ಊಟಕ್ಕೆ ಕುಳಿತ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ; ಹಾಸ್ಟೆಲ್ ಈಗ ಹೀಗಿದೆ ನೋಡಿ
ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ಟೇಕ್ ಆಫ್ ಆದ ಐದೇ ನಿಮಿಷದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಈ ವಿಮಾನ ಏರ್ಪೋರ್ಟ್ ಪಕ್ಕದಲ್ಲಿದ್ದ ಡಾಕ್ಟರ್ ಹಾಸ್ಟೆಲ್ಗೆ ಡಿಕ್ಕಿ ಹೊಡೆದು, ಅರ್ಧ ನೇತಾಡುತ್ತಿತ್ತು. ಹೀಗಾಗಿ, ಆ ಹಾಸ್ಟೆಲ್ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಅಹಮದಾಬಾದ್, ಜೂನ್ 12: ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳಲು ಟೇಕ್ ಆಫ್ ಆದ ಏರ್ ಇಂಡಿಯಾ (Air India Plane Crash) ವಿಮಾನ ಪಕ್ಕದಲ್ಲಿದ್ದ ಡಾಕ್ಟರ್ ಹಾಸ್ಟೆಲ್ನೊಳಗೆ ನುಗ್ಗಿತ್ತು. ಊಟದ ಸಮಯದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಅಹಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಿಂದ ಭಯಾನಕ ದೃಶ್ಯಗಳನ್ನು ಇತರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಮಧ್ಯಾಹ್ನ ಒಂದೂವರೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದರಿಂದ ಹಾಸ್ಟೆಲ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು, ವೈದ್ಯರು ಊಟಕ್ಕೆ ಕುಳಿತಿದ್ದರು. ಆದರೆ, ಊಟಕ್ಕೆ ಕುಳಿತ ಮೂವರು ವಿದ್ಯಾರ್ಥಿಗಳು ಇದೀಗ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 50ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ವೈದ್ಯರಾಗುವ ಕನಸು ಹೊತ್ತು ಬಂದಿದ್ದ 50ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಈ ವಿಮಾನ ಅಪಘಾತದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಡೈನಿಂಗ್ ಹಾಲ್ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಅನ್ನ, ತಟ್ಟೆಗಳು, ಅಡುಗೆಮನೆಯಲ್ಲಿ ಚೆಲ್ಲಿದ ಊಟ, ತುಂಡಾಗಿ ಬಿದ್ದ ಟೇಬಲ್ಗಳು ಹೀಗೆ ಆ ಹಾಸ್ಟೆಲ್ ಈಗ ಸಂಪೂರ್ಣ ಧ್ವಂಸವಾಗಿದೆ. ಈ ಹೃದಯವಿದ್ರಾವಕ ವಿಡಿಯೋ ನೋಡಿದವರು ಆ ಮಕ್ಕಳು ಗುಣಮುಖರಾಗಿ ವಾಪಾಸ್ ಬರಲಿ, ಮಾಡದ ತಪ್ಪಿಗೆ ಅಮಾಯಕ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸದಂತಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈಗಾಗಲೇ ಏರ್ ಇಂಡಿಯಾ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ಉಳಿದ 241 ಜನರೂ ಸಾವನ್ನಪ್ಪಿರುವುದು ಬಹುತೇಕ ಖಚಿತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ