- Kannada News Photo gallery Cricket photos Pat Cummins' Lord's Masterclass: 6 Wickets, South Africa's Collapse
WTC 2025 final: 6 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಪ್ಯಾಟ್ ಕಮ್ಮಿನ್ಸ್
Pat Cummins' Lord's Masterclass: ಲಾರ್ಡ್ಸ್‌ನಲ್ಲಿ ನಡೆದ WTC ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲೌಟ್ ಆಯಿತು. ಕಮ್ಮಿನ್ಸ್ ಒಂದೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದು 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಇದು ಲಾರ್ಡ್ಸ್‌ನಲ್ಲಿ ವಿದೇಶಿ ನಾಯಕನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೂ ಆಗಿದೆ.
Updated on: Jun 12, 2025 | 9:16 PM

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಆಫ್ರಿಕಾ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ದಾಳಿಯೇ ಪ್ರಮುಖ ಕಾರಣವಾಗಿತ್ತು. ಕಮ್ಮಿನ್ಸ್ ಒಂದೇ ಇನ್ನಿಂಗ್ಸ್‌ನಲ್ಲಿ ಪ್ರಮುಖ 6 ವಿಕೆಟ್ ಕಬಳಿಸಿದರು.

ಈ ಮೂಲಕ ಕಮ್ಮಿನ್ಸ್ 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡಲಾಗದ ದಾಖಲೆಯೊಂದನ್ನು ನಿರ್ಮಿಸಿದರು. ಮೊದಲ ದಿನದಾಟದಲ್ಲಿ ವಿಯಾನ್ ಮುಲ್ಡರ್ ವಿಕೆಟ್ ಉರುಳಿಸಿದ್ದ ಕಮ್ಮಿನ್ಸ್, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರ ವಿಕೆಟ್ ಪಡೆಯುವ ಮೂಲಕ ಪ್ಯಾಟ್ ಕಮ್ಮಿನ್ಸ್ ತಮ್ಮ ವಿಕೆಟ್ ಬೇಟೆಯನ್ನು ಆರಂಭಿಸಿದರು.

ನಂತರ ಎರಡನೇ ಸೆಷನ್‌ನಲ್ಲಿ ಕಮ್ಮಿನ್ಸ್ ಕೈಲ್ ವೆರ್ರೆನ್ ಮತ್ತು ಮಾರ್ಕೊ ಯಾನ್ಸೆನ್ ಅವರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಆ ನಂತರ 45 ರನ್ ಬಾರಿಸಿದ್ದ ವಿಯಾನ್ ಮುಲ್ಡರ್ ಅವರನ್ನು ಔಟ್ ಮಾಡುವ ಮೂಲಕ ಇನ್ನಿಂಗ್ಸ್‌ನಲ್ಲಿ ತಮ್ಮ 5 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ 14 ನೇ ಬಾರಿಗೆ ಒಂದು ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಅಂತಿಮವಾಗಿ ಕಮ್ಮಿನ್ಸ್ ಇನ್ನಿಂಗ್ಸ್‌ನ ಕೊನೆಯ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದರು.

ಕೊನೆಯದಾಗಿ ಕಗಿಸೊ ರಬಾಡ ಅವರ ವಿಕೆಟ್ ಪಡೆದ ಕಮ್ಮಿನ್ಸ್ಗೆ ಈ ಇನ್ನಿಂಗ್ಸ್‌ನಲ್ಲಿ ಇದು ಆರನೇ ವಿಕೆಟ್ ಆಗಿತ್ತು. ಇದರೊಂದಿಗೆ, ಅವರು 68 ಟೆಸ್ಟ್ ಪಂದ್ಯಗಳ 126 ಇನ್ನಿಂಗ್ಸ್‌ಗಳಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

ಕಮ್ಮಿನ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 18.1 ಓವರ್‌ಗಳನ್ನು ಬೌಲ್ ಮಾಡಿ ಕೇವಲ 28 ರನ್ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅದರಲ್ಲೂ ಲಾರ್ಡ್ಸ್ ಮೈದಾನದಲ್ಲಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದ ಮೊದಲ ವಿದೇಶಿ ನಾಯಕ ಎಂಬ ದಾಖಲೆ ಬರೆದರು.

ಇದಕ್ಕೂ ಮೊದಲು, ಲಾರ್ಡ್ಸ್‌ನಲ್ಲಿ ವಿದೇಶಿ ನಾಯಕನ ಅತ್ಯುತ್ತಮ ಪ್ರದರ್ಶನದ ದಾಖಲೆಯನ್ನು ನ್ಯೂಜಿಲೆಂಡ್ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಹೊಂದಿದ್ದರು. ಅವರು 69 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದಿದ್ದರು. ಇದು ಮಾತ್ರವಲ್ಲದೆ, ಲಾರ್ಡ್ಸ್‌ನಲ್ಲಿ ಯಾವುದೇ ನಾಯಕನ ಅತ್ಯುತ್ತಮ ಪ್ರದರ್ಶನದ ದಾಖಲೆಯೂ ಆಯಿತು. ಈ ಮೂಲಕ ಮಾಜಿ ಇಂಗ್ಲೆಂಡ್ ನಾಯಕ ಬಾಬ್ ವಿಲ್ಲೀಸ್ ಅವರ ದಾಖಲೆಯನ್ನು ಮುರಿದರು. 1992 ರಲ್ಲಿ ಭಾರತ ವಿರುದ್ಧದ ಇನ್ನಿಂಗ್ಸ್‌ನಲ್ಲಿ ವಿಲ್ಲೀಸ್ 101 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು.









