Ahmedabad Plane Crash: ವಿಮಾನ ಅಪಘಾತ; ಪವಾಡದಂತೆ ಜೀವ ಉಳಿಸಿಕೊಂಡ ಒಬ್ಬ ವ್ಯಕ್ತಿ!
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಒಬ್ಬ ಬ್ರಿಟಿಷ್ ಪ್ರಜೆ ಪವಾಡಸದೃಶವಾಗಿ ಬದುಕುಳಿದಿದ್ದು, ವಿಮಾನದಲ್ಲಿದ್ದ ಇತರ 241 ಜನರು ಸಾವನ್ನಪ್ಪಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಇಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ 40 ವರ್ಷದ ವ್ಯಕ್ತಿಯ ಹೆಸರು ವಿಶ್ವಾಸ್ ಕುಮಾರ್ ರಮೇಶ್.
ಅಹಮದಾಬಾದ್, ಜೂನ್ 12: ಗುಜರಾತ್ನ (Gujarat Plane Crash) ಏರ್ ಇಂಡಿಯಾ ವಿಮಾನ (Air India Plane) ಪತನವಾದ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಪವಾಡಸದೃಶವಾಗಿ ಒಬ್ಬ ವ್ಯಕ್ತಿ ವಿಮಾನದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 241 ಪ್ರಯಾಣಿಕರು ಕೂಡ ಸಾವನ್ನಪ್ಪಿದ್ದು, ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಎಂಬ ವ್ಯಕ್ತಿ ಮಾತ್ರ ಸಾವಿನ ಕದ ತಟ್ಟಿ ಬಂದಿದ್ದಾರೆ.
ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ಕೆಲವು ದಿನಗಳ ಕಾಲ ಭಾರತದಲ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡುತ್ತಿದ್ದರು ಮತ್ತು ಅವರ ಸಹೋದರ ಅಜಯ್ ಕುಮಾರ್ ರಮೇಶ್ (45) ಅವರೊಂದಿಗೆ ಯುಕೆಗೆ ಹಿಂತಿರುಗುತ್ತಿದ್ದರು. “ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ದೊಡ್ಡ ಶಬ್ದವಾಯಿತು ಮತ್ತು ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲವೂ ಕ್ಷಣಮಾತ್ರದಲ್ಲಿ ಸಂಭವಿಸಿತು. ಏನಾಯಿತೆಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನನ್ನ ಸುತ್ತಲೂ ಶವಗಳಿದ್ದವು. ವಿಮಾನದ ತುಂಡುಗಳ ಮೂಲಕ ಹೊರಗಿನ ಪ್ರದೇಶ ನನಗೆ ಕಾಣುತ್ತಿತ್ತು. ನಾನು ಧೈರ್ಯ ಮಾಡಿ ಹೊರಗೆ ಹಾರಿದೆ” ಎಂದು ವಿಶ್ವಾಸ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ