ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವ ಪ್ರಶ್ನಿಸಿದ ಸಂಸದ ಲಹರ್ ಸಿಂಗ್ ಸಿರೋಯಾ
ಬಿಜೆಪಿ ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ನಿರ್ಧಾರಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಜಾತಿ ಜನಗಣತಿ, ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಮುಡಾ ನಿವೇಶನ ವಿವಾದಗಳಲ್ಲಿ ಸಿಎಂ ಅವರ ನಿಷ್ಕ್ರಿಯತೆಯನ್ನು ಅವರು ಟೀಕಿಸಿದ್ದಾರೆ. ಲಹರ್ ಸಿಂಗ್ ಅವರು ಸಿಎಂ ಅವರ ಜವಾಬ್ದಾರಿಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ ಮತ್ತು ಇದರಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಾಯಕತ್ವ ಮತ್ತು ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ (Lahar Singh Siroya) ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೇ, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮಾಡಿದ ಅವರು, “ಪ್ರಸ್ತಾವಿತ ಜಾತಿ ಜನಗಣತಿ ನಡೆಸುವ ನಿರ್ಧಾರದ ಜವಾಬ್ದಾರಿಯನ್ನು ನಿರಾಕರಿಸಿ, ಅದನ್ನು ಕಾಂಗ್ರೆಸ್ ಹೈಕಮಾಂಡ್ ತಲೆಗೆ ಕಟ್ಟಿರುವುದು, ಆರ್‌ಸಿಬಿ ತಂಡದ ಸನ್ಮಾನ ಸಮಾರಂಭದಲ್ಲಿ ನಡೆದ ಕಾಲ್ತುಳಿತ ಪ್ರಕರಣ, ಮುಖ್ಯಮಂತ್ರಿಗಳ ಶ್ರೀಮತಿಯವರಿಗೆ ಸಂಬಂಧಿಸಿದ ಭಾರಿ ಮೌಲ್ಯದ ಮುಡಾ ನಿವೇಶನಗಳನ್ನು ಹಿಂದಿರುಗಿಸಿದ ಪ್ರಕರಣ, ಮುಖ್ಯಮಂತ್ರಿಗಳ ಆಪ್ತರಾಗಿದ್ದ ಎಲ್.ಕೆ.ಅತೀಕ್ ಅವರ ಹಠಾತ್ ನಿರ್ಗಮನದಂತಹ ಪ್ರಮುಖ ವಿಚಾರಗಳ ಬಗ್ಗೆ ತಮಗೆ ತಿಳಿದಿಲ್ಲ, ಮಾಹಿತಿಯಿಲ್ಲ, ತಾವು ನಿರ್ಧಾರ ತೆಗೆದುಕೊಂಡದ್ದಲ್ಲ ಎಂದು ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮುಖ್ಯಮಂತ್ರಿಗಳ ನಿಲುವುಗಳು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಲಹರ್ ಸಿಂಗ್ ಹೇಳಿದ್ದಾರೆ.
Chief Minister @Siddaramaiah has said that to conduct a fresh caste census in the state was the Congress high command’s decision and not his. Earlier, he said he did not organise the RCB felicitation at the cricket stadium, which led to a deadly stampede. Even before that he said… pic.twitter.com/rYsKM9seZZ
— Lahar Singh Siroya (@LaharSingh_MP) June 12, 2025
ಇದನ್ನೂ ಓದಿ: ಜಾತಿ ಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ
“ಕೇಂದ್ರ ಸರ್ಕಾರ ಈಗಾಗಲೇ ಜಾತಿ ಸಮೀಕ್ಷೆಯನ್ನು ಘೋಷಿಸಿರುವಾಗ, ಕಾಂಗ್ರೆಸ್ ಸರ್ಕಾರವು 200 ಕೋಟಿ ರೂ. ವೆಚ್ಚದಲ್ಲಿ ಜನರ ಹಣವನ್ನು ಪೋಲು ಮಾಡಲು ಮತ್ತೊಂದು ಸಮೀಕ್ಷೆಗೆ ಏಕೆ ಒತ್ತಾಯಿಸುತ್ತಿದೆ? ಇದು ರಾಜಕೀಯ ಕುತಂತ್ರವಲ್ಲವೇ? ಮುಖ್ಯಮಂತ್ರಿಗೆ ನಿಜವಾಗಿ ಯಾವ ಮಾಹಿತಿ ಇದೆ, ಯಾವುದಿಲ್ಲ? ಅವರು ನಿಜವಾಗಿ ಯಾವುದನ್ನು ನಿರ್ಧರಿಸುತ್ತಾರೆ? ಯಾವುದನ್ನು ನಿರ್ಧರಿಸುವುದಿಲ್ಲ ಎಂದು ಕೇಳುವ ಸಮಯ ಬಂದಿದೆಯೇ?” ಎಂದು ಲಹರ್ ಸಿಂಗ್ ಕುಟುವಾಗಿ ಪ್ರಶ್ನಿಸಿದ್ದಾರೆ.




