Tv9 Digital Live: ಇನ್ನೆಷ್ಟು ವರ್ಷ ಮೀಸಲಾತಿ ಕೊಡಬೇಕು ಅಂತ ಸರ್ವೋಚ್ಛ ನ್ಯಾಯಾಲಯ ಕೇಳಿದೆ!
ಇನ್ನು ಎಷ್ಟು ವರ್ಷ ಮೀಸಲಾತಿ ಕೊಡಬೇಕೆಂದು ಕಳೆದ ವಾರ ಸರ್ವೋಚ್ಛ ನ್ಯಾಯಲಯ ಪ್ರಶ್ನೆ ಕೇಳಿದ ಕುರಿತಾಗಿ ವಿಷಯ ತಜ್ಞರೊಂದಿಗೆ ಟಿವಿ9 ಡಿಜಿಟಲ್ ಚರ್ಚೆ ನಡೆಸಿದೆ.
ಇನ್ನು ಎಷ್ಟು ವರ್ಷ ಮೀಸಲಾತಿ ಕೊಡಬೇಕೆಂದು ಕಳೆದ ವಾರ ಸರ್ವೋಚ್ಛ ನ್ಯಾಯಲಯ ಪ್ರಶ್ನೆ ಕೇಳಿದೆ. ಈ ವಿಷಯದ ಕುರಿತಾಗಿ ಇಂದು ಸೋಮವಾರ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಯಿತು. ಹಿರಿಯ ವಕೀಲೆ ಅನುಚಂಗಪ್ಪ, ಭಾರತೀಯ ಜನತಾಪಕ್ಷದ ಹಿರಿಯ ನಾಯಕ ಗೋ.ಮಧೂಸೂದನ್ ಹಾಗೂ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಚರ್ಚೆಯಲ್ಲಿ ಪಾಲ್ಗೊಂಡರು. ಆ್ಯಂಕರ್ ಹರಿಪ್ರಸಾದ್ ಚರ್ಚೆ ನಡೆಸಿಕೊಟ್ಟರು.
ಎಲ್ಲಿಯವರೆಗೆ ಮೀಸಲಾತಿ ಎಂಬ ಸುಪ್ರೀಂ ಕೋರ್ಟ್ನ ಮೀಸಲಾತಿ ಪ್ರಶ್ನೆ ಪ್ರಕಾರ ಹಿರಿಯ ವಕೀಲೆ ಅನುಚಂಗಪ್ಪ ಮಾತನಾಡಿ, ಮೀಸಲಾತಿಯ ಬಗ್ಗೆ ಚರ್ಚೆ ಮಾಡಿದಾಗ ನಮ್ಮಲ್ಲಿ ಕೆಲವು ಜಾತಿ ಪಂಗಡಗಳು ಅಥವಾ ಸಾಮಾಜಿಕ ಪಂಗಡಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಮೀಸಲಾತಿ ಎಂಬ ನಿಯಮವನ್ನು ನಿಲ್ಲಿಸಬೇಕು ಎಂದಾದರೆ, ಅವರು ಮುಖ್ಯವಾಹಿನಿಗೆ ಬರಬೇಕು. ನಡೆಯುತ್ತಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿದ್ದರೆ, ಮೀಸಲಾತಿ ಬೇಕೆ ಎಂಬ ಸ್ಥಿತಿಗೆ ನಾವು ಬಂದಿದ್ದೇವೆ ಎಂದರು. ಸಾಮಾಜಿಕ ಕಳಕಳಿಯಿಂದ ಮಾಡಿದ ಮೀಸಲಾತಿಯನ್ನು ರಾಜಕೀಯವಾಗಿ ಪರಿವರ್ತನೆ ಮಾಡಿಕೊಂಡು ಬಿಟ್ಟಿದ್ದಾರೆ. ಈಗ ನಡೆಯುತ್ತಿರುವ ಮೀಸಲಾತಿ ಪಾಲಿಸಿಯನ್ನು ನೋಡುತ್ತಿದ್ದರೆ ಈ ಪಾಲಿಸಿಗಳು ಬೇಡವೇ ಬೇಡ ಅನ್ನುವಂಥ ಪರಿಸ್ಥಿತಿ ಎದುರಾಗಿದೆ. ಮೀಸಲಾತಿ ಜೊತೆಗೆ ಸೋಷಿಯಲ್ ಅವೇರ್ನೆಸ್ ಅನ್ನು ಎಲ್ಲೆಡೆ ಸಾರಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ಮೊದಲು ಸಂವಿಧಾನದ ಸಮಾನತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಹಿನಿಯಲ್ಲಿ ಸಮಾನತೆ ಜೊತೆಗೆ ಹಿಂದುಳಿದವರೂ ಸಮಾನವಾಗಿ ಉಳಿಯಲಿ ಎಂಬುದಾಗಿ ಮೀಸಲಾತಿ ತರುವ ಉದ್ದೇಶವಾಗಿತ್ತು. ಸಮಾನತೆಯ ಮೂಲ ಉದ್ದೇಶವನ್ನು ಸರಿಯಾಗಿ ಅರಿತುಕೊಂಡು ಸಮಾನತೆಯನ್ನು ಹೆಚ್ಚಿಸಲು ಹೋಗಿ ಅಸಮಾನತೆ ಹೆಚ್ಚಾಗುತ್ತಾ ಹೋಗುತ್ತದೆ ಎಂದೆನಿಸುತ್ತಿದೆ. ಮೂಲವಾಗಿ ನಮ್ಮ ಸಂವಿಧಾನದಲ್ಲಿ ಇಟ್ಟಿರುವ ಮಾನದಂಡವೇ ಬೇರೆ, ಇದೀಗ ಬೇರೆ ರೀತಿಯ ಮಾನದಂಡಗಳನ್ನು ಹೊರಡಿಸುತ್ತಿದ್ದಾರೆ. ಎಲ್ಲಾ ರೀತಿಯ ಮಾನದಂಡವನ್ನು ಹೊರಡಿಸುತ್ತಾ ಹೋದರೆ ಜನರಲ್ ಕೆಟೆಗಿರಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ ಎಂದರು.
ಮೀಸಲಾತಿಯಿಂದಾಗಿ ಕೆಲವು ಬುಡಕಟ್ಟು ಜನಾಂಗ ಮತಾಂತರಗೊಳ್ಳುತ್ತಿದ್ದಾರೆ. ಈ ಮೂಲಕ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಯಾವುದೇ ಒಂದು ನಿಯಮ ಮಾಡಿದಾಗ ದುರ್ಬಳಿಕೆ ಮಾಡಿಕೊಳ್ಳ ಬಾರದು. ಉಪಯೋಗಿಸಿಕೊಳ್ಳುವುದಕ್ಕಿಂತ ದುರ್ಬಳಿಕೆ ಮಾಡಿಕೊಳ್ಳದ ರೀತಿಯಲ್ಲಿ ನೋಡಿಕೊಳ್ಳುವ ಅವಶ್ಯಕತೆ ಎದುರಾಗುತ್ತಿದೆ. ನಮ್ಮ ಸಂವಿಧಾನದ ಮೂಲ ಸ್ವರೂಪನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ರಾಜಕೀಯಕ್ಕೆ ಇಳಿದು ಬಿಟ್ಟಿದ್ದಾರೆ. ಇದೀಗ ಎಲ್ಲವೂ ಜಾತಿಯಾಧಾರಿತ ರಾಜಕೀಯವಾಗಿದೆ. ಮೀಸಲಾತಿಯಿಂದ, ಜಾತಿ ಮತ ಎಂಬುದನ್ನು ಮತ್ತೆ ನೆನಪು ಮಾಡಿಕೊಳ್ಳುವ ರೀತಿ ಆಗುತ್ತಿದೆ. ಸಂವಿಧಾನದ ಮೂಲಕ್ಕೆ ವಿರುದ್ಧವಾಗಿದೆ ಇದು ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.
ಗೋ.ಮಧುಸೂದನ್ ಮಾತನಾಡಿ, ಈ ವಿಚಾರಕ್ಕೆ ರಾಜಕಾರಿಣಿಗಳು ಮಾತನಾಡುವುದು ಕಷ್ಟ. ನಮ್ಮ ಅವಕಾಶಗಳು ರಾಜಕಾರಣಗಳಲ್ಲಿ ನಿರ್ಧಾರವಾಗುತ್ತಿರುವುದು ಜಾತಿಯ ಆಧಾರದಲ್ಲಿ. ಈ ಕುರಿತಂತೆ ಒಂದು ಮಾತನಾಡಿದರೆ ಹೆಚ್ಚು, ಒಂದು ಮಾತನಾಡಿದರೆ ಕಡಿಮೆ ಎಂದಾಗುತ್ತದೆ. ನಮ್ಮ ಮೇಲೆ ಹಣೆ ಪಟ್ಟೆಯನ್ನೇ ಕಟ್ಟಿಬಿಡುತ್ತಾರೆ. ಕೋರ್ಟ್ ಏನು ಪ್ರಶ್ನೆ ಕೇಳುತ್ತಿದೆ ಆ ಕುರಿತಂತೆ ಕೋರ್ಟ್ ನಿರ್ಧಾರ ಕೈಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ನನ್ನ ಸ್ವಂತ ಅಭಿಪ್ರಾಯದ ಪ್ರಕಾರ ಮೀಸಲಾತಿ ಬೇಕು. ಕೆಲವೇ ಸಮುದಅಯಗಳಿಗೆ ನೌಕರಿಯ ಮೀಸಲಾತಿ, ವಿದ್ಯಾಭ್ಯಾಸದ ಮೀಸಲಾತಿ ಬೇಕು. ಆದಾಗಲೇ ಮೀಸಲಾತಿ ಪ್ರಯೋಜನ ಪಡೆದವರಿಗೆ ಪುನಃ ಕೊಡುವುದು ಬೇಡ. ಕೋರ್ಟ್ ಮಧ್ಯಪ್ರವೇಶ ಮಾಡಬೇಕರುವ ಅವಶ್ಯಕತೆಯಿದೆ. ಒಂದಿಷ್ಟು ವರ್ಗಗಳಿಗೆ ಮೀಸಲಾತಿಯ ಅವಶ್ಯಕತೆ ಇದೆ. ಹಾಗಾಗಿ ಇದನ್ನು ಮುಂದುವರೆಸಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ಒಂದು ಕಡೆ ಮೀಸಲಾತಿ ಹೆಚ್ಚಳ, ಇನ್ನೊಂದೆಡೆ ಎಲ್ಲಿರವರೆಗೆ ಮೀಸಲಾತಿ ಎಂಬುದು, ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬಂತಾಗಿದೆ. ಎಲ್ಲಿಯವರೆಗೆ ಮೀಸಲಾತಿ ಎಂಬ ಪ್ರಶ್ನೆ ಎಲ್ಲಿಯವರೆಗೆ ಮುಂದೆ ಸಾಗುತ್ತದೆಯೋ, ಮೀಸಲಾತಿ ಶೇಕಡಾ ಪ್ರಮಾಣ ಕೂಡಾ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತಾ ಸಾಗುತ್ತದೆ ಎಂದರು.
ಸರಕಾರಿ ನೌಕರಿ ಸಾಲುತ್ತಿಲ್ಲ ಖಾಸಗಿಯಲ್ಲೂ ರಿಸರ್ವೇಶನ್ ಕೊಡಿ ಎಂಬುದರ ಮಟ್ಟಿಗೆ ಮಾತುಗಳು ಕೇಳಿ ಬರುತ್ತಿದೆ. ಎಜುಕೇಶನ್ನಲ್ಲಿ ಮೀಸಲಾತಿ ಕೊಟ್ಟು, ಅವರಿಗೆ ಬೇಕಾದ ಪಠ್ಯಕ್ರಮವನ್ನು ನೀಡಬೇಕು. ದೊಡ್ಡ ಪೆಡಂಭೂತ ಎಂದರೆ ರಾಜಕೀಯ ಮೀಸಲಾತಿ. ನಮ್ಮ ಜಾತಿಯ ಇಷ್ಟು ಜನ ಮಂತ್ರಿಗಳಾಗಲಿ ಎಂಬ ಮಾತ್ರಕ್ಕೆ ಮೀಸಲಾತಿ ಕೇಳುತ್ತಿದ್ದಾರೆ. ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೋ ಎಂಬ ಗೊಂದಲ ಸೃಷ್ಟಿಯಾಗಿದೆ. ಸಾಮಾಜಿಕ ಸಮಾನತೆ, ಪ್ರೀತಿ ವಿಶ್ವಾಸವೇ ಕಳೆದು ಹೋಗುತ್ತಿದೆ ಅನಿಸುತ್ತಿದೆ ಎಂದರು.
ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮಾತನಾಡಿ, ಎಲ್ಲಿಯವರೆಗೆ ಮೀಸಲಾತಿ ಬೇಕು ಎಂಬುದಕ್ಕೆ ನೇರವಾದ ಉತ್ತರ ಇಲ್ಲ. ಎಲ್ಲಿಯವರೆಗೆ ಈ ಪರಿಸ್ಥಿತಿ ಇರುತ್ತದೆಯೋ ಅಲ್ಲಿಯವರೆಗೆ ಈ ಮೀಸಲಾತಿ ಮಾತು ಇರುತ್ತದೆ. ಸಮಾಜದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಯಾರೂ ಕೂಡಾ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಎಷ್ಟು ವರ್ಷ ಈ ಮೀಸಲಾತಿ ಇರುತ್ತದೆ. ಯಾವ ವರ್ಗಕ್ಕೆ ಮೀಸಲಾತಿ ಕೊಡಬೇಕು ಬೇಡ ಎಂಬುದರ ಕುರಿತಾಗಿ ಒಂದು ಪರಿಮಿತಿಯಲ್ಲಿ ಹೇಳುವುದು ಕಷ್ಟ ಎಂದು ಹೇಳಿದರು.
ಇದನ್ನೂ ಓದಿ: TV9 Digital Live | ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೊರೊನಾ; ತಜ್ಞರ ಸಲಹೆ ಏನು?
‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್
Published On - 9:58 pm, Mon, 22 March 21