ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪರಮ್ವೀರ್ ಸಿಂಗ್
ಪರಮ್ವೀರ್ ಸಿಂಗ್ ಮಾಡಿರುವ ಆರೋಪದ ಪ್ರಕಾರ ಗೃಹ ಸಚಿವ ಅನಿಲ್ ದೇಶ್ಮುಖ್ ಫೆಬ್ರವರಿಯಲ್ಲಿ ಸ್ವತಂತ ಮನೆಯಲ್ಲಿ ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರತಿ ತಿಂಗಳು 100 ಕೋಟಿ ಹಣವನ್ನು ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ವಸೂಲಿ ಮಾಡುವಂತೆ ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು.
ದೆಹಲಿ: ತಮ್ಮನ್ನು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಗೃಹ ರಕ್ಷಕ ದಳಕ್ಕೆ ವರ್ಗಾಯಿಸಿದ ಕ್ರಮದ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ವೀರ್ ಸಿಂಗ್ ಸುಪ್ರೀಂಕೋರ್ಟ್ನ ಮೆಟ್ಟಿಲೇರಿದ್ದಾರೆ. ಜತೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರ ತನಿಖೆಯನ್ನು ನಿಷ್ಪಕ್ಷಪಾತವಾಗಿ, ಯಾವುದೇ ಹಸ್ತಕ್ಷೇಪ ಇಲ್ಲದೆ ನಡೆಸಬೇಕೆಂದು ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪರಮ್ವೀರ್ ಸಿಂಗ್ ಮಾಡಿರುವ ಆರೋಪದ ಪ್ರಕಾರ ಗೃಹ ಸಚಿವ ಅನಿಲ್ ದೇಶ್ಮುಖ್ ಫೆಬ್ರವರಿಯಲ್ಲಿ ಸ್ವಂತ ಮನೆಯಲ್ಲಿ ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರತಿ ತಿಂಗಳು ₹ 100 ಕೋಟಿ ಹಣವನ್ನು ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ವಸೂಲಿ ಮಾಡುವಂತೆ ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಳೆದ ವಾರ ಬರೆದಿದ್ದ ಪತ್ರದಲ್ಲಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಸಚಿನ್ ವಾಜೆ ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಸೇರಿ ಅನಿಲ್ ದೇಶ್ಮುಖ್ ವಸೂಲಿ ದಂಧೆ ಆರಂಭಿಸಿದ್ದರು. ನಗರದ ಪಬ್ ಮತ್ತು ರೆಸ್ಟೊರೆಂಟ್ಗಳಿಂದ ತಿಂಗಳಿಗೆ ₹ 100 ಕೋಟಿ ವಸೂಲಿ ಮಾಡಿಕೊಡುವಂತೆ ತಾಕೀತು ಮಾಡಿದ್ದರು ಎಂದು ಸಿಂಗ್ ದೂರಿದ್ದರು.
ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಪರಮ್ವೀರ್ ಸಿಂಗ್, ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಆಗಿರುವ ಹಲವು ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ಮುಖ್ ಅವರ ಹಸ್ತಕ್ಷೇಪದ ಬಗ್ಗೆ 2020ರ ಆಗಸ್ಟ್ 24, 25ರಂದು ಮಹಾರಾಷ್ಟ್ರ ಗುಪ್ತಚರ ಇಲಾಖೆಯ ಆಯುಕ್ತರಾದ ರಶ್ಮಿ ಶುಕ್ಲಾ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದರು. ಪೊಲೀಸ್ ಮಹಾನಿರ್ದೇಶಕರು ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ ಗಮನಕ್ಕೆ ತಂದಿದ್ದರು’ ಎಂದು ಪರಮ್ವೀರ್ ಸಿಂಗ್ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.
ಹಲವು ಅಪರಾಧ ಪ್ರಕರಣಗಳ ತನಿಖೆಯಲ್ಲಿಯೂ ಅನಿಲ್ ದೇಶ್ಮುಖ್ ಮಧ್ಯಪ್ರವೇಶಿಸಿದ್ದರು ಎಂದು ಪರಮ್ವೀರ್ ಸಿಂಗ್ ಆರೋಪಿಸಿದ್ದಾರೆ. ‘ಕೆಲ ಅಪರಾಧ ಪ್ರಕರಣಗಳ ತನಿಖೆ ವೇಳೆ ಕೆಳಹಂತದ ಪೊಲೀಸರನ್ನು ಅನಿಲ್ ದೇಶ್ಮುಖ್ ನೇರವಾಗಿ ಸಂಪರ್ಕಿಸುತ್ತಿದ್ದರು. ಸಚಿನ್ ವಾಜೆ ಅಥವಾ ಪಾಟೀಲ್ ಅವರಂಥ ಸಿಬ್ಬಂದಿಯನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಪೊಲೀಸರು ತಮ್ಮಿಷ್ಟದಂತೆ ತನಿಖೆ ನಡೆಸಬೇಕು ಎಂದು ಬಯಸುತ್ತಿದ್ದರು, ಅದಕ್ಕಾಗಿ ಒತ್ತಡ ಹೇರುತ್ತಿದ್ದರು. ಅಧಿಕಾರಿಗಳ ನಿಯೋಜನೆ, ವರ್ಗಾವಣೆಯಂಥ ವಿಚಾರಗಳಲ್ಲಿಯೂ ಅನಗತ್ಯವಾಗಿ ತಲೆಹಾಕುತ್ತಿದ್ದರು. ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ ಹೀಗೆ ನಡೆಯಲು ಅವಕಾಶ ಇರುವುದಿಲ್ಲ. ಅಧಿಕಾರ ದುರುಪಯೋಗದ ಬಗ್ಗೆ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ನಡೆದರೆ ಮಾತ್ರ ಸತ್ಯ ಹೊರಬೀಳಲು ಸಾಧ್ಯ’ ಎಂದು ಪರಮ್ವೀರ್ ಸಿಂಗ್ ತಮ್ಮ ಮನವಿಯಲ್ಲಿ ಹೇಳಿದ್ದಾರೆ.
ಈ ಎಲ್ಲ ವಿಷಯಗಳ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಗಮನ ಸೆಳೆದಿದ್ದೆ. ಈ ಬೆಳವಣಿಗೆಯ ಬೆನ್ನಲ್ಲೇ, ಅಂದರೆ ಮಾರ್ಚ್ 17ರಂದು ನನ್ನನ್ನು ಗೃಹರಕ್ಷಕ ವಿಭಾಗಕ್ಕೆ ವರ್ಗಾಯಿಸಲಾಯಿತು. ಕನಿಷ್ಠ ಸೇವಾವಧಿಯಾದ 2 ವರ್ಷ ಸೇವೆ ಸಲ್ಲಿಸುವ ಮೊದಲೇ ನನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.
ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ನನ್ನನ್ನು ವಿನಾಕಾರಣ ಸಿಲುಕಿಸಿ, ಹರಕೆಯ ಕುರಿ ಮಾಡಲಾಗಿದೆ. ನನ್ನ ವರ್ಗಾವಣೆಯ ಹಿಂದೆ ಆಡಳಿತದ ಉದ್ದೇಶಕ್ಕಿಂತಲೂ ರಾಜಕೀಯ ಉದ್ದೇಶವೇ ಹೆಚ್ಚಾಗಿದೆ. ಹಲವು ಪ್ರಮುಖ ಪ್ರಕರಣಗಳ ತನಿಖೆಯನ್ನು ನಾನು ಮುನ್ನಡೆಸುತ್ತಿದ್ದೆ. ಹಲವು ಅಕ್ರಮಗಳನ್ನು ಪತ್ತೆಹಚ್ಚುವ ದಾರಿಯಲ್ಲಿದ್ದೆ ಎಂದು ಸಿಂಗ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುವ ಯಾವುದೇ ಅಪರಾಧ ಪ್ರಕರಣಗಳ ಸಿಬಿಐ ತನಿಖೆಗೆ ಅವಕಾಶವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಹೇಳಿದೆ. ಹೀಗಾಗಿ ಸುಪ್ರೀಂಕೋರ್ಟ್ನಿಂದ ನಿರ್ದೇಶನ ಕೋರುವುದು ಬಿಟ್ಟು ಬೇರೆ ದಾರಿ ಕಾಣುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ‘100 ಕೋಟಿ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂಬ ಪತ್ರ ಬರೆದದ್ದು ನಾನೇ‘; ಖಚಿತಪಡಿಸಿದ ಪರಮ್ವೀರ್ ಸಿಂಗ್
Published On - 3:34 pm, Mon, 22 March 21