ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58ರಿಂದ 61ಕ್ಕೆ ಏರಿಕೆ; ವೇತನದಲ್ಲಿ ಹಲವು ಬದಲಾವಣೆ
ಶೇ. 30ರಷ್ಟು ಫಿಟ್ಮೆಂಟ್ನೊಂದಿಗೆ 11ನೇ ವೇತನ ಪರಿಷ್ಕರಣಾ ಆಯೋಗವನ್ನು (PRC) ಅಳವಡಿಸುವುದು ಹಾಗೂ ಸರ್ಕಾರಿ ನೌಕರರ ನಿವೃತ್ತಿ ವಯೋಮಾನವನ್ನು 58ರಿಂದ 61ಕ್ಕೆ ಏರಿಸುವುದಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರಿ ನೌಕರರ ಎರಡು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪೂರೈಸಿದ್ದಾರೆ. ವಿಧಾನಸಭೆಯಲ್ಲಿ ಇಂದು (ಮಾರ್ಚ್ 22) ಮಾತನಾಡಿದ ಅವರು ಸರ್ಕಾರಿ ನೌಕರರಿಗೆ ಡಬಲ್ ಧಮಾಕ ನೀಡಿದ್ದಾರೆ. ಶೇ 30ರಷ್ಟು ಫಿಟ್ಮೆಂಟ್ನೊಂದಿಗೆ 11ನೇ ವೇತನ ಪರಿಷ್ಕರಣಾ ಆಯೋಗದ ಶಿಫಾರಸುಗಳನ್ನು (PRC) ಜಾರಿಗೆ ತರುವುದು ಹಾಗೂ ಸರ್ಕಾರಿ ನೌಕರರ ನಿವೃತ್ತಿ ವಯೋಮಾನವನ್ನು 58ರಿಂದ 61ಕ್ಕೆ ಏರಿಸುವುದಾಗಿ ಹೇಳಿದ್ದಾರೆ. ಇವುಗಳನ್ನು ಜಾರಿಗೊಳಿಸುವ ಬಗ್ಗೆ ಚಂದ್ರಶೇಖರ್ ರಾವ್ 2018ರಲ್ಲಿ ಆಶ್ವಾಸನೆ ನೀಡಿದ್ದರು.
ಎಲ್ಲಾ ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು, ವಿದ್ಯಾ ಸ್ವಯಂಸೇವಕರು, ಕೆಜಿಬಿವಿ ಮತ್ತು ಸರ್ವ ಶಿಕ್ಷಾ ಅಭಿಯಾನ ಕೆಲಸಗಾರರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಎಸ್ಇಆರ್ಪಿ ನೌಕರರು, ಗೃಹ ರಕ್ಷಕ ದಳದ ಸಿಬ್ಬಂದಿಗಳು, ವಿಆರ್ಎ, ವಿಎಒ ಮತ್ತು ದಿನಗೂಲಿ ಕಾರ್ಮಿಕರು ಹೀಗೆ ಒಟ್ಟು 9,17,797 ನೌಕರರು ವೇತನ ಪರಿಷ್ಕರಣಾ ಸೌಲಭ್ಯದಿಂದ ಲಾಭ ಹೊಂದಲಿದ್ದಾರೆ.
ಹೊಸ ವೇತನ ಪರಿಷ್ಕರಣಾ ಆಯೋಗವು (PRC) ಏಪ್ರಿಲ್ 1ರ ಬಳಿಕ ಅಳವಡಿಕೆಯಾಗಲಿದೆ. ಬಾಕಿ ಇರುವ ಕಳೆದ 12 ತಿಂಗಳ ಹಣವನ್ನು ನಿವೃತ್ತಿ ಲಾಭಾಂಶಗಳೊಂದಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಶೇ 30ರಷ್ಟು ಫಿಟ್ಮೆಂಟ್ ನೀಡುವ ನಿರ್ಧಾರವನ್ನು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮತ್ತು ಕೇಂದ್ರದ ಸಮಿತಿಯ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ನಾವು 2010ರಲ್ಲಿ 10ನೇ ವೇತನ ಪರಿಷ್ಕರಣಾ ಆಯೋಗದಂತೆ ಶೇ 43ರಷ್ಟು ಫಿಟ್ಮೆಂಟ್ ನೀಡಿದ್ದೇವೆ. ಆದರೆ, ಸದ್ಯ ಕೊವಿಡ್-19 ಕಾರಣದಿಂದ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರಕ್ಕೂ ಆರ್ಥಿಕ ಹೊಡೆತ ಉಂಟಾಗಿದೆ. ಜಾಗತಿಕವಾಗಿ ಎದುರಾದ ಸಂಕಷ್ಟದಿಂದ ಸರ್ಕಾರದ ಕೈ ಕಟ್ಟಿದಂತಾಗಿದ್ದು ಮಾತ್ರವಲ್ಲ, 11ನೇ ವೇತನ ಪರಿಷ್ಕರಣಾ ಆಯೋಗ ಘೋಷಣೆಯಾಗಲೂ ತಡವಾಗಿದೆ ಎಂದು ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಅರ್ಹ ಸಿಬ್ಬಂದಿಗೆ ಬಡ್ತಿ ನೀಡುವ ಕೆಲಸ ಶೇ 80ರಷ್ಟು ಪೂರ್ಣವಾಗಿದೆ. ಉಳಿದವು ಶೀಘ್ರ ಆಗಲಿದೆ. ಹಾಗೆಯೇ, ಶಿಕ್ಷಕರ ವರ್ಗಾವಣೆ ಮತ್ತು ಬಡ್ತಿ, ನೌಕರರ ಬಡ್ತಿಯಿಂದ ತೆರವಾಗಿರುವ ಸ್ಥಾನಗಳಿಗೆ ಕೆಲಸಗಾರರನ್ನು ಭರ್ತಿ ಮಾಡುವ ಕೆಲಸವೂ ಶೀಘ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ನೌಕರರ ಆರೋಗ್ಯ ಯೋಜನೆ (EHS) ಪುನರುಜ್ಜೀವನಗೊಳಿಸುವುದಾಗಿಯೂ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಯೋಜನೆಯ ಉನ್ನತಿಗೆ ಹೊಸ ನಿಯಮಾವಳಿಗಳನ್ನು ರೂಪಿಸಲು ಸಮಿತಿಯನ್ನೂ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಮೊದಲು ಶೇ 15ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು 75 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿತ್ತು. ಆದರೆ, ಈಗ ಈ ವಯಸ್ಸಿನ ಮಿತಿಯನ್ನು 70 ವರ್ಷಕ್ಕೆ ಇಳಿಸಲಾಗಿದೆ. ಜೊತೆಗೆ, ಗ್ರಾಚ್ಯುಟಿಯ ಗರಿಷ್ಠ ಮೊತ್ತವನ್ನು ₹ 16 ಲಕ್ಷದಿಂದ ₹ 12 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಪರಿಷ್ಕೃತ ಡಿಎ ಪಾವತಿ
Published On - 5:19 pm, Mon, 22 March 21