ ನೀಡಿದೆ. ಮುಂಬೈ ಪ್ರಾದೇಶಿಕ ಕಚೇರಿಯ ಅಡಿಯಲ್ಲಿ ಬರುವ ವಿವಿಧ ಔಷಧಾಲಯಗಳಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಒಪ್ಪಂದದ ಆಧಾರದ ಮೇಲಿನ ಈ ಹುದ್ದೆಗಳಿಗೆ ನಿಗದಿತ ದಿನಾಂಕದೊಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 22 ಫಾರ್ಮಾಸಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವರ್ಗವಾರು ಹಂಚಿಕೆಯ ಪ್ರಕಾರ, ಸಾಮಾನ್ಯ ಅಥವಾ ಮೀಸಲಾತಿ ರಹಿತ (GEN/UR) ವರ್ಗಕ್ಕೆ 13 ಹುದ್ದೆಗಳು, ಇತರ ಹಿಂದುಳಿದ ವರ್ಗಗಳಿಗೆ (OBC) 5 ಹುದ್ದೆಗಳು ಹಾಗೂ ಆರ್ಥಿಕವಾಗಿ ದುರ್ಬಲ ವಿಭಾಗಗಳಿಗೆ (EWS) 2 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಉಳಿದಂತೆ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ 1 ಮತ್ತು ಪರಿಶಿಷ್ಟ ಪಂಗಡ (ST) ವರ್ಗದ ಅಭ್ಯರ್ಥಿಗಳಿಗೆ 1 ಹುದ್ದೆ ಮೀಸಲಾಗಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಫಾರ್ಮಸಿಯಲ್ಲಿ ಡಿಪ್ಲೊಮಾ (D.Pharm) ಅಥವಾ ಪದವಿ (B.Pharm) ಹೊಂದಿರಬೇಕಾಗುತ್ತದೆ. ಈ ನೇಮಕಾತಿಯು ಪೂರ್ಣ ಸಮಯದ ಶಾಶ್ವತ ಉದ್ಯೋಗವಲ್ಲದೆ ಒಪ್ಪಂದದ ಆಧಾರದ ಮೇಲೆ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇವಾ ನಿಯಮಗಳ ಪ್ರಕಾರ ಗಂಟೆಗೆ 600 ರೂ.ಗಳಂತೆ ಗೌರವಧನ ಅಥವಾ ವೇತನವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆ ಮತ್ತು ನೇರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳನ್ನು ನವೆಂಬರ್ 3, 2026 ರೊಳಗೆ ತಲುಪುವಂತೆ ಕಳುಹಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಆರ್ಬಿಐ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಅರ್ಹತೆಗಳು ಮತ್ತು ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಸೂಕ್ತ.
ಪ್ರಾದೇಶಿಕ ನಿರ್ದೇಶಕರು, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ, ನೇಮಕಾತಿ ವಿಭಾಗ, ಭಾರತೀಯ ರಿಸರ್ವ್ ಬ್ಯಾಂಕ್, ಮುಂಬೈ ಪ್ರಾದೇಶಿಕ ಕಚೇರಿ, ಶಹೀದ್ ಭಗತ್ ಸಿಂಗ್ ರಸ್ತೆ, ಕೋಟೆ, ಮುಂಬೈ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ