Kerala Assembly Elections 2021: ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಎನ್​ಡಿಎ ಅಭ್ಯರ್ಥಿಗಳು ಕೇರಳ ಹೈಕೋರ್ಟ್​ನಲ್ಲಿ ಸಲ್ಲಿಸಿದ ಅರ್ಜಿ ವಜಾ

|

Updated on: Mar 22, 2021 | 4:04 PM

ಎನ್​ಡಿಎ ಅಭ್ಯರ್ಥಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ನಗರೇಶ್ ಅವರ ಏಕಸದಸ್ಯ ಪೀಠವು, ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣಾ ಅಧಿಕಾರಿ ತೆಗೆದುಕೊಂಡ ನಿರ್ಧಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.

Kerala Assembly Elections 2021: ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಎನ್​ಡಿಎ ಅಭ್ಯರ್ಥಿಗಳು ಕೇರಳ ಹೈಕೋರ್ಟ್​ನಲ್ಲಿ ಸಲ್ಲಿಸಿದ ಅರ್ಜಿ ವಜಾ
ಕೇರಳ ಹೈಕೋರ್ಟ್
Follow us on

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಮೂವರು ಎನ್​ಡಿಎ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಅಧಿಕಾರಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್​ನಲ್ಲಿ ಸಲ್ಲಿಸಿದ ಅರ್ಜಿ ವಜಾ ಆಗಿದೆ. ಬಿಜೆಪಿ ಅಭ್ಯರ್ಥಿ ಎನ್. ಹರಿದಾಸ್, ನಿವೇದಿತಾ ಸುಬ್ರಮಣ್ಯಂ, ಎಐಎಡಿಎಂಕೆ ಅಭ್ಯರ್ಥಿ ಆರ್.ಎಂ. ಧನಲಕ್ಷ್ಮಿಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಇದನ್ನು ಪ್ರಶ್ನಿಸಿ ಈ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ತಲಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಕಣ್ಣೂರು ಜಿಲ್ಲಾಧ್ಯಕ್ಷ ಎನ್. ಹರಿದಾಸ್, ಗುರುವಾಯೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನಿವೇದಿತಾ ಸುಬ್ರಮಣ್ಯನ್, ದೇವಿಕುಳಂನಲ್ಲಿ ಬಿಜೆಪಿ ಮೈತ್ರಿಪಕ್ಷವಾದ ಅಣ್ಣಾ ಡಿಎಂಕೆ ಪಕ್ಷದ ಅಭ್ಯರ್ಥಿ ಆರ್.ಎಂ.ಧನಲಕ್ಷ್ಮಿ  ಅವರ ನಾಮಪತ್ರದಲ್ಲಿ ಪಕ್ಷದ ಅಧ್ಯಕ್ಷರ ಸಹಿ ಇಲ್ಲ ಎಂಬ ಕಾರಣದಿಂದ ಶನಿವಾರ ತಿರಸ್ಕೃತಗೊಂಡಿತ್ತು.

ಈ ಅಭ್ಯರ್ಥಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ನಗರೇಶ್ ಅವರ ಏಕಸದಸ್ಯ ಪೀಠವು, ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣಾ ಅಧಿಕಾರಿ ತೆಗೆದುಕೊಂಡ ನಿರ್ಧಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ನಾಮಪತ್ರದಲ್ಲಿ ಎಲ್ಲ ಮಾಹಿತಿಗಳು ತುಂಬಿಸಿರಬೇಕು. ಚುನಾವಣೆ  ಪ್ರಕ್ರಿಯೆ ಆರಂಭವಾದ ನಂತರ ಈ ವಿಷಯಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಗುರುವಾಯೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ಅವರ ಹೆಸರಿನ ನಾಮನಿರ್ದೇಶನ ಪತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸಹಿ ಇಲ್ಲ ಎಂದು ಹೇಳಿ ಚುನಾವಣಾ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದರು. ಡಮ್ಮಿ ಅಭ್ಯರ್ಥಿಯ ನಾಮಪತ್ರವೂ ಅಪೂರ್ಣವಾಗಿದೆ. ಬಿಜೆಪಿ ನಾಮಪತ್ರ ತಿರಸ್ಕರಿಸಲ್ಪಟ್ಟ ಕಾರಣ ಎನ್​ಡಿಎಗೆ ಗುರುವಾಯೂರಿನಲ್ಲಿ ಅಭ್ಯರ್ಥಿ ಇಲ್ಲದಂತಾಗಿದೆ. ಸಿಪಿಎಂ ಅಭ್ಯರ್ಥಿ ಎನ್.ಕೆ ಅಕ್ಬರ್, ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಕೆ.ಎನ್.ಎ ಖಾದರ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ.

ತಲಶ್ಶೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಹರಿದಾಸ್ ಅವರ ನಾಮಪತ್ರವೂ ಶನಿವಾರ ತಿರಸ್ಕರಿಸಲ್ಪಟ್ಟಿತ್ತು. ಚುನಾವಣಾ ಚಿಹ್ನೆ ನೀಡಲು ರಾಜ್ಯದ ಪ್ರತಿನಿಧಿಗೆ ಹೊಣೆ ವಹಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ನೀಡುವ ‘ಫಾರಂ ಎ’ನಲ್ಲಿ ಸಹಿ ಇಲ್ಲದೇ ಇರುವ ಕಾರಣ ಇವರ ನಾಮಪತ್ರ ತಿರಸ್ಕರಿಸಲ್ಪಟ್ಟಿತ್ತು. ಫಾರಂ ಎನಲ್ಲಿ ಮುದ್ರೆ ಇದ್ದರೂ ಸಹಿ ಇಲ್ಲ. ಡಮ್ಮಿಯಾಗಿ ಬಿಜೆಪಿ ಘಟಕ ಅಧ್ಯಕ್ಷ ಕೆ.ಲಿಜೇಶ್ ನಾಮಪತ್ರ ಸಲ್ಲಿಸಿದ್ದರೂ ಫಾರಂ ಎ ಇಬ್ಬರಿಗೂ ಒಂದೇ ಆಗಿರುವ ಕಾರಣ ನಾಮಪತ್ರವನ್ನು ಚುನಾವಣಾ ಅಧಿಕಾರಿ ಸ್ವೀಕರಿಸಿರಲಿಲ್ಲ.

ಇಡುಕ್ಕಿ ದೇವಿಕುಳಂ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕು ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲ್ಪಟ್ಟಿದೆ. ಎನ್​​ಡಿಎ ಮೈತ್ರಿಕೂಟದ , ಎಐಎಡಿಎಂ ಅಭ್ಯರ್ಥಿ ಧನಲಕ್ಷ್ಮಿ, ಡಮ್ಮಿ ಅಭ್ಯರ್ಥಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ ಪೊನ್​ಪಾಂಡಿ, ಬಿಎಸ್​ಪಿ ಅಭ್ಯರ್ಥಿ ತಂಗಚ್ಚನ್ ಅವರ ನಾಮಪತ್ರವನ್ನು ಶನಿವಾರ ಚುನಾವಣಾ ಅಧಿಕಾರಿ ತಿರಸ್ಕರಿಸಿದ್ದರು.

ಅಭ್ಯರ್ಥಿಗಳ ವಾದ ಏನು?
ಹರಿದಾಸ್ ಮತ್ತು ನಿವೇದಿತಾ ಪರವಾಗಿ ಹಿರಿಯ ನ್ಯಾಯವಾದಿಗಳಾದ ಎಸ್.ಶ್ರೀಕುಮಾರ್ ಮತ್ತು ಕೆ. ರಾಮ್ ಕುಮಾರ್ ವಾದಿಸಿದ್ದರು. ನಾಮಪತ್ರದಲ್ಲಿ ತಾಂತ್ರಿಕ ದೋಷ ಇದೆ ಎಂದು ಹೇಳಿ ಚುನಾವಣಾ ಅಧಿಕಾರಿ ನಾಮಪತ್ರ ತಿರಸ್ಕರಿಸಿದ್ದರು. ನಾಮಪತ್ರದಲ್ಲಿದ್ದ ತಪ್ಪುಗಳನ್ನು ತಿದ್ದಬಹುದಾಗಿತ್ತು. ಆದರೆ ಚುನಾವಣಾ ಅಧಿಕಾರಿ ಅದಕ್ಕೆ ಅವಕಾಶವನ್ನೇ ನೀಡಿಲ್ಲ. ಸಹಿ ಇಲ್ಲದೇ ಇರುವುದು ದೊಡ್ಡ ತಪ್ಪೇನಲ್ಲ. ಹಾಗಾಗಿ ಅವರ ನಾಮಪತ್ರವನ್ನು ಸ್ವೀಕರಿಸಬೇಕು ಎಂದು ವಾದಿಸಿದ್ದರು.

ರಿಟರ್ನಿಂಗ್ ಆಫೀಸರ್​ಗೆ ಈ ರೀತಿಯ ತಪ್ಪುಗಳನ್ನು ತಿದ್ದಲು ಅವಕಾಶ ನೀಡುವ ಅಧಿಕಾರವಿದೆ. ಪಿರವಂ ಮತ್ತು ಕೊಂಡೊಟ್ಟಿಯಲ್ಲಿ ಅಭ್ಯರ್ಥಿಗಳ ನಾಮಪತ್ರದಲ್ಲಿ ತಪ್ಪು ಕಾಣಿಸಿಕೊಂಡಾಗ ಅಲ್ಲಿನ ಚುನಾವಣಾ ಅಧಿಕಾರಿ ತಿದ್ದಲು ಅವಕಾಶ ನೀಡಿದ್ದರು. ಅಭ್ಯರ್ಥಿಗಳು ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿಲ್ಲ. ಹಾಗಾಗಿ ಈ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬಹುದು. ಸಂವಿಧಾನದ 226ನೇ ಆರ್ಟಿಕಲ್ ಪ್ರಕಾರ ಈ ಅವಕಾಶವಿದೆ ಎಂದು ನ್ಯಾಯವಾದಿಗಳು ವಾದಿಸಿದ್ದಾರೆ. ದೇವಿಕುಳಂನ ಎಐಎಡಿಎಂಕೆ ಅಭ್ಯರ್ಥಿ ಪರ ವಾದಿಸಿದ ವಕೀಲರು ಕೂಡಾ ನಾಮಪತ್ರದಲ್ಲಿನ ತಪ್ಪು ತಿದ್ದಲು ಅವಕಾಶ ನೀಡುವ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆ ಎಂದು ವಾದಿಸಿದ್ದಾರೆ.

ಚುನಾವಣಾ ಆಯೋಗ ಹೇಳಿದ್ದೇನು?
ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಭಾನುವಾರ ಹೈಕೋರ್ಟ್ ಮೆಟ್ಟಿಲೇರಿದ್ದು ಅದೇ ದಿನ ವಿಶೇಷ ವಿಚಾರಣೆ ನಡೆಸಲಾಗಿತ್ತು. ಪ್ರಸ್ತುತ ಪ್ರಕರಣ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ
ಹೇಳಿತ್ತು. ಸಂವಿಧಾನದ 329B ವಿಧಿ ಪ್ರಕಾರ ಚುನಾವಣೆ ಘೋಷಣೆ ಆದ ನಂತರ ಚುನಾವಣೆ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ನಿಯಮಗಳ ಪ್ರಕಾರ ನಾಮಪತ್ರದಲ್ಲಿ ಪಕ್ಷದ ಅಧ್ಯಕ್ಷರ ಸಹಿ ಕಡ್ಡಾಯ ಎಂದು ಹೇಳಿದೆ.

ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲ್ಪಟ್ಟಿರುವ ಕಾರಣ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಅಭ್ಯರ್ಥಿಗಳು ಇಲ್ಲದಾಗಿದೆ.

ಇದನ್ನೂ ಓದಿ:  Kerala Assembly Elections 2021: ನಾಮಪತ್ರ ತಿರಸ್ಕೃತ; ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಅಭ್ಯರ್ಥಿಗಳು

Kerala Assembly Elections 2021: ಕಲ್ಯಾಣ ಪಿಂಚಣಿ 2500 ರೂ, ಗೃಹಿಣಿಯರಿಗೂ ಸಿಗಲಿದೆ ಪಿಂಚಣಿ: ಚುನಾವಣೆ ಪ್ರಣಾಳಿಕೆ ಪ್ರಕಟಿಸಿದ ಎಲ್​ಡಿಎಫ್

 

Published On - 4:00 pm, Mon, 22 March 21